ಮಂಗಳೂರು: ತಾರಸಿ ಕೈತೋಟ ತರಬೇತಿ ನೀಡುವ ಕಾರ್ಯಕ್ರಮವನ್ನು ರಾಜ್ಯದ ಎಲ್ಲ ಜಿಲ್ಲೆ, ತಾಲ್ಲೂಕುಗಳಲ್ಲಿ ನಡೆಸಲು ಯೋಚಿಸಲಾಗುವುದು ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಹೇಳಿದರು.
ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಮಹಿಳಾ ಘಟಕದ ನೇತೃತ್ವದಲ್ಲಿ ಶನಿವಾರ ಇಲ್ಲಿ ನಡೆದ ತಾರಸಿ ತೋಟದ ಕುರಿತ ಉಚಿತ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಪ್ರಕೃತಿ ನಮಗೆ ಎಲ್ಲವನ್ನೂ ಕೊಟ್ಟಿದೆ. ಮೂಕಪ್ರಾಣಿಗಳು ಪ್ರಕೃತಿಯನ್ನು ಪೋಷಿಸುತ್ತವೆ. ಆದರೆ, ಮನುಷ್ಯ ದುರಾಸೆಯಿಂದ ಪ್ರಕೃತಿಯನ್ನು ಬೇಕಾಬಿಟ್ಟಿ ಬಳಸಿ ಹಾಳು ಮಾಡುತ್ತಿದ್ದಾನೆ. ಮನುಷ್ಯನನ್ನು ಹೊರತುಪಡಿಸಿ, ನಿಸರ್ಗದಲ್ಲಿ ಸೃಷ್ಟಿಯಾಗುವ ಪ್ರತಿಯೊಂದೂ ನಿಸರ್ಗಕ್ಕೆ ಪೂರಕವಾದುದನ್ನೇ ಕೊಡುತ್ತದೆ. ಮನುಷ್ಯರಾದ ನಾವು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ’ ಎಂದರು.
‘ತಾರಸಿ ತೋಟಗಳು ಉದ್ಯೋಗ ಮತ್ತು ಉಪಯೋಗ ಎರಡಕ್ಕೂ ಅನುಕೂಲ. ಇಂದಿನ ಕಲಬೆರಕೆ ಆಹಾರ ಜೀವಕ್ಕೆ ಅಪಾಯಕಾರಿಯಾಗಿದ್ದು, ನಮಗೆ ಬೇಕಾಗಿದ್ದನ್ನು ನಾವು ಬೆಳೆಸಿಕೊಳ್ಳುವುದು ಉತ್ತಮ. ಬೇರೆಯವರನ್ನು ದೂಷಿಸುವುದು ನಮಗೆ ರೂಢಿಯಾಗಿ ಬಿಟ್ಟಿದೆ. ಸರ್ಕಾರವನ್ನು ಅಧಿಕಾರಕ್ಕೆ ತರುವವರೂ ನಾವೇ, ನಂತರ ವ್ಯವಸ್ಥೆಯನ್ನು ಟೀಕಿಸುವವರೂ ನಾವೇ. ಟೀಕೆಗಿಂತ ಸಕಾರಾತ್ಮಕ ಯೋಚನೆ ಬೆಳೆಸಿಕೊಂಡು ಸಮಾಜಕ್ಕೆ ಒಳಿತನ್ನು ಮಾಡಲು ಪ್ರಯತ್ನಿಸಬೇಕು’ ಎಂದು ಹೇಳಿದರು.
ಆಪ್‌ನ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ವಿದ್ಯಾ ರಾಜೇಶ್ ತರಬೇತಿ ಉದ್ಘಾಟಿಸಿದರು. ಕಾಮಾಕ್ಷಿ ವಾಮನ್, ಹರಿಶ್ಚಂದ್ರ, ವಿಶುಕುಮಾರ್ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. 200ಕ್ಕೂ ಹೆಚ್ಚು ಜನರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.