
ಛಾಯಾಚಿತ್ರ ಪ್ರದರ್ಶನ
ಮಂಗಳೂರು: ಕಲಾವಿದರು, ಲೇಖಕರು, ಆಟಗಾರರು ಸೇರಿದಂತೆ ನಾಡಿನ ಶ್ರೇಷ್ಠ ವ್ಯಕ್ತಿಗಳ ವ್ಯಕ್ತಿತ್ವ ಒಂದು ಭಾಗದಲ್ಲಿ. ಹಕ್ಕಿಗಳು, ಗುಡ್ಡಗಳು, ಪರಿಸರ, ಸುಂದರ ಮನೆ, ಅರಮನೆ ಮುಂತಾದವು ಮತ್ತೊಂದು ಕಡೆ. ಮಕ್ಕಳ ಕಲರವ, ಭರತನಾಟ್ಯದ ವೈಭವ, ಯುದ್ಧ ವಿಮಾನಗಳ ಸೊಬಗು ಇನ್ನೊಂದು ಪಾರ್ಶ್ವದಲ್ಲಿ. ಎಲ್ಲದಕ್ಕೂ ಮೆರುಗು ತುಂಬಲು ಮಂಡಲ ಕಲೆ ಮತ್ತು ತಂತಿ ಕಲೆ.
ತಂದೆ ಮತ್ತು ಮಗಳ ‘ದಿ ಡ್ಯಾಪರ್ ಎಕ್ಸ್‌ಪೊ’ ಹೆಸರಿನಲ್ಲಿ ನಗರದ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಶನಿವಾರ ಆರಂಭಗೊಂಡಿರುವ ಕಲಾ ಪ್ರದರ್ಶನದಲ್ಲಿರುವ ವೈವಿಧ್ಯಮಯ ಕಲಾಕೃತಿಗಳು ಕಲೆಯ ಆಸ್ವಾದನೆಗೆ ಅವಕಾಶ ಒದಗಿಸುವುದರೊಂದಿಗೆ ಅಭಿವ್ಯಕ್ತಿಯ ವಿವಿಧ ಆಯಾಮಗಳನ್ನೂ ತೆರೆದಿಡುತ್ತವೆ.
ಉದಯಕೃಷ್ಣ ಮತ್ತು ನಿಯತಿ ಭಟ್ ಅವರು ವಿಭಿನ್ನ ಮಾಧ್ಯಮಗಳ ಮೂಲಕ ರಚಿಸಿದ ಭಿನ್ನ ವಿನ್ಯಾಸದ ಕೃತಿಗಳು ಪ್ರದರ್ಶನದಲ್ಲಿವೆ. ಉದಯಕೃಷ್ಣ ಅವರ ವ್ಯಕ್ತಿಚಿತ್ರಗಳು ಹೆಚ್ಚು ಇದ್ದರೆ ನಿಯತಿ ಅವರ ಛಾಯಾಚಿತ್ರಗಳು ಮತ್ತು ಮಂಡಲ, ತಂತಿಕಲೆ ಗಮನ ಸೆಳೆಯುತ್ತಿದೆ.
ಪ್ರದರ್ಶನದ ಅಂಗಣಕ್ಕೆ ಪ್ರವೇಶಿಸುತ್ತಿದ್ದಂತೆ ಎಡಭಾಗದಲ್ಲಿ ಕಪ್ಪು–ಬಿಳುಪು ವ್ಯಕ್ತಿಚಿತ್ರಗಳ ಸಾಲು ಇದೆ. ಕುವೆಂಪು, ಮಾಸ್ತಿ, ಎಸ್.ಎಲ್ ಭೈರಪ್ಪ, ಕುಂಬ್ಳೆ ಸುಂದರರಾವ್, ಲತಾ ಮಂಗೇಶ್ಕರ್, ಬಾಲಮುರಳಿಕೃಷ್ಣ, ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ಜೊತೆಯಲ್ಲಿ ವಲ್ಲಭಬಾಯಿ ಪಟೇಲ್, ಅಟಲ್ ಬಿಹಾರಿ ವಾಜಪೇಯಿ, ದ್ರೌಪದಿ ಮುರ್ಮು, ವೀರೇಂದ್ರ ಹೆಗ್ಗಡೆ ಇದ್ದಾರೆ. ಕ್ರೀಡಾಪಟುಗಳಾದ ಕಪಿಲ್ ದೇವ್, ಸುನಿಲ್ ಗಾವಸ್ಕರ್, ಪಿ.ವಿ ಸಿಂಧು, ಸಿನಿಮಾ ನಟರಾದ ಅಮಿತಾಬ್ ಬಚ್ಚನ್, ಶ್ರೀದೇವಿ, ಪುನೀತ್ ರಾಜಕುಮಾರ್ ಮಾತ್ರವಲ್ಲದೆ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಸೇರಿದಂತೆ ಗೋಡೆ ತುಂಬ ವ್ಯಕ್ತಿತ್ವಗಳೇ ಶೋಭಿಸುತ್ತಿವೆ.
ಸಮೀಪದ ಗೋಡೆಯಲ್ಲಿ ‘ಪೋರ್ಟ್‌ಫೋಲಿಯೊ’ಗಳು ತುಂಬಿವೆ. ಮಕ್ಕಳ ನಾನಾ ಶೈಲಿಗಳು, ಭರತನಾಟ್ಯದ ಭಂಗಿಗಳು ಇದರಲ್ಲಿವೆ. ಜಲವರ್ಣದಲ್ಲಿ ಮಹಾತ್ಮ ಗಾಂಧಿ, ಕರಾಟೆಪಟು ಬ್ರೂಸ್‌ಲೀ ಮುಂತಾದವರನ್ನು ಕಟ್ಟಿಕೊಟ್ಟರೆ ಛಾಯಾಗ್ರಹಣದಲ್ಲಿ ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆ, ಮೈಸೂರು ಅರಮನೆ ಮುಂತಾದವು ಶೋಭಿಸುತ್ತಿವೆ. ‘ಸ್ಟೋರಿ ಇಲ್ಲುಸ್ಟ್ರೇಷನ್’ ವಿಭಾಗವೂ ಗಮನ ಸೆಳೆಯುತ್ತಿದೆ.
ನಿಯತಿ ಅವರು ವನ್ಯಜೀವಿಗಳ ಕಡೆಗೆ ಹೆಚ್ಚು ಗಮನ ನೀಡಿದ್ದಾರೆ. ಚಿರತೆ, ಬಗೆಬಗೆಯ ಬಾನಾಡಿಗಳ ಹಾರಾಟ, ಕುಳಿತುಕೊಳ್ಳುವ ಮಾದರಿಯನ್ನು ಛಾಯಾಗ್ರಹಣದಲ್ಲಿ ಹಡಿದಿಟ್ಟಿರುವ ಅವರು ಮೈಸೂರಿನ ಚಾಮರಾಜೇಂದ್ರ ವೃತ್ತ, ಅರಮನೆಯ ಒಂದು ಭಾಗ, ಮರಗಳು, ಹಾರಾಡುತ್ತಿರುವ ವಿಮಾನಗಳನ್ನೂ ಪರಿಚಯಿಸಿದ್ದಾರೆ. ಅಂಡರ್ ವಾಟರ್ ಫೊಟೊಗ್ರಫಿಯಲ್ಲಿ ನೀರಿನ ಒಳಗಿನ ಚಿತ್ರಣಗಳನ್ನೂ ತೋರಿಸಿದ್ದಾರೆ.
ನಿವೃತ್ತ ಪ್ರಾಂಶುಪಾಲ ಪ್ರೊ.ಜಿ.ಎನ್ ಭಟ್ ಕಲಾಪ್ರದರ್ಶನಕ್ಕೆ ಚಾಲನೆ ನೀಡಿದರು. ಕಲಾವಿದರಾದ ಪ್ರೊ.ಶಂಕರ್, ಹಾಗೂ ಗಣೇಶ್ ಸೋಮಯಾಜಿ ಪಾಲ್ಗೊಂಡಿದ್ದರು. ಜ.19ರ ವರೆಗೆ ಬೆಳಿಗ್ಗೆ 10ರಿಂದ ಸಂಜೆ 7.30ರ ವರೆಗೆ ಚಿತ್ರಗಳ ವೀಕ್ಷಣೆಗೆ ಮುಕ್ತ ಅಕವಾಶವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.