ADVERTISEMENT

ಪ್ರವಾಸ ಸೆಲ್ಫಿಗೆ ಸೀಮಿತವಾಗದಿರಲಿ: ನಾಗತಿಹಳ್ಳಿ ಚಂದ್ರಶೇಖರ್

​ಪ್ರಜಾವಾಣಿ ವಾರ್ತೆ
Published 17 ಜೂನ್ 2023, 13:37 IST
Last Updated 17 ಜೂನ್ 2023, 13:37 IST
ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಶನಿವಾರ ನಡೆದ ‘ಫಿಲೊಕಲಿ’ ಕಾರ್ಯಕ್ರಮದಲ್ಲಿ ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಭಾಗವಹಿಸಿದ್ದರು. ವಿವೇಕ್ ಆಳ್ವ, ಡಾ.ನಾ.ದಾಮೋದರ ಶೆಟ್ಟಿ ಇದ್ದರು
ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಶನಿವಾರ ನಡೆದ ‘ಫಿಲೊಕಲಿ’ ಕಾರ್ಯಕ್ರಮದಲ್ಲಿ ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಭಾಗವಹಿಸಿದ್ದರು. ವಿವೇಕ್ ಆಳ್ವ, ಡಾ.ನಾ.ದಾಮೋದರ ಶೆಟ್ಟಿ ಇದ್ದರು   

ಮೂಡುಬಿದಿರೆ: ಪ್ರವಾಸ ಕಥನ ಎಂದರೆ ಕೇವಲ ಫೋಟೊ, ಸೆಲ್ಫಿಗಳಲ್ಲ. ಅಂತರದೃಷ್ಟಿಯಿಂದ ಆಸ್ವಾದಿಸುವುದು, ಧ್ಯಾನಸ್ಥ ಸ್ಥಿತಿಯಲ್ಲಿ ಗ್ರಹಿಸುವುದು, ಬದ್ಧತೆಯಿಂದ ಬರೆಯುವುದೇ ಆಗಿದೆ ಎಂದು ಸಾಹಿತಿ, ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.

ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಇಂಗ್ಲಿಷ್ ವಿಭಾಗವು ಕುವೆಂಪು ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಫಿಲೊಕಲಿ’ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ಬದುಕೊಂದು ಚಲನೆ. ನಾವೆಲ್ಲ ಅಲೆಮಾರಿ. ರಾಮನ ಚಲನೆಯೇ ರಾಮಾಯಣ. ಡಾರ್ವಿನ್‌ ಚಲನೆಯ ಪ್ರತಿಫಲವೇ ವಿಕಾಸವಾದ. ಹೀಗೆ ಪುರಾಣ, ಇತಿಹಾಸ, ವಿಜ್ಞಾನ, ಜನಪದ ಎಲ್ಲವೂ ಚಲನೆಯನ್ನು ಆಧರಿಸಿವೆ‘ ಎಂದರು.

ADVERTISEMENT

‘ಪಕ್ಕದ ಹಳ್ಳಿಗೆ ಹೋಗುವುದೂ ಪ್ರವಾಸ. ಅದೂ ನಿಮಗೆ ಅರಿವಲ್ಲದೆ ಜ್ಞಾನ ನೀಡುತ್ತದೆ. ಯಾವುದೇ ಪ್ರವಾಸಕ್ಕೂ ಮೊದಲು ಪೂರ್ವಸಿದ್ಧತೆ ಅಗತ್ಯ. ಎಲ್ಲ ಮಾಹಿತಿಯೂ ಜ್ಞಾನವಲ್ಲ. ಜ್ಞಾನ ನಿಮ್ಮದೇ ಅನುಭಾವ. ಪ್ರವಾಸಕ್ಕೆ ಹಾರುವ ರೆಕ್ಕೆ ಹಾಗೂ ತಳಕ್ಕಿಳಿಯುವ ಬೇರು ಬೇಕು. ವಿಶ್ವಬಂಧುತ್ವ ಎಲ್ಲದಕ್ಕಿಂತಲೂ ಅಗತ್ಯ‘ ಎಂದು ವಿವರಿಸಿದರು.

ರಂಗಕರ್ಮಿ ಡಾ.ನಾ.ದಾಮೋದರ ಶೆಟ್ಟಿ ಮಾತನಾಡಿ, ‘ಜ್ಞಾನ ಭಂಡಾರ ವೃದ್ಧಿಸಿಕೊಳ್ಳಲು ಓದು ಅಗತ್ಯ‘ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನರಾಂ ಸುಳ್ಯ, ಇಂಗ್ಲಿಷ್ ವಿಭಾಗದ ಚೈತ್ರಾ ಪೂಣಚ್ಚ, ಸಮನ್ ಸೈಯ್ಯದ್, ಸಾತ್ವಿಕ್, ನವ್ಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.