ADVERTISEMENT

ತಲಪಾಡಿ: ನೇಣುಬಿಗಿದ ಸ್ಥಿತಿಯಲ್ಲಿ ಕಳೇಬರ ಪತ್ತೆ

ನಾಪತ್ತೆಯಾಗಿದ್ದ ವಲಸೆ ಕಾರ್ಮಿಕನ ಮೃತದೇಹ ಎಂಬ ಶಂಕೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 4:31 IST
Last Updated 9 ಅಕ್ಟೋಬರ್ 2025, 4:31 IST
ಕಳೇಬರವನ್ನು ಪರಿಶೀಲಿಸುತ್ತಿರುವ ತನಿಖಾ ತಂಡ
ಕಳೇಬರವನ್ನು ಪರಿಶೀಲಿಸುತ್ತಿರುವ ತನಿಖಾ ತಂಡ   

ಉಳ್ಳಾಲ: ತಲಪಾಡಿ ಸಮೀಪದ ದೇವಿಪುರ ರಸ್ತೆಯ ಅಕ್ಷಯ ಫಾರ್ಮ್‌ನ ಪೊದೆಗಳಲ್ಲಿ ಅಪರಿಚಿತ ಮೃತದೇಹದ ಕಳೇಬರ ಪತ್ತೆಯಾಗಿದೆ.

ಲುಂಗಿಯೊಂದು ಮರದಲ್ಲಿ ಕಟ್ಟಿರುವ ಸ್ಥಿತಿಯಲ್ಲಿರುವುದರಿಂದ ನೇಣು ಬಿಗಿದು ಸತ್ತಿರುವ ಶಂಕೆಯಿದೆ. ಸ್ಥಳದಲ್ಲಿ ಸಿಕ್ಕ ಮೊಬೈಲ್‌ ಸಿಮ್‌ ಆಧಾರದಡಿ ಮಂಜೇಶ್ವರ ಪೊಲೀಸ್‌ ಠಾಣಾ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ ವಲಸೆ ಕಾರ್ಮಿಕನಾಗಿರುವ ಶಂಕೆಯಿದೆ. ಎಫ್‌ಎಸ್‌ಎಲ್‌ ವರದಿ ಬಳಿಕ ದೃಢವಾಗಲಿದೆ. ಮರಕ್ಕೆ ಕಟ್ಟಿರುವ ಲುಂಗಿಯನ್ನು ಆಧರಿಸಿ ಇದೊಂದು ಕೊಲೆ ನಡೆಸಿ ನೇತು ಹಾಕಿದ್ದಾರೆಂಬ ಶಂಕೆಯೂ ವ್ಯಕ್ತವಾಗಿದೆ.

ಮಂಜೇಶ್ವರ ಠಾಣಾ ವ್ಯಾಪ್ತಿಯ ಕುಂಜತ್ತೂರಿನ ಫರ್ನಿಚರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ರಾಹುಲ್ ಕುಮಾರ್ (17) ಎಂಬಾತ ಆ. 7ರಂದು ನಾಪತ್ತೆಯಾಗಿದ್ದ. ಮಂಜೇಶ್ವರ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಪೊಲೀಸರಿಂದ ಶೋಧ ಕಾರ್ಯ, ತನಿಖೆ ನಡೆಯದೆ ಇದ್ದುದರಿಂದ ಮೃತದೇಹ ಸಾಕ್ಷ್ಯವಿಲ್ಲದ ಬರೀ ಕಳೇಬರ ಪತ್ತೆಯಾಗುವಂತಾಗಿದೆ.

ADVERTISEMENT

ಸ್ಥಳದಲ್ಲಿ ಹಸಿರು ಬರ್ಮುಡ ಚಡ್ಡಿ, ಹಸಿರು ಟಿ ಶರ್ಟ್ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಗಂಡಸಿನ ದೇಹದ ಅವಶೇಷಗಳಂತೆ ಕಾಣುತ್ತಿತ್ತು. ಮರದ ಗೆಲ್ಲಲ್ಲಿ ನೈಲಾನ್ ಹಗ್ಗದ ನೇಣಿನ ಕುಣಿಕೆ ಇದ್ದು ಅದರಲ್ಲಿ ಹೆಡ್‌ಫೋನ್, ಎಲುಬುಗಳು ನೇತಾಡುತ್ತಿತ್ತು. ಬರ್ಮುಡ ಚಡ್ಡಿಯಲ್ಲಿ ಮೊಬೈಲ್ ಫೋನ್ ಕೂಡ ಪತ್ತೆಯಾಗಿತ್ತು. ಅಸ್ಥಿಪಂಜರದ ಅವಶೇಷಗಳ ಜೊತೆಯಲ್ಲಿ ದೊರೆತ ಮೊಬೈಲ್ ಸಿಮ್‌ಕಾರ್ಡ್ ಸಂಖ್ಯೆ, ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದ ರಾಹುಲ್ ಮೊಬೈಲ್ ಸಂಖ್ಯೆ ತಾಳೆಯಾಗಿದ್ದು, ಕಳೇಬರ ಆತನದ್ದು ಎಂದು ಪೊಲೀಸರು ಶಂಕಿಸಿದ್ದಾರೆ.

ಉಳ್ಳಾಲ ಪೊಲೀಸರು, ಸೋಕೊ (ಸೀನ್ ಆಫ್ ಕ್ರೈಂ ಆಫೀಸರ್ಸ್) ತಂಡ ಬುರುಡೆ, ಎಲುಬುಗಳು ಮತ್ತು ಇತರ ಅವಶೇಷಗಳನ್ನು ಸಂಸ್ಕರಿಸಿ ಎಫ್ಎಸ್ಎಲ್ ಪರಿಶೀಲನೆಗೆ ಕಳುಹಿಸಿದ್ದಾರೆ. ಅಕ್ಷಯ ಫಾರ್ಮ್ ಸುತ್ತಲೂ ಆವರಣ ಗೋಡೆಯಿದ್ದು, ಇದರೊಳಗೆ ಕುಂಜತ್ತೂರಿನ ವಲಸೆ ಕಾರ್ಮಿಕ ಹೇಗೆ ಬಂದ. ಸಾವು ಹೇಗಾಯಿತು‌. ಆತ್ಮಹತ್ಯೆಯೋ ಅಥವಾ ಕೊಲೆ ಮಾಡಿ ಮರಕ್ಕೆ ನೇತು ಹಾಕಲಾಗಿದೆಯೋ ಎಂಬಶಂಕೆಯಲ್ಲಿ ಉಳ್ಳಾಲ, ಮಂಜೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.