ADVERTISEMENT

 ದಕ್ಷಿಣ ಕನ್ನಡ | ತಲಪಾಡಿ: ರಾ.ಹೆ.66ರ ಬಳಿಯ ಹಲವು ಅಂಗಡಿಗಳಿಗೆ ನುಗ್ಗಿದ ಕಳ್ಳರು

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2022, 3:08 IST
Last Updated 10 ಡಿಸೆಂಬರ್ 2022, 3:08 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಉಳ್ಳಾಲ:ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗವಾದ ತಲಪಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿಯ ಆರು ಅಂಗಡಿಗಳಿಗೆ ನುಗ್ಗಿದ ಕಳ್ಳರು ಸಾವಿರಾರು ರೂಪಾಯಿ ಬೆಲೆಬಾಳುವ ಸೊತ್ತುಗಳನ್ನು ಕಳವು ಮಾಡಿರುವುದು ಶನಿವಾರ ಬೆಳಿಗ್ಗೆ ಗೊತ್ತಾಗಿದೆ.

ಅಶ್ರಫ್ , ಕುಲದೀಪ್, ಶ್ರೀಧರ್ ಹಾಗೂ ಮಹಮ್ಮದ್ , ಶಂಕರ್ ಎಂಬುವರಿಗೆ ಸೇರಿದ ಅಂಗಡಿಗಳಿಂದ ಸಾವಿರಾರು ರೂಪಾಯಿ ಬೆಲೆಬಾಳುವ ಸಿಗರೇಟ್ ಹಾಗೂ ಡ್ರಾಯರ್ನಲ್ಲಿದ್ದ ನಗದು ಕದ್ದೊಯ್ದಿದ್ದಾರೆ. ಅಶ್ರಫ್ ಎಂಬವರಿಗೆ ಸೇರಿದ ಝೆರಾಕ್ಸ್ ಅಂಗಡಿಯಿಂದ ನಗದು ಕಳುವಾಗಿದೆ. ರಾತ್ರಿ ವೇಳೆ ಎಲ್ಲಾ ಅಂಗಡಿಗಳ ಬೀಗ ಮುರಿದಿರುವ ಕಳ್ಳರು ಕೈಚಳಕ ತೋರಿಸಿದ್ದಾರೆ. ಕೇರಳದ ಮಂಜೇಶ್ವರ ಹಾಗೂ ಕುಂಜತ್ತೂರು ಭಾಗದಲ್ಲಿಯೂ ಇದೇ ರೀತಿಯ ಕಳವು ಕೃತ್ಯ ನಡೆದಿತ್ತು. ಇದೀಗ ತಲಪಾಡಿಗೂ ವ್ಯಾಪಿಸಿದೆ. ಗಡಿಭಾಗ ತಲಪಾಡಿ ಗಾಂಜಾ ವ್ಯಸನಿಗಳ ಅಟ್ಟಹಾಸವೂ ಮಿತಿಮೀರಿದ್ದು , ಮದ್ಯವ್ಯಸನಿಗಳೇ ಕಳವು ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆಯಿದೆ.

ರಾತ್ರಿ ತಿರುಗಾಡುತ್ತಿದ್ದ ಮಾರುತಿ 800 !
ತಡರಾತ್ರಿ ವೇಳೆ ಅನುಮಾನಾಸ್ಪದ ರೀತಿಯಲ್ಲಿ ಮಾರುತಿ 800 ಕಾರು ತಿರುಗಾಡುತ್ತಿತ್ತು. ತಂಡ ಇದೇ ಕಾರಿನಲ್ಲಿ ಬಂದು ಕೃತ್ಯವೆಸಗಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ಪೊಲೀಸರ ಬಿಗಿಬಂದೋಬಸ್ತ್ ಇದ್ದರೂ ಕಳವು !
ಗಡಿಭಾಗ ತಲಪಾಡಿಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ನಡೆಸುತ್ತಿದ್ದರೂ ಕಳ್ಳರು ಸರಣಿಯಾಗಿ ಅಂಗಡಿಗಳಿಂದ ಕಳವು ನಡೆಸಿದ್ದಾರೆ. ಉಳ್ಳಾಲ ಠಾಣೆಯ ಇನ್ಸ್ ಪೆಕ್ಟರ್ ಮತ್ತು ಪಿಎಸ್ಐ ಅವರ ವಾಹನಗಳು, ಹೊಯ್ಸಳ ವಾಹನ ಇಲ್ಲಿ ತಿರುಗಾಡುತ್ತಿರುತ್ಣವೆ. ಪೊಲೀಸ್ ಸಿಬ್ಬಂದಿ ಬೈಕಿನಲ್ಲಿ ಗಸ್ತು ಕೈಗೊಳ್ಳುತ್ತಾರೆ. ಅಲ್ಲದೆ ಗಡಿಯಲ್ಲಿ 50 ರಷ್ಟು ಪೊಲೀಸರು ಬಂದೋಬಸ್ತ್ ಕರ್ತವ್ಯದಲ್ಲಿದ್ದಾರೆ. ಆದರೂ ಕಳ್ಳರು ಕೃತ್ಯ ಎಸಗಿರುವುದು ಅಚ್ಚರಿಗೆ ಕಾರಣವಾಗಿದೆ. ವಾಹನ ತಪಾಸಣೆ ಕೇಂದ್ರ ಕೂಡ ತಲಪಾಡಿಯಲ್ಲಿ ಇದ್ದರೂ, ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ವಾಹನಗಳನ್ನು ಪರಿಶೀಲಿಸಿಲ್ಲವೇ ಅನ್ನುವ ಕುರಿತು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.