ADVERTISEMENT

ಕಟೀಲು: 7ನೇ ಮೇಳದ ಪದಾರ್ಪಣೆ 16ರಂದು

ಬಜಪೆ ಪೇಟೆಯಿಂದ 15ರಂದು ಸಂಜೆ ಮೆರವಣಿಗೆ; ಎಕ್ಕಾರ್‌ನಿಂದ ದೇವಸ್ಥಾನದ ವರೆಗೆ ಕಾಲ್ನಡಿಗೆ; ರಾತ್ರಿ ಬಯಲಾಟ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 3:11 IST
Last Updated 13 ನವೆಂಬರ್ 2025, 3:11 IST
ಪತ್ರಿಕಾಗೋಷ್ಠಿಯಲ್ಲಿ ಹರಿನಾರಾಯಣ ಆಸ್ರಣ್ಣ ಮಾತನಾಡಿದರು. ಸನತ್ ಕುಮಾರ್ ಶೆಟ್ಟಿ, ವಾಸುದೇವ ಆಸ್ರಣ್ಣ, ಲಕ್ಷ್ಮಿನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಬಿಪಿನ್ ಚಂದ್ರ ಶೆಟ್ಟಿ ಮತ್ತು ದೇವಿಪ್ರಸಾದ್ ಶೆಟ್ಟಿ ಪಾಲ್ಗೊಂಡಿದ್ದರು 
ಪತ್ರಿಕಾಗೋಷ್ಠಿಯಲ್ಲಿ ಹರಿನಾರಾಯಣ ಆಸ್ರಣ್ಣ ಮಾತನಾಡಿದರು. ಸನತ್ ಕುಮಾರ್ ಶೆಟ್ಟಿ, ವಾಸುದೇವ ಆಸ್ರಣ್ಣ, ಲಕ್ಷ್ಮಿನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಬಿಪಿನ್ ಚಂದ್ರ ಶೆಟ್ಟಿ ಮತ್ತು ದೇವಿಪ್ರಸಾದ್ ಶೆಟ್ಟಿ ಪಾಲ್ಗೊಂಡಿದ್ದರು     

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಈ ಋತುವಿನ ತಿರುಗಾಟದ ಆರಂಭೋತ್ಸವ ಮತ್ತು 7ನೇ ಮೇಳದ ಪದಾರ್ಪಣೆ ನ.16ರಂದು ದೇವಸ್ಥಾನದ ಆವರಣದಲ್ಲಿ ನಡೆಯಲಿದೆ. ಇದರ ಅಂಗವಾಗಿ 15ರಂದು ಮೆರವಣಿಗೆ ನಡೆಯಲಿದೆ.

ಏಳೂ ಮೇಳಗಳ ದೇವರು, ತೊಟ್ಟಿಲು, ಚಿನ್ನ, ಬೆಳ್ಳಿ ಆಯುಧಗಳು, ಆಭರಣ ಇತ್ಯಾದಿಗಳ ಮೆರವಣಿಗೆ 15ರಂದು ಮಧ್ಯಾಹ್ನ 3 ಗಂಟೆಗೆ ಬಜಪೆ ಪೇಟೆಯಿಂದ ಆರಂಭಗೊಳ್ಳಲಿದೆ. ಎಕ್ಕಾರು ವರೆಗೆ ವಾಹನದಲ್ಲಿ ಸಾಗುವ ಮೆರವಣಿಗೆ ನಂತರ ಕಾಲ್ನಡಿಗೆಯ ಮೂಲಕ ಮುಂದುವರಿಯಲಿದೆ ಎಂದು ದೇವಸ್ಥಾನದ ಆನುವಂಶಿಕ ಅರ್ಚಕ ಹರಿನಾರಾಯಣ ಆಸ್ರಣ್ಣ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ಸ್ತಬ್ಧಚಿತ್ರಗಳು, ಆಟದ ಪರಿಕರಗಳೊಂದಿಗೆ ವೇದಘೋಷ, 3 ಸಾವಿರ ಮಂದಿಯ ಭಜನೆ, ಚೆಂಡೆ, ಡೋಲು, ಕೊಂಬು, ಸ್ಯಾಕ್ಸೊಫೋನ್‌, ನಾಗಸ್ವರ, ಬೇತಾಳ, ಕೀಲು ಕುದುರೆ, ಹುಲಿವೇಷ ಇತ್ಯಾದಿಗಳು ಇರುವ ಮೆರವಣಿಗೆಯಲ್ಲಿ ಸುಮಾರು 20 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಮೆರವಣಿಗೆಯ ನಂತರ ಪರಿಕರಗಳನ್ನು ದೇವರಿಗೆ ಸಮರ್ಪಿಸಲಾಗುವುದು ಎಂದು ಅವರು ತಿಳಿಸಿದರು.

ADVERTISEMENT

14ರಂದು ಹೋಮ, ಯಾಗಾದಿಗಳು ನಡೆಯಲಿದ್ದು 16ರಂದು ಬೆಳಿಗ್ಗೆ 10.30ಕ್ಕೆ ‍‍ಪೂಜಾ ಕಿರೀಟಗಳ ಸ್ಥಾಪನೆ, ಮಧ್ಯಾಹ್ನ 3 ಗಂಟೆಗೆ ತಾಳಮದ್ದಲೆ ನಡೆಯಲಿದ್ದು 5 ಗಂಟೆಗೆ ಗೆಜ್ಜೆ ಕಟ್ಟಲಾಗುವುದು. 6 ಗಂಟೆಗೆ 7ನೇ ಮೇಳದ ಉದ್ಘಾಟನೆ, 8.30ಕ್ಕೆ ಮೇಳಗಳ ದೇವರ ಪೂಜೆ ಮತ್ತು ಪಾಂಡವಾಶ್ವಮೇಧ ಬಯಲಾಟ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಉಡುಪಿ ಪಲಿಮಾರು ಮಠದ ವಿದ್ಯಾಧೀಶತೀರ್ಥ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದು ಮೇಳಗಳ ತಿರುಗಾಟಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡುವರು. ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟಿಸುವರು. ಸಚಿವರಾದ ಶಿವರಾಜ ತಂಗಡಗಿ, ದಿನೇಶ್‌ ಗುಂಡೂರಾವ್‌, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರು ಭಾಗವಹಿಸುವರು ಎಂದು ಅವರು ವಿವರಿಸಿದರು.

ಆನುವಂಶಿಕ ಅರ್ಚಕರಾದ ವಾಸುದೇವ ಆಸ್ರಣ್ಣ, ಲಕ್ಷ್ಮಿನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ್ ಆಸ್ರಣ್ಣ, ಆಡಳಿತ ಸಮಿತಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ, ಕೊಡೆತ್ತುರುಗುತ್ತು ಕಿಶೋರ್ ಶೆಟ್ಟಿ, ಪ್ರವೀಣ್ ದಾಸ್ ಭಂಡಾರಿ, ಬಿಪಿನ್ ಚಂದ್ರ ಶೆಟ್ಟಿ, ಉಮೇಶ್ ಎನ್.ಶೆಟ್ಟಿ ಮತ್ತು ಕಟೀಲು ಯಕ್ಷಗಾನ ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು. 

ಸನತ್ ಕುಮಾರ್ ಶೆಟ್ಟಿ, ವಾಸುದೇವ ಆಸ್ರಣ್ಣ, ಲಕ್ಷ್ಮಿನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಬಿಪಿನ್ ಚಂದ್ರ ಶೆಟ್ಟಿ ಮತ್ತು ದೇವಿಪ್ರಸಾದ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.