ADVERTISEMENT

ಪ್ರವಾಸಿ ತಾಣಗಳಲ್ಲಿ ವಿಶೇಷ ‘ಗೈಡ್‌’: ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಭರವಸೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 16:27 IST
Last Updated 30 ಸೆಪ್ಟೆಂಬರ್ 2019, 16:27 IST
ಮಂಗಳೂರಿನ ಸಂಘನಿಕೇತನದಲ್ಲಿ ಸೋಮವಾರ ಆರಂಭವಾದ ಅಂಧ ಮತ್ತು ಶ್ರವಣದೋಷವುಳ್ಳ ಮಕ್ಕಳ ಮೂರು ದಿನಗಳ ಸಮಾವೇಶದಲ್ಲಿ ಪಾಲ್ಗೊಂಡಿರುವ ಮಕ್ಕಳು.– ಪ್ರಜಾವಾಣಿ ಚಿತ್ರ
ಮಂಗಳೂರಿನ ಸಂಘನಿಕೇತನದಲ್ಲಿ ಸೋಮವಾರ ಆರಂಭವಾದ ಅಂಧ ಮತ್ತು ಶ್ರವಣದೋಷವುಳ್ಳ ಮಕ್ಕಳ ಮೂರು ದಿನಗಳ ಸಮಾವೇಶದಲ್ಲಿ ಪಾಲ್ಗೊಂಡಿರುವ ಮಕ್ಕಳು.– ಪ್ರಜಾವಾಣಿ ಚಿತ್ರ   

ಮಂಗಳೂರು: ಅಂಧರು ಮತ್ತು ಶ್ರವಣ ದೋಷವುಳ್ಳ ಮಕ್ಕಳಿಗೆ ಸಂಜ್ಞೆಗಳ ಮೂಲಕ ಸೂಕ್ತ ಮಾಹಿತಿ ನೀಡುವುದಕ್ಕಾಗಿ ರಾಜ್ಯದ ಎಲ್ಲ ಪ್ರವಾಸಿ ತಾಣಗಳಲ್ಲಿ ವಿಶೇಷ ‘ಗೈಡ್‌’ಗಳನ್ನು ನಿಯೋಜನೆ ಮಾಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಭರವಸೆ ನೀಡಿದರು.

ಅನಂ ಪ್ರೇಮ ಸಮಾಜ ಸೇವಾ ಸಂಸ್ಥೆ ಹಾಗೂ ಮುಂಬೈನ ಹೆಲೆನ್‌ ಕೆಲ್ಲರ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಡೆಫ್‌ ಅಂಡ್‌ ಬ್ಲೈಂಡ್‌ ವತಿಯಿಂದ ಸಂಘನಿಕೇತನದಲ್ಲಿ ಸೋಮವಾರ ಆರಂಭವಾದ ಅಂಧ ಮತ್ತು ಶ್ರವಣ ದೋಷವುಳ್ಳ ಮಕ್ಕಳ ಮೂರು ದಿನಗಳ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಅಂಗವಿಕಲ ಮಕ್ಕಳಿಗೂ ಭಾವನೆಗಳಿರುತ್ತವೆ. ಅವರಿಗೆ ಸರಿಯಾದ ಪ್ರೋತ್ಸಾಹ ದೊರಕಿದರೆ ದೊಡ್ಡ ಸಾಧನೆಗಳನ್ನು ಮಾಡುತ್ತಾರೆ. ಪ್ರವಾಸಿ ತಾಣಗಳ ಕುರಿತು ಅಂಗವಿಕಲ ಮಕ್ಕಳಿಗೆ ಮಾಹಿತಿ ನೀಡಲು ವಿಶೇಷ ವ್ಯವಸ್ಥೆ ರಾಜ್ಯದಲ್ಲಿ ಇಲ್ಲ. ಶೀಘ್ರದಲ್ಲಿ ಈ ಸಂಬಂಧ ತೀರ್ಮಾನವೊಂದನ್ನು ಕೈಗೊಳ್ಳಲಾಗುವುದು’ ಎಂದು ಸಚಿವರು ಹೇಳಿದರು.

ADVERTISEMENT

ಉತ್ತರ ಪ್ರದೇಶದ ವಿವಿಧ ಭಾಗಗಳು, ಕಾನ್ಪುರ, ಸೂರತ್‌, ಭವನಗರ, ಅಮೃತಸರ, ಶ್ರೀಲಂಕಾ ಸೇರಿದಂತೆ ದೇಶ, ವಿದೇಶಗಳ ಹಲವು ಸ್ಥಳಗಳಿಂದ 100ಕ್ಕೂ ಹೆಚ್ಚು ಅಂಧ ಮತ್ತು ಶ್ರವಣ ದೋಷವುಳ್ಳ ಮಕ್ಕಳು ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಚಿತ್ರಕಲೆ, ಏಕಪಾತ್ರಾಭಿನಯ, ನೃತ್ಯ ಸೇರಿದಂತೆ ಹಲವು ಸ್ಪರ್ಧೆಗಳನ್ನು ಈ ಮಕ್ಕಳಿಗಾಗಿ ಆಯೋಜಿಸಲಾಗಿದೆ.

ಸಮಾವೇಶದಲ್ಲಿ ಮಕ್ಕಳಿಗೆ ಅನಿಮೇಷನ್‌, ಕ್ಲೇ ಮಾದರಿಗಳ ತಯಾರಿ, ಆಭರಣ ತಯಾರಿ ಸೇರಿದಂತೆ ಹಲವು ಚಟುವಟಿಕೆಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಮಕ್ಕಳಿಗೆ ವಿಶೇಷ ಪ್ರವಾಸ ಕಾರ್ಯಕ್ರಮವನ್ನೂ ಆಯೋಜಿಸಿದ್ದು, ನಗರದ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಕರೆದೊಯ್ಯಲಾಗುತ್ತದೆ.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್‌, ಹೆಲೆನ್‌ ಕೆಲ್ಲರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಡೆಫ್‌ ಅಂಡ್‌ ಬ್ಲೈಂಡ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹಾಗೂ ಅನಂ ಪ್ರೇಮ ಸಮಾಜ ಸೇವಾ ಸಂಸ್ಥೆಯ ಹಿರಿಯ ಸದಸ್ಯ ಯೋಗೇಶ್‌ ದೇಸಾಯಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.