ADVERTISEMENT

ಸುಹಾಸ್ ಶೆಟ್ಟಿ ಹತ್ಯೆ: ವಿಧಾನಸಭಾಧ್ಯಕ್ಷರ ರಾಜೀನಾಮೆಗೆ ಶಾಸಕ ಭರತ್ ಶೆಟ್ಟಿ ಆಗ್ರಹ

’ಹತ್ಯೆಯಲ್ಲಿ ಫಾಝಿಲ್ ಕುಟುಂಬದ ಪಾತ್ರವಿಲ್ಲ ಎಂದಿದ್ದೇಕೆ?’

​ಪ್ರಜಾವಾಣಿ ವಾರ್ತೆ
Published 3 ಮೇ 2025, 11:37 IST
Last Updated 3 ಮೇ 2025, 11:37 IST
<div class="paragraphs"><p>ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌</p></div>

ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌

   –ಪ್ರಜಾವಾಣಿ ಚಿತ್ರ.

ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಪೊಲೀಸರ ತನಿಖೆ ಪೂರ್ಣಗೊಳ್ಳುವ ಮುನ್ನವೇ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಅವರು 2022ರಲ್ಲಿ ಸುರತ್ಕಲ್‌ನಲ್ಲಿ ಹತ್ಯೇಗೀಡಾದ ಮಹಮ್ಮದ್ ಫಾಝಿಲ್‌ ಕುಟುಂಬದವರು ಈ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಹೇಳಿಕೆ ನೀಡಿದ್ದು ಏಕೆ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಪ್ರಶ್ನಿಸಿದ್ದಾರೆ.

‘ಸುಹಾಸ್‌ ಶೆಟ್ಟಿ ಹತ್ಯೆಗೂ ನಮಗೂ ಸಂಬಂಧವಿಲ್ಲ ಎಂದು ಫಾಝಿಲ್‌ ಅವರ ತಂದೆ ಮತ್ತು ಸೋದರ ನನಗೆ ಕರೆ ಮಾಡಿ ಹೇಳಿದ್ದಾರೆ. ತನಿಖೆಗೆ ಸಹಕರಿಸುವುದಾಗಿಯೂ ತಿಳಿಸಿದ್ದಾರೆ’ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿಕೆ ನೀಡಿದ್ದರು.

ADVERTISEMENT

ಇದನ್ನು ಪ್ರಶ್ನಿಸಿರುವ ಶಾಸಕ ಭರತ್ ಶೆಟ್ಟಿ, ‘ಹತ್ಯೆಗೊಳಗಾಗಿರುವ ಮಹಮ್ಮದ್ ಫಾಝಿಲ್ ಸೋದರ ಆದಿಲ್ ಮೆಹರೂಫ್‌ ಸುಹಾಸ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಗೃಹಸಚಿವ ಜಿ.ಪರಮೇಶ್ವರ ಹಾಗೂ ಪೊಲೀಸ್ ಕಮಿಷನರ್ ಅನುಪಮ ಅಗ್ರವಾಲ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಫಾಝಿಲ್‌ ಕುಟುಂಬದ ಪಾತ್ರವಿಲ್ಲ ಎನ್ನುವ ಮೂಲಕ ವಿಧಾನಸಭಾಧ್ಯಕ್ಷರು ತನಿಖೆಯ ಹಾದಿ ತಪ್ಪಿಸುವ ಕೆಲಸ ಮಾಡಿದ್ದಾರೆ’ ಎಂದರು.

‘ಫಾಝಿಲ್ ಸಹೋದರನ ಜತೆ ಮಾತಾಡಿದ್ದೇನೆ ಎಂದು ಖಾದರ್ ಮಾಧ್ಯಮಗಳಿಗೆ ಸ್ವತಃ ಹೇಳಿಕೆ ನೀಡಿದ್ದಾರೆ. ಪೊಲೀಸರ ವಶದಲ್ಲಿರುವ ಆತನ ಜೊತೆ ಖಾದರ್‌ ಮಾತನಾಡಿದ್ದು ಹೇಗೆ. ಪೊಲೀಸರು ಆರೋಪಿ ಜತೆ ಮಾತನಾಡಲು ಅವಕಾಶ ಕಲ್ಪಿಸಿದ್ದು ಹೇಗೆ. ಆರೋಪಿಗಳನ್ನು ರಕ್ಷಿಸಲು ಅವರು ಮಧ್ಯ ಪ್ರವೇಶ ಮಾಡಿ, ತನಿಖೆಯ ದಿಕ್ಕು ತಪ್ಪಿಸುವ ಕುತಂತ್ರ ಮಾಡುತ್ತಿದ್ದಾರೆಯೆ ಎಂಬ ಸಂಶಯ ವ್ಯಕ್ತವಾಗುತ್ತಿದೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲು ಸ್ಪೀಕರ್ ಅವರು ರಾಜೀನಾಮೆ ನೀಡುವುದು ಅಗತ್ಯ. ಹಾಗಾಗಿ ಅವರು ಹುದ್ದೆಗೆ ರಾಜೀನಾಮೆ ನೀಡಿ ವಿಧಾನಸಭೆಯ ಸಭಾಧ್ಯಕ್ಷ ಪೀಠದ ಗೌರವ ಉಳಿಸಬೇಕು’ ಎಂದು ಒತ್ತಾಯಿಸಿದರು.

'ಸುಹಾಸ್ ಹತ್ಯೆ ನಡೆಯುವಾಗ ಅದನ್ನು ಮೊಬೈಲ್‌ನಲ್ಲಿ ಸೆರೆಹಿಡಿದ ಮಹಿಳೆಯರು ಯಾರು. ಆ ವಿಡಿಯೊದಲ್ಲಿ ಇಬ್ಬರು ಮಹಿಳೆಯರು ಮಾತನಾಡುವುದು ಕೇಳಿಸುತ್ತಿದೆ. ಘಟನಾ ಸ್ಥಳದಲ್ಲಿ ಮತ್ತೆ ಇಬ್ಬರು ಮಹಿಳೆಯರಿದ್ದರು. ಈ ನಾಲ್ವರು ಮಹಿಳೆಯರನ್ನು ತನಿಖೆಗೆ ಒಳಪಡಿಸಬೇಕು. ಪೊಲೀಸರು ಸಾಕ್ಷ್ಯ ನಾಶವಾಗದಂತೆ ಎಚ್ಚರಿಕೆ ವಹಿಸಿ ತುರ್ತು ತನಿಖೆ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.