ಮಂಗಳೂರು: ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್ ಗವಾಯಿ ಅವರತ್ತ ಶೂ ಎಸೆಯಲು ಯತ್ನಿಸಿ ನ್ಯಾಯ ಪೀಠಕ್ಕೆ ಅವಮಾನ ಮಾಡಿದ್ದನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಬಣ) ನೇತೃತ್ವದಲ್ಲಿ ಇಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
‘ಈ ಘಟನೆ ಸಂವಿಧಾನ ಹಾಗೂ ನ್ಯಾಯಾಂಗ ವ್ಯವಸ್ಥೆಯನ್ನೇ ಬುಡ ಮೇಲು ಮಾಡಲು ಹೂಡಿರುವ ಷಡ್ಯಂತ್ರ. ಸಿಜೆಐ ಅವರತ್ತ ಶೂಗಳನ್ನು ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಕಿಶೋರ್ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿ ತಕ್ಷಣವೇ ಬಂಧಿಸಬೇಕು' ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಭೆಯನ್ನು ಉದ್ದೇಶಿಸಿ ಸಂಘಟನೆಯ ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರಿ, ಜಿಲ್ಲಾ ಸಂಘಟನಾ ಸಂಚಾಲಕರಾದ ರಘು ಎಕ್ಕಾರ್, ಕೃಷ್ಣಾನಂದ ಡಿ, ಸಾಮಾಜಿಕ ಕಾರ್ಯಕರ್ತೆ ಮಂಜುಳಾ ನಾಯಕ್, ಕರ್ನಾಟಕ ರಾಜ್ಯ ಮೀಸಲಾತಿ ಹೋರಾಟ ಸಮಿತಿಯ ಸಂಚಾಲಕ ಸುಭಾಷ್ ಕಾನಡೆ, ಸುಂದರ್ ಮೇರ, ದಿನೇಶ್ ಮೂಳೂರು ಮಾತಾಡಿದರು.
‘ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾದ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಸರ್ವಧರ್ಮ, ಭಾಷೆ, ಪ್ರಾಂತ್ಯಗಳನ್ನು ಸಮಾನವಾಗಿ ಪರಿಗಣಿಸಿದೆ. ಈ ಜಾತ್ಯತೀತ ವ್ಯವಸ್ಥೆಯ ಅಡಿಪಾಯವೇ ಸಂವಿಧಾನ. ಸರ್ವರಿಗೂ ಸಮಪಾಲು ಸಮಬಾಳು ಪರಿಕಲ್ಪನೆಯ ಸಂವಿಧಾನವನ್ನು ಧರ್ಮಾಂಧ ಮನುವಾದಿಗಳು ವಿರೋಧಿಸುತ್ತಲೇ ಬಂದಿದ್ದಾರೆ. ಈ ಘಟನೆ ಅದರ ಮುಂದುವರಿದ ಭಾಗ’ ಎಂದು ಸಂಘಟನೆಯ ಪ್ರಮುಖರು ಆರೋಪಿಸಿದರು.
ಕಮಲಾಕ್ಷ ಬಜಾಲ್, ರವಿ ಪಡ್ಪು, ಸಂಕಪ್ಪ ಕಾಂಚನ್, ಗಂಗಾಧರ ಜೋಕಟ್ಟೆ, ಅಣ್ಣು ಸಾಧನ ಬೆಳ್ತಂಗಡಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಕೀಲ ಕಿಶೋರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಂಘಟನೆಯ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.