ADVERTISEMENT

ಇಂದಿನಿಂದ ಮೂಡುಬಿದಿರೆಯಲ್ಲಿ ಅಥ್ಲೆಟಿಕ್ ಚಾಂಯನ್‌ಷಿಪ್‌ಗೆ ಸೆಣಸಾಟ 

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2018, 14:57 IST
Last Updated 2 ಸೆಪ್ಟೆಂಬರ್ 2018, 14:57 IST
ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆಯುವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗೆ ಪೂರ್ವಭಾವಿಯಾಗಿ ಕ್ರೀಡಾಪಟುಗಳು ಭಾನುವಾರ ಸಂಜೆ ತರಬೇತಿ ನಡೆಸಿದರು. (ಮೂಡುಬಿದಿರೆ ಚಿತ್ರ)
ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆಯುವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗೆ ಪೂರ್ವಭಾವಿಯಾಗಿ ಕ್ರೀಡಾಪಟುಗಳು ಭಾನುವಾರ ಸಂಜೆ ತರಬೇತಿ ನಡೆಸಿದರು. (ಮೂಡುಬಿದಿರೆ ಚಿತ್ರ)   

ಮೂಡುಬಿದಿರೆ: ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಶನ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಸೋಮವಾರದಿಂದ ಮೂರು ದಿನ ನಡೆಯುವ ರಾಜ್ಯ ಮಟ್ಟದ ಕಿರಿಯರ ಮತ್ತು ಹಿರಿಯರ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗೆ ಇಲ್ಲಿನ ಸ್ವರಾಜ್ಯ ಮೈದಾನದ ಸಿಂಥೆಟಿಕ್ ಟ್ರ್ಯಾಕ್‌ನಲ್ಲಿ ಸೆಣಸಾಟ ಆರಂಭವಾಗಲಿದೆ.

ಭಾನುವಾರದಿಂದಲೆ ರಾಜ್ಯದ ವಿವಿಧೆಡೆಯಿಂದ ಕ್ರೀಡಾಪಟುಗಳು, ಕ್ರೀಡಾ ತರಬೇತುದಾರರು ಮೂಡುಬಿದಿರೆಗೆ ಆಗಮಿಸಿದ್ದಾರೆ. ಚಾಂಪಿಯನ್‌ಷಿಪ್‌ಗಾಗಿ ವಿವಿಧ ಕ್ರೀಡಾಪಟುಗಳು ಸ್ವರಾಜ್ಯ ಮೈದಾನದಲ್ಲಿ ತಾಲೀಮಿನಲ್ಲಿ ನಿರತರಾಗಿದ್ದಾರೆ.

ಡೆಕತ್ಲಾನಲ್ಲಿ ದಾಖಲೆ ನಿರ್ಮಿಸಿದ್ದ ಅಂತರಾಷ್ಟ್ರೀಯ ಕ್ರೀಡಾಪಟು ಅಭಿಷೇಕ್ ಶೆಟ್ಟಿ, 100 ಮೀಟರ್ನ ಓಟಗಾರ ಪ್ರಜ್ವಲ್ ಮಂದಣ್ಣ ಮತ್ತು ಅಭಿನಯ ಶೆಟ್ಟಿ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರಮುಖ ಕ್ರೀಡಾಪಟುಗಳಾಗಿದ್ದು, ಇವರೆಲ್ಲಾ ಅತಿಥೇಯ ಅಳ್ವಾಸ್ ವಿದ್ಯಾರ್ಥಿಗಳಾಗಿದ್ದಾರೆ. 100, 200 ಮೀಟರ್ನಲ್ಲಿ ವಿದ್ಯಾನಂದ ಸ್ಪೋರ್ಟ್ಸ್‌ ಕ್ಲಬ್‌ನ ಧಾರಣೇಶ್ವರ, ಮೈಸೂರಿನ ರೀನಾ ಜಾರ್ಜ್‌ 800 ಮೀಟರ್ನಲ್ಲಿ ರೈಲ್ವೆಸ್‌ನಿಂದ ವಿಶ್ವಾಂಬರ್ ಕೂಲೇಕರ್ ಇಂದಿನ ಸ್ಪರ್ಧೆಯಲ್ಲಿ ಗಮನಸೆಳೆಯಬಲ್ಲ ಆಟಗಾರರಾಗಿದ್ದಾರೆ.

ADVERTISEMENT

ದಾಖಲೆಯ ನೋಂದಣಿ: ರಾಜ್ಯದ 30 ಜಿಲ್ಲೆಗಳಿಂದ, ಸರ್ಕಾರದ ಅಧೀನದಲ್ಲಿರುವ ಕ್ರೀಡಾ ಹಾಸ್ಟೆಲ್‌ಗಳು, ಸಾಯಿ ಕೇಂದ್ರ, ಮಾನ್ಯತೆ ಪಡೆದ ಕ್ರೀಡಾ ತರಬೇತಿ ಶಾಲೆಗಳು, ಕ್ರೀಡಾ ಕ್ಬ್‌ಗಗಳು ಹೀಗೆ ವಿವಿಧೆಡೆಯಿಂದ ಸುಮಾರು 1800ಕ್ಕೂ ಅಧಿಕ ಕ್ರೀಡಾಪಟುಗಳು ಭಾನುವಾರ ಸಂಜೆ ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದು ದಾಖಲೆ ಸಂಖ್ಯೆಯ ಕ್ರೀಡಾಪಟುಗಳು ಮೂಡುಬಿದಿರೆಯ ಅಥ್ಲೆಟಿಕ್‌ನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.

‌ಕ್ರೀಡಾಧಿಕಾರಿಗಳು ಮತ್ತು ತರಬೇತುದಾರರು, ವ್ಯವಸ್ಥಾಪಕರು, ಸಂಘಟಕರು ಸ್ಪರ್ಧೆಯ ಯಶಸ್ವಿಗೆ ಸಹಕರಿಸುತ್ತಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ರಾಜ್ಯ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಸೋಮವಾರ ಬೆಳಿಗ್ಗೆ 9-30ಕ್ಕೆ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ.

ಈ ಸ್ಪರ್ಧೆಯ ನಿರ್ವಹಣೆಯ ಅಧಾರದಲ್ಲಿ ಕ್ರೀಡಾಪಟುಗಳನ್ನು ದಕ್ಷಿಣ ವಲಯ ಜೂನಿಯರ್ ಮತ್ತು ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗೆ ಆಯ್ಕೆ ಮಾಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.