ADVERTISEMENT

ಮಂಗಳೂರು: 60 ವರ್ಷಗಳ ಬಳಿಕ ಗೆಳತಿಯರ ಪುನರ್ಮಿಲನ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2025, 7:10 IST
Last Updated 21 ಮಾರ್ಚ್ 2025, 7:10 IST
60 ವರ್ಷಗಳ ಬಳಿಕ ಗುರುವಾರ ಮತ್ತೆ ಒಟ್ಟು ಸೇರಿದ ಸೇಂಟ್ ಆಗ್ನೆಸ್ ಪ್ರೌಢಶಾಲೆಯ 1965ರ ತಂಡದ ವಿದ್ಯಾರ್ಥಿನಿಯರು
60 ವರ್ಷಗಳ ಬಳಿಕ ಗುರುವಾರ ಮತ್ತೆ ಒಟ್ಟು ಸೇರಿದ ಸೇಂಟ್ ಆಗ್ನೆಸ್ ಪ್ರೌಢಶಾಲೆಯ 1965ರ ತಂಡದ ವಿದ್ಯಾರ್ಥಿನಿಯರು   

ಮಂಗಳೂರು: ನಗರದ ಸೇಂಟ್ ಆಗ್ನೆಸ್ ಪ್ರೌಢಶಾಲೆಯ 1965ರ ತಂಡದ ವಿದ್ಯಾರ್ಥಿನಿಯರು 60 ವರ್ಷಗಳ ಬಳಿಕ ಶಾಲೆಯಲ್ಲಿ ಗುರುವಾರ ಮತ್ತೆ ಜೊತೆ ಸೇರಿದರು. ಶಾಲಾ ದಿನಗಳನ್ನು ಮೆಲುಕು ಹಾಕಿ ಸಂಭ್ರಮಿಸಿದರು. ಹಾಡಿದರು, ಕುಣಿದರು, ಆಡಿದರು. 70 ದಾಟಿದ ಅವರೆಲ್ಲರೂ ಮತ್ತೆ ಅಕ್ಷರಶಃ ಹೈಸ್ಕೂಲು ಹುಡಿಗಿಯರಂತಾದರು.  

ಮಧ್ಯಾಹ್ನ ಊಟದ ವೇಳೆ ಕರಾವಳಿಯ ಅಡುಗೆಯ ಸ್ವಾದ 60 ವರ್ಷಗಳ ಹಳೆಯ ನೆನಪುಗಳ ಬುತ್ತಿ ಮತ್ತೆ ಬಿಚ್ಚುವಂತೆ ಮಾಡಿತು. ಶಾಲೆಯ ಪಡಸಾಲೆಯಲ್ಲಿ ಗೆಳತಿಯರ ಜೊತೆ ಒಟ್ಟಿಗೆ ತುತ್ತು ಸವಿದ ಸವಿನೆನಪುಗಳು ಮನದ ಮೂಸೆಯಲ್ಲಿ ಕುಣಿದಾಡಿದವು. ಕೆಲವು ಆಟಗಳು ಅವರನ್ನು ತುದಿಗಾಲಿನಲ್ಲಿ ನಿಲ್ಲಿಸಿದವು.    

ಹತ್ತು ವರ್ಷಗಳ ಹಿಂದೆ ಪ್ರೌಢ ಶಾಲೆಯ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಈ ತಂಡದ ವಿದ್ಯಾರ್ಥಿನಿಯರು ಸಂದರ್ಭದಲ್ಲಿ ಜೊತೆಯಾಗಿದ್ದರು. 50 ವರ್ಷಗಳ ಬಳಿಕ ಪುನರ್ಮಿಲನಗೊಂಡ ಮೊದಲ ತಂಡ ಇವರದಾಗಿತ್ತು. 

ADVERTISEMENT

‘50 ವರ್ಷಗಳ ಬಳಿಕದ ಪುನರ್ಮಿಲನ ಅವಿಸ್ಮರಣೀಯ ಅನುಭವ ಕಟ್ಟಿಕೊಟ್ಟಿತ್ತು. ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಕ್ಷಣಗಳು ಚೇತೋಹಾರಿ ಅನುಭವ ನೀಡಿದ್ದವು. ಆ ಬಳಿಕ ನಮ್ಮ ತಂಡದ ವಿದ್ಯಾರ್ಥಿನಿಯರ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿತ್ತು. ಅದೇ ಹುರುಪಿನೊಂದಿಗೆ  ನಾವು ವಜ್ರಮಹೋತ್ಸವಕ್ಕೆ ಸಿದ್ಧತೆ ನಡೆಸಿದ್ದೆವು. ಆ ಕ್ಷಣಗಳು ಇಂದು ಸಾಕಾರವಾದವು’ ಎಂದು ವಿದ್ಯಾರ್ಥಿಗಳು ತಿಳಿಸಿದರು. 

ಈ ಹಿಂದೆ ತರಗತಿಯಲ್ಲಿ ಕಾಲ ಕಳೆದ ಅನುಭವಗಳನ್ನು ಮತ್ತೆ ಪಡೆಯುವ ಉದ್ದೇಶ ಅವರದಾಗಿತ್ತು. ಆದರೆ ಆಗಿರುವ ಗಮನಾರ್ಹ ಬದಲಾವಣೆಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ನಿರೀಕ್ಷಿತ ಸಂಖ್ಯೆಯಲ್ಲಿ ಗೆಳತಿಯರು ಭಾಗವಹಿಸಲು ಸಾಧ್ಯವಾಗದಿರುವುದು ಅವರಲ್ಲಿ ತುಸು ನಿರಾಸೆ ಮೂಡಿಸಿತು. 

‘ವಯಸ್ಸು ಎಂಬುದು ಕೇವಲ ಸಂಖ್ಯೆ’ ಎನ್ನುತ್ತಾ ಕಾರ್ಯಕ್ರಮದ ಸಂಚಾಲಕಿ ಡಾ.ಆಂಡ್ರ್ಯೂ ಪಿಂಟೊ ಗೆಳತಿಯರನ್ನು ಹುರಿದುಂಬಿಸಿದರು.

ಸಿಸ್ಟರ್‌ ಮರಿಯಾ ಸಾರಿಕಾ, ಗೀತಾ, ರೋಸ್ ಮೇರಿ ಕ್ಯೂರಿ ಹಾಗೂ ರೋಸ್ ಪಾಯಸ್‌ ಈ ಕಾರ್ಯಕ್ರಮಕ್ಕೆ ಬೆಂಬಲ ನೀಡಿದ್ದಕ್ಕೆ ಹಳೆ ವಿದ್ಯಾರ್ಥಿಗಳು ಧನ್ಯವಾದ ಸಲ್ಲಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.