
ಬಂಧನ (ಸಾಂದರ್ಭಿಕ ಚಿತ್ರ)
ಮಂಗಳೂರು:ವಿವಿಧ ಇನ್ಸ್ಟಾಗ್ರಾಂ ಖಾತೆಗಳಲ್ಲಿ ಮಾರಕಾಯುಧದ ಚಿತ್ರದೊಂದಿಗೆ ಬೆದರಿಕೆ ಸಂದೇಶ ಪ್ರಕಟಿಸಿದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಎಸ್‌ಐ ಅನಿತಾ ನಿಕ್ಕಂ ಅವರು ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡುವ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ‘ಟೀಮ್ ಟಾರ್ಗೆಟ್ 900’ ಇನ್‌ಸ್ಟಾ ಗ್ರಾಂ ಖಾತೆಯಲ್ಲಿ ಬೆದರಿಕೆ ಸಂದೇಶ ಇರುವುದನ್ನು ಗಮನಿಸಿದ್ದರು. ಅದರಲ್ಲಿ ‘ಶಹೀದ್ ಕಲಾಯಿ ಅಶ್ರಫ್ ಪ್ರತಿಯೊಂದು ರಕ್ತದ ಹನಿಗೂ ಉತ್ತರ ನೀಡಲೇ ಬೇಕು. ನೀನು ಇಲ್ಲಾ ... ಸಹೋದರ. ನಿಮ್ಮನ್ನು ಮರೆತಿಲ್ಲ. ಅನ್ಯಾಯವಾಗಿ ಕೊಂದ ಪಾಪಿಗಳನ್ನು ಮರೆತಿಲ್ಲ. ಶಹೀದ್ ಕಲಾಯಿ ಅಶ್ರಫ್ ಕೊಂದ ಪ್ರಮುಖ ಆರೋಪಿ ಭರತ್ ಕುಮ್ಡೇಲ್– ನಿನ್ನನ್ನೂ ಮರೆತಿಲ್ಲ. ಮರೆಯುವುದು ಇಲ್ಲಾ’ ಎಂಬ ಬರಹವನ್ನು ಭರತ್ ಕುಮ್ಡೇಲ್ ಭಾವಚಿತ್ರದ ಜೊತೆಗೆ ಹಂಚಿಕೊಂಡಿದ್ದರು. ಆ ಪೋಸ್ಟ್ ಅನ್ನು ‘ಕರಾವಳಿ ಅಫಿಷಿಯಲ್‘ ಖಾತೆಗೆ ಟ್ಯಾಗ್ ಮಾಡಿದ್ದರು.
‘ಇಮ್ಮು ಬಾಯಿ .ಫ್ಯಾನ್’ ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಕೈಯಲ್ಲಿ ಬಂದೂಕು ಹಿಡಿದಿರುವ ಚಿತ್ರವಿದೆ. ಅಪರಿಚಿತ ವ್ಯಕ್ತಿ ಕೈಯಲ್ಲಿ ಚೂರಿ ಹಿಡಿದಿರುವ ಹಿಡಿದಿರುವ ಚಿತ್ರವನ್ನು ‘ಟೀಮ್ ಟಾರ್ಗೆಟ್ # 900’, ‘ಟೀಮ್ ಟಾರ್ಗೆಟ್ _ಬಾಯ್_900’, ‘ಟೀಮ್ ಟಾರ್ಗೆಟ್ _ಮಂಗಳೂರು_900’ ‘ಟಾರ್ಗೆಟ್ ಬಾಯ್ 900’ , ‘ಕಿಂಗ್ಸ್ ಆಫ್ ಮಂಗಳೂರು’ ಮತ್ತಿತರ ಖಾತೆಗಳ ಮೂಲಕವೂ ಬೆದರಿಕೆ ಸಂದೇಶ ಹಂಚಿಕೊಳ್ಳಲಾಗಿದೆ. ‘ನಾವು ಪ್ರತೀಕಾರಕ್ಕೆ ಕಾಯುತ್ತಿದ್ದೇವೆ’ ಎಂಬ ಸಂದೇಶವನ್ನೂ ಹಂಚಿಕೊಂಡಿದ್ದಾರೆ. ದ್ವೇಷ ಹರಡಲು ಯತ್ನಿಸಿರುವ ಅಪರಿಚಿತ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.