
ಮಂಗಳೂರು: ‘ವಿದ್ಯಾಭ್ಯಾಸಕ್ಕಾಗಿ ದೇಶ ವಿದೇಶಗಳಿಂದ ಜನ ಮಂಗಳೂರಿಗೆ ಬರುತ್ತಾರೆ. ಇಲ್ಲಿ ಕಲಿತವರು ಉದ್ಯೋಗ ಅರಸಿ ಬೆಂಗಳೂರು, ಮುಂಬೈ, ಅರಬ್ ದೇಶಗಳಿಗೆ ಹೋಗುತ್ತಿರುವುದು ವಿಪರ್ಯಾಸ. ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿ, ಇಲ್ಲೇ ಉದ್ಯೋಗಾವಕಾಶ ಸೃಷ್ಟಿಸುವ ಮೂಲಕ ಈ ಪರಿಸ್ಥಿತಿಯನ್ನು ಬದಲಿಸಬೇಕಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಶನಿವಾರ ಹೇಳಿದರು.
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲಾಡಳಿತಗಳ ಸಹಯೋಗದಲ್ಲಿ ಪ್ರವಾಸೋದ್ಯಮ ಇಲಾಖೆ ಏರ್ಪಡಿಸಿದ್ದ ‘ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶ’ದ ಸಮಾರೋಪದಲ್ಲಿ ಮಾತನಾಡಿದರು.
‘ಕರಾವಳಿಯ ಮೂರು ಜಿಲ್ಲೆಗಳಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಅವಕಾಶಗಳಿವೆ. ಇದನ್ನು ಸಮರ್ಥವಾಗಿ ಬಳಸಿಕೊಳ್ಳುವ ಕಾರ್ಯವನ್ನು ಯಾವ ಸರ್ಕಾರಗಳೂ ಮಾಡಿಲ್ಲ. ಈಗಲಾದರೂ ಅದನ್ನು ಮಾಡಬೇಕಿದೆ. ಇಲ್ಲಿ ಪ್ರವಾಸೋದ್ಯಮ ಅಭುವೃದ್ಧಿಪಡಿಸಲು ಮುಂದಾಗುವವರಿಗೆ ಸರ್ಕಾರ ಸಕಲ ನೆರವು ಒದಗಿಸಲಿದೆ’ ಎಂದರು.
‘ಕರಾವಳಿಯವರು ಪುಣೆ, ದುಬೈ, ಲಂಡನ್‌ನಂತಹ ಕಡೆಗಳಲ್ಲಿ ಉದ್ಯಮ ಬೆಳೆಸಿ ಯಶಸ್ವಿಯಾಗಿದ್ದಾರೆ. ಅವರು ಇಲ್ಲೇ ಉದ್ಯಮ ಸ್ಥಾಪಿಸಿದರೆ ಕರಾವಳಿ ಜಿಲ್ಲೆಗಳು ಬೆಳವಣಿಗೆ ಕಾಣಲಿವೆ’ ಎಂದರು.
‘ಪ್ರವಾಸೋದ್ಯಮ ಹಾಗೂ ಶಿಕ್ಷಣದಲ್ಲಿ ಕೇರಳ ನಮ್ಮ ರಾಜ್ಯಕ್ಕಿಂತ ಮುಂದಿದೆ. ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರ ಮುಂದಿದೆ. ಇಲ್ಲಿನ ತಲಾ ಆದಾಯ ಮಹಾರಾಷ್ಟ್ರಕ್ಕಿಂತ ಸ್ವಲ್ಪ ಕಡಿಮೆ ಇದೆ. ಪ್ರವಾಸೋದ್ಯಮ ಅಭಿವೃದ್ಧಿಯಾದರೆ, ಮಹಾರಾಷ್ಟ್ರವನ್ನೂ ಹಿಂದಿಕ್ಕಿ ಮುನ್ನಡೆಯುವ ಅವಕಾಶ ಮಂಗಳೂರಿಗೆ ಇದೆ’ ಎಂದರು.
ಕೇಂದ್ರಕ್ಕೆ ನಿಯೋಗ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಪ್ರವಾಸೋದ್ಯಮ ಅಭಿವೃದ್ಧಿಗೆ ಕರಾವಳಿ ನಿಯಂತ್ರಣ ವಲಯ (ಸಿಆರ್‌ಜೆಡ್) ನಿಯಮಗಳ ತೊಡಕು ಇರುವುದು ಗಮನಕ್ಕೆ ಬಂದಿದೆ. ಮುಖ್ಯಮಂತ್ರಿ, ನಾನು, ಪ್ರವಾಸೋದ್ಯಮ ಸಚಿವರು, ಈ ಭಾಗದ ಸಂಸದರ ನಿಯೋಗವನ್ನು ಕೇಂದ್ರ ಸರ್ಕಾರದ ಬಳಿ ಶೀಘ್ರವೇ ಕೊಂಡೊಯ್ದು ಈ ಸಮಸ್ಯೆ ಬಗೆಹರಿಸಲು ಕ್ರಮವಹಿಸಲಿದ್ದೇವೆ’ ಎಂದರು.
ಕರಾವಳಿಯ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಇರುವ ಅವಕಾಶಗಳು, ತೊಡಕುಗಳ ಕುರಿತು ವಿವಿಧ ಗೋಷ್ಠಿಗಳು ನಡೆದವು. ಅಧಿಕಾರಿಗಳು, ಕ್ರೆಡೈ, ವಾಣಿಜ್ಯ ಸಂಸ್ಥೆಗಳ ಪ್ರತಿನಿಧಿಗಳು, ಉದ್ಯಮಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.