ADVERTISEMENT

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಡಾಕ್ಟರ್‌ಗೆ 7 ವರ್ಷ ಕಠಿಣ ಸಜೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 11:36 IST
Last Updated 31 ಆಗಸ್ಟ್ 2018, 11:36 IST

ಕಾಸರಗೋಡು : ಟ್ಯೂಶನ್ ಕೇಂದ್ರಕ್ಕೆ ಬರುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಅಲೋಪತಿ ಡಾಕ್ಟರ್‌ಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರು 7 ವರ್ಷಗಳ ಕಠಿಣ ಸಜೆ ಹಾಗೂ ₹50 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.

ಕಾಞಂಗಾಡಿನ ಟ್ಯೂಶನ್ ಕೇಂದ್ರವೊಂದರ ಮಾಲೀಕ, ಶಿಕ್ಷಕ, ಡಾಕ್ಟರ್ ಕೂಡಾ ಆಗಿರುವ ಕಾಞಂಗಾಡು ಬಲ್ಲಾ ಕಡಪ್ಪುರ ನಿವಾಸಿ ಮುಹಮ್ಮದ್ ಆಷ್ಕರ್ (28) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಪ್ರಕರಣದ ಇನ್ನೊಬ್ಬ ಆರೋಪಿ ಟ್ಯೂಶನ್ ಕೇಂದ್ರದಲ್ಲಿ ನೌಕರೆಯಾದ ಸೌಮ್ಯ (29) ನನ್ನು ಖುಲಾಸೆ ಮಾಡಲಾಗಿದೆ.

ದಂಡ ಪಾವತಿಸದೇ ಇದ್ದರೆ ಹೆಚ್ಚುವರಿ ಒಂದು ವರ್ಷ ಶಿಕ್ಷೆ ಅನುಭವಿಸಬೇಕು. ಜುಲ್ಮನೆಯ ಮೊತ್ತವನ್ನು ನೊಂದ ವಿದ್ಯಾರ್ಥಿನಿಗೆ ನೀಡಲು ನ್ಯಾಯಾಧೀಶ ಪಿ.ಎಸ್. ಶಶಿಕುಮಾರ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

2012 ಜೂನ್ ತಿಂಗಳಲ್ಲಿ ಅಪರಾಧ ಪ್ರಕರಣ ನಡೆದಿತ್ತು. ಟ್ಯೂಶನ್ ಕೇಂದ್ರದಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿಯ ದೂರಿನ ಆಧಾರದಲ್ಲಿ 2013 ಫೆಬ್ರುವರಿಯಲ್ಲಿ ಆರೋಪಿಯ ವಿರುದ್ಧ ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿದ್ದರು.

ADVERTISEMENT

ಆಷ್ಕರ್ ಟ್ಯೂಶನ್ ಸೆಂಟರ್ ಗೆ ಬರುತ್ತಿದ್ದ 13 ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಎಂಬ ಆರೋಪವಿದೆ. ವಿದ್ಯಾರ್ಥಿನಿಯರ ಪೋಷಕರು ಈ ಬಗ್ಗೆ ಮಾಹಿತಿ ನೀಡಿದ್ದರೂ, ಪ್ರಕರಣ ರದ್ದಾಗಿತ್ತು. ಆದರೆ ಒಬ್ಬ ಹುಡುಗಿ ಮಾತ್ರ ದೃಢವಾಗಿದ್ದು, ಆತನ ವಿರುದ್ಧ ನ್ಯಾಯಾಲಯ ಹತ್ತಿದ್ದಳು .ಆಕೆಯ ವಿರುದ್ಧ ಆರೋಪಿ ಅಪಪ್ರಚಾರಗಳ ಪೋಸ್ಟರುಗಳನ್ನು ಅಂಟಿಸಿದರೂ ಆಕೆ ಜಗ್ಗಲಿಲ್ಲ. ಈ ಆರೋಪದಲ್ಲಿ ಆಷ್ಕರ್ ನ ಮೇಲೆ ಬೇರೊಂದು ಪ್ರಕರಣ ದಾಖಲಾಗಿದ್ದು ವಿಚಾರಣೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.