ಸುಬ್ರಹ್ಮಣ್ಯ: ರೈತರ ಸಮಸ್ಯೆ ಹಾಗೂ ಗುಂಡ್ಯದಲ್ಲಿ ಆನೆ ಶಿಬಿರದ ಸ್ಥಾಪನೆಗೆ ಸಂಬAಸಿದAತೆ ರೈತರಿಂದ ಸಮಾಲೋಚನಾ ಸಭೆ ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಸುಬ್ರಹ್ಮಣ್ಯದ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಗುಂಡ್ಯದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಆನೆ ಶಿಬಿರ ಯೋಜನೆ ಬಗ್ಗೆ ಹಾಗೂ ರೈತರು ಅರಣ್ಯ ಇಲಾಖೆಯಿಂದ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಮಾತನಾಡಿ, ಗುಂಡ್ಯದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಆನೆ ಶಿಬಿರ ಯೋಜನೆಯ ಬಗ್ಗೆ ಅಲ್ಲಿನ ಗ್ರಾಮಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಸಮರ್ಪಕ ಮಾಹಿತಿಯನ್ನು ಒದಗಿಸಬೇಕು. ಯಾವುದೇ ಕಾರಣಕ್ಕೂ ತರಾತುರಿಯಲ್ಲಿ ಯೋಜನೆ ಆರಂಭಿಸಬಾರದು. ರೈತರ ಭೂಮಿ ಬಳಸಿಕೊಂಡು, ರೈತರಿಗೆ, ಸಾರ್ವಜನಿಕರಿಗೆ ಸಮಸ್ಯೆ ಆಗುವ ರೀತಿಯಲ್ಲಿ ಆನೆ ಶಿಬಿರ ಆರಂಭಿಸಬಾರದು, ನಮ್ಮ ಬೇಡಿಕೆಗಳನ್ನು ಮನ್ನಿಸದೇ ಇದ್ದಲ್ಲಿ ಯೋಜನೆಯ ವಿರುದ್ಧ ಉಗ್ರ ರೀತಿಯಲ್ಲಿ ಹೋರಾಟ ಮಾಡಲಾಗುವುದು ಎಂದರು.
ಗಡಿಗುರುತು ಮಾಡಲು ಆಗ್ರಹ:
ಅರಣ್ಯ ಸಮಸ್ಯೆ ಹಾಗೂ ಕಾಡು ಪ್ರಾಣಿಗಳ ಹಾವಳಿ ತಡೆಗೆ ಸಂಬAಸಿದAತೆ ಈಗಾಗಲೇ ಪಶ್ಚಿಮ ಘಟ್ಟ ಹಾಗೂ ಜನವಸತಿ ಗಡಿಗುರುತು ಮಾಡುವಂತೆ ಒತ್ತಾಯಿಸಲಾಗಿತ್ತು. ಗಡಿಗುರುತು ಮಾಡಿ ಜಿಲ್ಲೆಯಲ್ಲಿ ಸುಮಾರು ೨೦೦ ಕಿ.ಮೀ. ಸೋಲಾರ್ ಬೇಲಿ ಅಳವಡಿಸುವಂತೆ ಒತ್ತಾಯಿಸಲಾಗಿದೆ. ಇದರಿಂದ ಕಾಡುಪ್ರಾಣಿ, ಕಾಡಾನೆ ಹಾವಳಿ ನಿಯಂತ್ರಣ ಸಾಧ್ಯವಿದೆ. ಆನೆ ಶಿಬಿರಕ್ಕೆ ಬದಲಾಗಿ ಈ ಯೋಜನೆ ಮಾಡಬೇಕು, ಇದನ್ನು ಕಾರ್ಯಗತ ಮಾಡಬೇಕು ಎಂದು ಒತ್ತಾಯಿಸಲಾಯಿತು.
ಜಿಲ್ಲೆಯ ಹಲವೆಡೆ ಹಕ್ಕುಪತ್ರ ನೀಡಿದ್ದರೂ ಪ್ಲೋಟಿಂಗ್ ಮಾಡಲು ಬಿಡುತ್ತಿಲ್ಲ. ಇದರ ವಿರುದ್ಧ ಹೋರಾಟ ನಡೆಸುವ ಬಗ್ಗೆ ನಿರ್ಧರಿಸಲಾಯಿತು. ಅರಣ್ಯ ಇಲಾಖೆ ವಿವಿಧ ರೀತಿಯಲ್ಲಿ ರೈತರಿಗೆ ತೊಂದರೆ ನೀಡುವ ಕೆಲಸ ಮಾಡುತ್ತಿದ್ದು, ಇದರ ವಿರುದ್ಧವೂ ಅರಣ್ಯ ಇಲಾಖೆ ಕಚೇರಿ ಮುಂದೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಸಭೆಯಲ್ಲಿ ತೀರ್ಮಾಣಿಸಲಾಗಿದೆ. ಪ್ರತೀ ಗ್ರಾಮ ಮಟ್ಟದಲ್ಲಿ ರೈತರ ಸಮಸ್ಯೆ ಬಗ್ಗೆ ಸಭೆ ನಡೆಸುವುದು, ಕೃಷಿಕರ, ರೈತರ ಸಂಘಟನೆ ಬಲಪಡಿಸುವುದು ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಪ್ರಮುಖರಾದ ಜಯಪ್ರಕಾಶ್ ಕೂಜುಗೋಡು, ಅಶೋಕ್ ಕುಮಾರ್ ಸುಬ್ರಹ್ಮಣ್ಯ, ದಾಮೋದರ ಗುಂಡ್ಯ, ತಿಲಕ್ ಎ.ಎ., ಗಣೇಶ್ ಅನಿಲ, ಸೋಮಶೇಖರ ಐತ್ತೂರು, ಲಿಂಗಪ್ಪ ಗೌಡ ಐತ್ತೂರು, ಮನೀಶ್ ಪದೇಲ, ಗಣೇಶ್ ಪಿಲಿಕಜೆ, ಏಕಲವ್ಯ ನಾಲ್ಕೂರು, ಗಣೇಶ್ ಕೋಡಿಂಬಾಳ, ಈಶ್ವರ ಗೌಡ, ಗಿರೀಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.