
ಬೆಳ್ತಂಗಡಿ: ‘ದೆಹಲಿಯಲ್ಲಿ ನಿರ್ಭಯಾ ಎಂಬ ಹೆಣ್ಣುಮಗಳ ಮೇಲಿನ ಅತ್ಯಾಚಾರಕ್ಕೆ ಶೀಘ್ರ ನ್ಯಾಯ ಸಿಗುತ್ತದೆ ಎಂದಾದರೆ, ಧರ್ಮಸ್ಥಳ ಗ್ರಾಮ ಹಾಗೂ ಸುತ್ತಮುತ್ತ ನಡೆದ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ಕೊಲೆ, ಅಸಹಜ ಸಾವು ಪ್ರಕರಣಗಳಿಗೆ ಯಾಕೆ ನ್ಯಾಯ ಸಿಗುತ್ತಿಲ್ಲ? ಇದರ ಹಿಂದೆ ಬಲಾಢ್ಯರು ಇರಬಹುದೇ, ಅದಕ್ಕಾಗಿ ವ್ಯವಸ್ಥೆ ತಪ್ಪಿತಸ್ಥರನ್ನು ಪತ್ತೆ ಮಾಡುತ್ತಿಲ್ಲವೇ ಎಂಬ ಅನುಮಾನ ನಮ್ಮನ್ನೆಲ್ಲ ಕಾಡುತ್ತಿದೆ’ ಎಂದು ‘ಕೊಂದವರು ಯಾರು?‘ ಆಂದೋಲನದ ಹೋರಾಟಗಾರ್ತಿ ಜ್ಯೋತಿ ಎ. ಹೇಳಿದರು.
‘ಕೊಂದವರು ಯಾರು?‘ ಆಂದೋಲನದ ನೇತೃತ್ವದಲ್ಲಿ ಮಂಗಳವಾರ ಇಲ್ಲಿ ನಡೆದ ಮಹಿಳಾ ನ್ಯಾಯ ಸಮಾವೇಶದಲ್ಲಿ ಅವರು ಮಾತನಾಡಿದರು.
‘ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಸಂದರ್ಭದಲ್ಲಿ ಮಹಿಳೆಯರು ತೀವ್ರ ಘಾಸಿಗೊಂಡರೂ, ಪ್ರಕರಣಕ್ಕೆ ಶೀಘ್ರ ನ್ಯಾಯ ದೊರೆಯುವ ಮೂಲಕ ವ್ಯವಸ್ಥೆಯ ಮೇಲೆ ವಿಶ್ವಾಸ ಮೂಡುವ ಬೆಳವಣಿಗೆಗಳು ನಡೆದವು. ಬಲಿಯಾದ ಯುವತಿಯ ನೆಪದಲ್ಲಿ ಬದುಕಿರುವ ಹೆಣ್ಣು ಮಕ್ಕಳ ರಕ್ಷಣೆಗೆ ಕಾನೂನು ರಚನೆಯಾದವು. ನ್ಯಾ. ವರ್ಮ ಸಮಿತಿ ರಚನೆಯಾಯಿತು. ಆದರೆ, ಧರ್ಮಸ್ಥಳ ಗ್ರಾಮದ ಸುತ್ತಮತ್ತ ನಡೆದ ಹೆಣ್ಣು ಮಕ್ಕಳ ಅಸಹಜ ಸಾವುಗಳಿಗೆ ಯಾಕೆ ನ್ಯಾಯ ಸಿಗುತ್ತಿಲ್ಲ? ಕೊಂದವರು ಯಾರು, ನಾಪತ್ತೆಯಾದ ಹೆಣ್ಣು ಮಕ್ಕಳು ಎಲ್ಲಿ ಹೋದರು ಎಂಬುದೇ ಯಕ್ಷಪ್ರಶ್ನೆಯಾಗಿದೆ’ ಎಂದರು.
‘ವೇದವಲ್ಲಿ ಪ್ರಕರಣದಿಂದ ಇಲ್ಲಿಯವರೆಗೆ ಅನೇಕ ಪ್ರಕರಣಗಳು ನಡೆದರೂ ಹೆಣ್ಣು ಮಕ್ಕಳಿಗೆ ನ್ಯಾಯ ಸಿಕ್ಕಿಲ್ಲ. ಯಾವ ಪ್ರಕರಣವೂ ತಾರ್ಕಿಕ ಅಂತ್ಯ ಮುಟ್ಟಿಲ್ಲ ಅಥವಾ ಮುಟ್ಟಿಸಿಲ್ಲ. ಹೀಗಾಗಿ, ಕೊಂದವರನ್ನು ಪತ್ತೆ ಮಾಡಿ ಎಂದು ಕೇಳಲು ನಾವು ಬಂದಿದ್ದೇವೆ’ ಎಂದು ಹೇಳಿದರು.
‘2014ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಅಧ್ಯಯನಕ್ಕೆ ರಚಿಸಿದ್ದ ಸಮಿತಿಯಲ್ಲಿ ನಾನೂ ಸದಸ್ಯಳಾಗಿದ್ದೆ. ಸಮಿತಿ ಸಭೆಯ ವೇಳೆ ಪೊಲೀಸ್ ಅಧಿಕಾರಿ ನೀಡಿದ ಮಾಹಿತಿ ಆಧರಿಸಿ, ಸಮಿತಿ ಅಧ್ಯಕ್ಷ ಉಗ್ರಪ್ಪ ಅವರು, ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಸಹಜ ಸಾವಿನ ಬಗ್ಗೆ ಅಧ್ಯಯನ ಆಗಬೇಕು ಎಂದು ಹೇಳಿದ್ದರು. ಆದರೆ ಈವರೆಗೂ ಆ ಕಾರ್ಯ ನಡೆದಿಲ್ಲ’ ಎಂದು ಹೇಳಿದರು.
ಪಟ್ಟಣದ ಮಾರಿಗುಡಿಯಿಂದ ಮಿನಿ ವಿಧಾನಸೌಧದವರೆಗೆ ಬಾಯಿಗೆ ಕಪ್ಪುಪಟ್ಟಿ ಕಟ್ಟಿ ಮೌನ ಮೆರವಣಿಗೆ ನಡೆಸಲಾಯಿತು. ನಂತರ ನಡೆದ ಸಮಾವೇಶದಲ್ಲಿ ಲೇಖಕಿಯರಾದ ವಿಜಯಾ ದಬ್ಬೆ, ವಿನಯಾ ಒಕ್ಕುಂದ ಬರೆದ ಪದ್ಯಗಳನ್ನು ಕಾರ್ಯಕರ್ತೆಯರು ಹಾಡಿದರು. ಕೆಲವರು ಸ್ವರಚಿತ ಕವನ ವಾಚಿಸಿದರು.
ಕರುಳು ಕುಡಿ ಕಳೆದುಕೊಂಡಿರುವ ಕುಸುಮಾವತಿ, ಇಂದ್ರಾವತಿ, ಸಿಂಧು ಅವರಿಗೆ ತ್ಯಾಜ್ಯ ಶ್ರಮಿಕರ ಸಂಘದಿಂದ ಹಲಸಿನ ಗಿಡ ನೀಡಲಾಯಿತು. ಬೀದರ್, ಕಲಬುರಗಿ, ಚಿತ್ರದುರ್ಗ, ತುಮಕೂರು, ಹಾಸನ, ಚಿಕ್ಕಮಗಳೂರು ಮೊದಲಾದ ಜಿಲ್ಲೆಗಳಿಂದ ಬಂದಿದ್ದ ಹೋರಾಟಗಾರ್ತಿಯರು ಕೊಂದವರು ಯಾರು ಆಂದೋಲನದ ಮಲ್ಲಿಗೆ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು. ಇವೆಲ್ಲವನ್ನೂ ಒಟ್ಟುಗೂಡಿಸಿ ನಂತರ ತಹಶೀಲ್ದಾರ್ ಪೃಥ್ವಿ ಸಾನಿಕಂ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.
‘ಹಿಂದಿರುವ ಶಕ್ತಿ ಯಾವುದು?’
‘ಧರ್ಮಸ್ಥಳ ಗ್ರಾಮದ ಸುತ್ತಮುತ್ತ ಹೆಣ್ಣು ಮಕ್ಕಳ ಅಸಹಜ ಸಾವಿನ ಪ್ರಕರಣಗಳು ನಡೆದಿವೆ. ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದ ಹೆಣ್ಣುಮಕ್ಕಳು ಕೇಳುವುದು ಒಂದೇ ಪ್ರಶ್ನೆ ಈ ಕೃತ್ಯ ನಡೆಸಿದವರು ಯಾರು? ಸಣ್ಣ ಸಣ್ಣ ಪ್ರಕರಣಗಳಲ್ಲೂ ಅಪರಾಧಿಗಳನ್ನು ಗುರುತಿಸಿ ಶಿಕ್ಷೆಗೆ ಒಳಪಡಿಸುತ್ತೇವೆ. ಆದರೆ ಇಲ್ಲಿ ಮಾತ್ರ ಯಾಕೆ ಅಪರಾಧಿಗಳಿಗೆ ಶಿಕ್ಷೆ ಆಗುತ್ತಿಲ್ಲ. ಇದರ ಹಿಂದಿರುವ ಶಕ್ತಿ ಯಾವುದು’ ಎಂದು ಲೇಖಕಿ ಪ್ರೊ. ಸಬಿಹಾ ಭೂಮಿ ಗೌಡ ಪ್ರಶ್ನಿಸಿದರು.
ನೊಂದಜೀವಗಳಿಗೆ ಸಾಂತ್ವನ ಸಿಗಬೇಕು ಸಮಾಜದಲ್ಲಿ ಪರಿವರ್ತನೆ ಬರಬೇಕು ಘನತೆ ಮತ್ತು ಪ್ರೀತಿ ಈ ನೆಲದಲ್ಲಿ ಮೊಳಕೆ ಯೊಡೆಯಬೇಕು. ಅಲ್ಲಿಯವರೆಗೆ ಹೋರಾಟ ಮುಂದುವರಿಯುತ್ತದೆ.–ಮಲ್ಲಿಗೆ, ಹೋರಾಟಗಾರ್ತಿ
ಎಲ್ಲರಂತೆ ಮಹಿಳೆಯರಿಗೂ ಬದುಕುವ ಹಕ್ಕು ಇದೆ. ನಾವೂ ಘನತೆಯಿಂದ ಬದುಕಬೇಕು. ಬದುಕಿದವರನ್ನು ಹಿಸುಕಿ ಹಾಕುವವರು ಮನುಷ್ಯರಾ? ಅವರಿಗೆ ತಾಯಿ ಅಕ್ಕ–ತಂಗಿಯರ ನೆನಪು ಬರಲಾರದಾ?–ಅನಸೂಯಮ್ಮ ,ರೈತ ಹೋರಾಟದ ನಾಯಕಿ
ಈ ನೆಲದಲ್ಲಿ ಮಹಿಳೆಯರ ನೋವಿನ ಅಳು ಕೇಳಿಸುತ್ತಿದೆ. ನಮಗೆ ನ್ಯಾಯ ಸಿಗಬೇಕು ಸಿಕ್ಕೇ ಸಿಗುತ್ತದೆ. ಅಲ್ಲಿಯವರೆಗೂ ಹೋರಾಡುತ್ತೇವೆ.–ಬಿ.ಎಂ. ರೋಹಿಣಿ, ಸಾಹಿತಿ
ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಎಲ್ಲ ಪ್ರಕರಣಗಳ ತನಿಖೆ ಆಗಬೇಕು. ನಮ್ಮ ಹೋರಾಟಕ್ಕೆ ದನಿಗೂಡಿಸುವವರ ಸಂಖ್ಯೆ ಹೆಚ್ಚುತ್ತಿದೆ. ನ್ಯಾಯ ಸಿಗುವ ಭರವಸೆ ಮೂಡಿದೆ.–ಶಶಿಕಲಾ, ಹೋರಾಟಗಾರ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.