ಮಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಆರೋಪ ಪ್ರಕರಣದ ಸಂಬಂಧ ಎಸ್‌ಐಟಿ ಶೋಧಕಾರ್ಯ ಮುಂದುವರಿಸಿದ್ದು, ಸೋಮವಾರ ನೇತ್ರಾವತಿ ಸ್ನಾನಘಟ್ಟದ ಬಳಿಯ ಕಾಡಿನಲ್ಲಿ ಮೃತದೇಹದ ಅವಶೇಷಗಳು ಪತ್ತೆಯಾಗಿವೆ.
‘ಪ್ರಕರಣದ ಸಾಕ್ಷಿ ದೂರುದಾರ ತೋರಿಸಿದ್ದ 11ನೇ ಜಾಗಕ್ಕಿಂತ ಸುಮಾರು 100 ಮೀಟರ್ ದೂರದಲ್ಲಿ ನೆಲದ ಮೇಲೆ ಅವಶೇಷಗಳು ಸಿಕ್ಕಿವೆ. ಆ ಜಾಗವನ್ನೂ ಆತನೇ ತೋರಿಸಿದ್ದ. ಒಂದು ತಲೆಬುರುಡೆ, ಬೆನ್ನು ಮೂಳೆ ಸೇರಿ ಸುಮಾರು 100 ಮೂಳೆ ಸಿಕ್ಕಿವೆ' ಎಂದು ಎಸ್ಐಟಿ ಮೂಲಗಳು 'ಪ್ರಜಾವಾಣಿ'ಗೆ ತಿಳಿಸಿವೆ.
'ಉದ್ದನೆಯ ಬೆನ್ನುಮೂಳೆಯೂ ಸ್ಥಳದಲ್ಲಿತ್ತು. ತಜ್ಞರ ತಂಡವು ಅದನ್ನು ವೈಜ್ಞಾನಿಕವಾಗಿ ಸಂಗ್ರಹ ಮಾಡಿದೆ. ಈ ಸ್ಥಳದಲ್ಲೇ ಗಂಟು ಹಾಕಿರುವ ಸೀರೆ ಸಹ ಸಿಕ್ಕಿದೆ' ಎಂದು ಎಸ್ಐಟಿ ಮೂಲಗಳು ಹೇಳಿವೆ.
ಎಸ್ಐಟಿಯವರು ಬೆಳಿಗ್ಗೆ 11.30 ಗಂಟೆ ಸುಮಾರಿಗೆ ಕಾಡು ಪ್ರವೇಶಿಸಿದ್ದರು. ಇಷ್ಟುದಿನ ಮಧ್ಯಾಹ್ನ 2 ಗಂಟೆ ಸುಮಾರಿಗೆ ಊಟದ ವಿರಾಮ ನೀಡಲಾಗುತ್ತಿತ್ತು. ಸೋಮವಾರ ಊಟದ ವಿರಾಮವಿಲ್ಲದೆ ಶೋಧ ಮುಂದುವರಿಯಿತು. ಎಸ್ಐಟಿಯವರು ಕಾಡಿನಿಂದ ಹೊರಗೆ ಬರುವಾಗ ಸಂಜೆ 6.15 ದಾಟಿತ್ತು.
ಸಾಕ್ಷಿ ದೂರುದಾರ ಧರ್ಮಸ್ಥಳದ ಸ್ನಾನಘಟ್ಟದ ಆಸುಪಾಸಿನಲ್ಲಿ 13 ಜಾಗ ತೋರಿಸಿ, ಅಲ್ಲಿ ಶವಗಳನ್ನು ಹೂತಿದ್ದಾಗಿ ತಿಳಿಸಿದ್ದ. ಆತ ತೋರಿಸಿದ್ದ 10 ಜಾಗಗಳನ್ನು ಇಷ್ಟು ದಿನ ಸರದಿಯಂತೆ ಅಗೆಯಲಾಗಿತ್ತು. ಅದರ ಅನ್ವಯ ದೂರುದಾರ ತೋರಿಸಿರುವ 11ನೇ ಜಾಗವನ್ನು ಸೋಮವಾರ ಅಗೆಯಬೇಕಿತ್ತು.
ಅಧಿಕಾರಿಗಳ ತಂಡ ಕಾಡಿನೊಳಗೆ ಪ್ರವೇಶಿಸಿದ ಸ್ವಲ್ಪ ಹೊತ್ತಿನಲ್ಲೆ ಎರಡು ಚೀಲ ಉಪ್ಪು ಒಯ್ದಲಾಯಿತು. ಕಮಾಂಡೊ ಪಡೆಯ ನಾಲ್ವರು ಭದ್ರತಾ ಸಿಬ್ಬಂದಿಯನ್ನು ಎಸ್‌ಐಟಿ ಅಧಿಕಾರಿಗಳು ಮೃತದೇಹದ ಅವಶೇಷ ಪತ್ತೆಯಾದ ಸ್ಥಳಕ್ಕೆ ಕರೆಸಿಕೊಂಡರು.
ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಎಸ್ಐಟಿಯ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಸ್ಥಳದಲ್ಲಿದ್ದರು.
ಆರನೇ ಜಾಗದಲ್ಲಿ ಗಂಡಸಿನ ಮೃತದೇಹದ ಅವಶೇಷ ಗುರುವಾರ ಪತ್ತೆಯಾಗಿತ್ತು. ಉಳಿದ ಒಂಬತ್ತು ಜಾಗಗಳಲ್ಲಿ ಮೃತದೇಹಗಳನ್ನು ಹೂತ ಯಾವುದೇ ಕುರುಹು ಸಿಕ್ಕಿರಲಿಲ್ಲ.
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂಬ ದೂರಿನ ನಂತರ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಸಂಸತ್ತಿನಲ್ಲಿ ಪ್ರಸ್ತಾಪ ಮಾಡದ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನಡೆ ಬೇಸರ ಮೂಡಿಸಿದೆ.ಅಬ್ದುಲ್ ಜಲೀಲ್ ಕೆ. ಅಧ್ಯಕ್ಷ ಎಸ್‌ಡಿಪಿಐ ಮಂಗಳೂರು ನಗರ ಘಟಕ
ಠಾಣೆಗೆ ದೂರು ನೀಡಿದ ಜಯಂತ್
ಮಂಗಳೂರು: ‘ಧರ್ಮಸ್ಥಳ ಗ್ರಾಮದಲ್ಲಿ ಸುಮಾರು 15 ವರ್ಷಗಳ ಹಿಂದೆ ಅಂದಾಜು 13 ರಿಂದ 15 ವರ್ಷದ ಬಾಲಕಿ ಶಂಕಾಸ್ಪದವಾಗಿ ಸಾವಿಗೀಡಾಗಿದ್ದಳು. ಮರಣೋತ್ತರ ಪರೀಕ್ಷೆ ನಡೆಸದೇ ಶವ ಹೂತು ಹಾಕಿದ್ದು ಎಫ್‌ಐಆರ್ ದಾಖಲಿಸದೆ ಕೃತ್ಯ ಮುಚ್ಚಿ ಹಾಕಲಾಗಿದೆ’ ಎಂದು ಜಯಂತ್ ಟಿ. ಅವರು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ. ‘ಇಚ್ಲಂಪಾಡಿ ನಿವಾಸಿ ಜಯಂತ್ ಎಂಬವರು ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಘಟನೆಗೆ ಸಂಬಂಧಿಸಿ ದೂರು ನೀಡಲು ಎಸ್.ಐ.ಟಿ ಬೆಳ್ತಂಗಡಿ ಕಚೇರಿಗೆ ಹೋಗಿದ್ದರು. ದೂರು ಪರಿಶೀಲಿಸಿದ್ದ ಅಧಿಕಾರಿಗಳು ಸೂಕ್ತಕ್ರಮಕ್ಕಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನೀಡುವಂತೆ ತಿಳಿಸಿದ್ದರು. ‘ಅದರಂತೆ ದೂರುದಾರರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನೀಡಿದ ದೂರು ಅರ್ಜಿಯನ್ನು (200/DPS/2025) ಸ್ವೀಕರಿಸಲಾಗಿದೆ. ಈ ದೂರಿನ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.
‘13ರಿಂದ 15 ವರ್ಷ ವಯಸ್ಸಿನ ಬಾಲಕಿ ಶವವನ್ನು ಕಣ್ಣಾರೆ ಕಂಡಿದ್ದೇನೆ. ಬೇರೆ ಸಾಕ್ಷಿಗಳೂ ಇದ್ದಾರೆ. 15 ವರ್ಷ ಹಿಂದೆ ಬೆಳ್ತಂಗಡಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಠಾಣಾಧಿಕಾರಿ ಕಾನೂನುಬದ್ಧವಾಗಿ ಪ್ರಕರಣ ನಿರ್ವಹಿಸಿಲ್ಲ’ ಎಂದು ಜಯಂತ್ ಟಿ. ಆರೋಪಿಸಿದರು. ‘ಧರ್ಮಸ್ಥಳ ಠಾಣೆಗೆ ನಾನು ನೀಡಿರುವ ದೂರು ಎಸ್‌ಐಟಿಗೆ ವರ್ಗಾವಣೆಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಯಂತ್ ಟಿ. ಯಾರು?:
ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಹೋರಾಟದಲ್ಲಿ ಸಕ್ರಿಯರಾಗಿರುವ ಜಯಂತ್ ಟಿ ಅವರು ಆರ್‌ಟಿಐ ಕಾರ್ಯಕರ್ತರೂ ಆಗಿದ್ದಾರೆ. ಬೆಂಗಳೂರಿನಲ್ಲಿ ಒಳಾಂಗಣ ವಿನ್ಯಾಸಕ್ಕೆ ಸಂಬಂಧಿಸಿದ ವ್ಯವಹಾರ ನಡೆಸುತ್ತಿದ್ದಾರೆ. ‘2015ರಿಂದಲೇ ಭ್ರಷ್ಟಾಚಾರ ಮುಕ್ತ ಸಮಾಜಕ್ಕಾಗಿ ಹೋರಾಡುತ್ತಿದ್ದೇನೆ. ನನ್ನ ಹೋರಾಟ ಯಾರ ವಿರುದ್ಧವೂ ಅಲ್ಲ ಯಾರ ಪರವೂ ಅಲ್ಲ. ನಾನು ದೇವಸ್ಥಾನದ ವಿರುದ್ಧ ಅಲ್ಲ ಕಮ್ಯುನಿಸ್ಟ್ ಕೂಡ ಅಲ್ಲ‘ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.