ADVERTISEMENT

ಕಂಬಳ: 8.96 ಸೆಕೆಂಡ್‌ನಲ್ಲಿ 100 ಮೀಟರ್‌ ಕ್ರಮಿಸಿ ದಾಖಲೆ ಬರೆದ ಶ್ರೀನಿವಾಸ ಗೌಡ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 15:28 IST
Last Updated 20 ಮಾರ್ಚ್ 2021, 15:28 IST
ಶ್ರೀನಿವಾಸ ಗೌಡ
ಶ್ರೀನಿವಾಸ ಗೌಡ   

ಮಂಗಳೂರು: ಬೆಳ್ತಂಗಡಿ ತಾಲ್ಲೂಕಿನ ವೇಣೂರು–ಪೆರ್ಮುಡದಲ್ಲಿ ಶನಿವಾರ ನಡೆದ ಸೂರ್ಯ–ಚಂದ್ರ ಜೋಡುಕರೆ ಕಂಬಳದಲ್ಲಿ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಹೊಸ ದಾಖಲೆ ಬರೆದಿದ್ದಾರೆ. 8.96 ಸೆಕೆಂಡ್‌ನಲ್ಲಿ 100 ಮೀಟರ್‌ ಕ್ರಮಿಸುವ ಮೂಲಕ ಇದುವರೆಗಿನ ಎಲ್ಲ ದಾಖಲೆಗಳನ್ನು ಅಳಿಸಿ ಹಾಕಿದರು.

ಕಂಬಳದ 125 ಮೀಟರ್‌ ಉದ್ದದ ಕರೆಯನ್ನು 11.21 ಸೆಕೆಂಡ್‌ನಲ್ಲಿ ಶ್ರೀನಿವಾಸಗೌಡ ತಲುಪಿದ್ದಾರೆ. ಇದನ್ನು 100 ಮೀಟರ್‌ಗೆ ಲೆಕ್ಕ ಹಾಕಿದಾಗ 8.96 ಸೆಕೆಂಡ್‌ ಸಮಯ ತೆಗೆದುಕೊಂಡಿದ್ದಾರೆ. ಕಂಬಳದ ನೇಗಿಲು ಹಿರಿಯ ವಿಭಾಗದಲ್ಲಿ ಇರುವೈಲ್ ಪಾಣಿಲ ಬಾಡ ಪೂಜಾರಿ ಅವರ ಕೋಣಗಳನ್ನು ಶ್ರೀನಿವಾಸ ಗೌಡ ಓಡಿಸಿದ್ದಾರೆ.

ಈ ಮೊದಲು ಕಳೆದ ವರ್ಷ ಐಕಳದಲ್ಲಿ ನಡೆದ ಕಂಬಳದಲ್ಲಿ ಇದೇ ಶ್ರೀನಿವಾಸ ಗೌಡ 100 ಮೀಟರ್‌ ಅನ್ನು 9.55 ಸೆಕೆಂಡ್‌ನಲ್ಲಿ ಕ್ರಮಿಸಿ ದಾಖಲೆ ಬರೆದಿದ್ದರು. ಅದಾದ ನಂತರ ಕಳೆದ ವರ್ಷದ ವೇಣೂರು ಕಂಬಳದಲ್ಲಿ ಈ ದಾಖಲೆ ಮುರಿದಿದ್ದ ಬಜಗೋಳಿ ನಿಶಾಂತ್‌ ಶೆಟ್ಟಿ 100 ಮೀಟರ್‌ ಅನ್ನು 9.52 ಸೆಕೆಂಡ್‌ನಲ್ಲಿ ಕ್ರಮಿಸಿದ್ದರು. ಬೈಂದೂರು ವಿಶ್ವನಾಥ ದೇವಾಡಿಗ ಈ ವರ್ಷ ನಡೆದ ಐಕಳ ಕಂಬಳದಲ್ಲಿ 100 ಮೀಟರ್ ಅನ್ನು 9.15 ಸೆಕೆಂಡ್‌ನಲ್ಲಿ ಕ್ರಮಿಸಿ, ಹೊಸ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯೂ ನೇಪಥ್ಯಕ್ಕೆ ಸರಿದಂತಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.