ಕಾಸರಗೋಡು: ಚೆರುವತ್ತೂರು ಮಟ್ಟಲಾಯಿ ಎಂಬಲ್ಲಿ ಸೋಮವಾರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ವೇಳೆ ಗುಡ್ಡದಿಂದ ಮಣ್ಣು ಕುಸಿದು ವ್ಯಕ್ತಿ ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಮೃತರ ಮತ್ತು ಗಾಯಗೊಂಡವರ ಮಾಹಿತಿ ಲಭಿಸಿಲ್ಲ. ಬೇರೆ ರಾಜ್ಯದ ಕಾರ್ಮಿಕರು ಎಂದು ಪೊಲೀಸರು ಅಂದಾಜಿಸಿದ್ದಾರೆ.
ಸಾರ್ವಜನಿಕರ ಸಹಾಯದೊಂದಿಗೆ ಅಗ್ನಿಶಾಮಕದಳದ ಸಿಬ್ಬಂದಿ ಮಣ್ಣಿನಡಿ ಸಿಲುಕಿದ್ದ ಮೂವರನ್ನು ಮೇಲೆತ್ತಿದೆ. ಅಷ್ಟರಲ್ಲಿ ಒಬ್ಬರು ಮೃತಪಟ್ಟಿದ್ದರು. ಉಳಿದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಸ್ತೆ ನಿರ್ಮಾಣಕ್ಕಾಗಿ ಗುಡ್ಡದ ಒಂದು ಬದಿಯಿಂದ ಮಣ್ಣು ತೆರವುಗೊಳಿಸುತ್ತಿದ್ದಾಗ ಗುಡ್ಡದಿಂದ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದಿತ್ತು. ಕಾಞಂಗಾಡು ಡಿವೈಎಸ್ಪಿ ಬಾಬು ಪೆರಿಂಙೋಂ ಅವರ ನೇತೃತ್ವದಲ್ಲಿ ತನಿಖೆ ಆರಂಭಗೊಂಡಿದೆ. ಮೇಘಾ ಕನ್‌ಸ್ಟ್ರಕ್ಷನ್ ಸಂಸ್ಥೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ನಿರ್ವಹಿಸುತ್ತಿದೆ.
ಕಟ್ಟಡದಿಂದ ಬಿದ್ದು ಸಾವು
ಕಾಸರಗೋಡು: ನಿರ್ಮಾಣಗೊಳ್ಳುತ್ತಿದ್ದ ಮನೆಯ ಮೊದಲ ಅಂತಸ್ತಿನಿಂದ ಬಿದ್ದು, ಮೇಸ್ತ್ರಿ ಮೃತಪಟ್ಟಿದ್ದಾರೆ. ಚಿನ್ನಮೊಗರು ಎಂಬಲ್ಲಿ ಘಟನೆ ನಡೆದಿದ್ದು, ಜೋಡುಕಲ್ಲು ನಿವಾಸಿ ಶಶಿಧರ (32) ಮೃತಪಟ್ಟವರು.
ಗಂಭೀರ ಗಾಯಗೊಂಡಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರು ಮೃತಪಟ್ಟಿದ್ದರು. ಅವರಿಗೆ ಪತ್ನಿ ಇದ್ದಾರೆ.
ಎಂಡಿಎಂಎ, ಗಾಂಜಾ ಪತ್ತೆ
ಕಾಸರಗೋಡು: ಶಿರಿಯ ಒಳಯಂ ಎಂಬಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 12.087 ಗ್ರಾಂ ಎಂಡಿಎಂಎಯನ್ನು ಅಬಕಾರಿ ದಳ ಪತ್ತೆಮಾಡಿದೆ.
ಇನ್ನೊಂದು ಪ್ರಕರಣದಲ್ಲಿ ಕುಂಬಳೆ ಬದ್ರಿಯಾನಗರದಲ್ಲಿ 10 ಗ್ರಾಂ ಗಾಂಜಾ ಸಹಿತ ಸ್ಥಳೀಯ ನೀರಾಳಿ ನಿವಾಸಿ ಅಫ್ಝಲ್ (28) ಎಂಬಾತನನ್ನು ಅಬಕಾರಿ ದಳ ಬಂಧಿಸಿದೆ.
ಆತ್ಮಹತ್ಯೆ
ಕಾಸರಗೋಡು: ಬೋವಿಕ್ಕಾನ ತೇಜಸ್ ಹೌಸಿಂಗ್ ಕಾಲೊಮಿ ನಿವಾಸಿ ಚೋಮು (80) ಎಂಬುವರು ಮನೆ ಬಳಿಯ ಮಾವಿನಮರದ ಗೆಲ್ಲಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನೊಂದು ಘಟನೆಯಲ್ಲಿ ಕಾರಡ್ಕ ಶಾಂತಿನಗರ ನಿವಾಸಿ ಸಿ.ಎಚ್.ಶಶಿ (58) ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಮನೆಯಲ್ಲಿ ಒಬ್ಬಂಟಿಯಾಗಿದ್ದರು. ಸಿಪಿಎಂ ಶಾಖಾ ಕಾರ್ಯದರ್ಶಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.