
ಉಜಿರೆ: ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆ ಆಶ್ರಯದಲ್ಲಿ ₹ 614 ಕೋಟಿ ವೆಚ್ಚದಲ್ಲಿ ಉಜಿರೆ-ಧರ್ಮಸ್ಥಳ- ಪೆರಿಯಶಾಂತಿ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಪರಿವರ್ತಿಸಿ ಡಾಂಬರೀಕರಣಗೊಳಿಸುವ ಕಾಮಗಾರಿಯ ಶಿಲಾನ್ಯಾಸ ಧರ್ಮಸ್ಥಳದಲ್ಲಿ ಶನಿವಾರ ನಡೆಯಿತು.
ಶಿಲಾನ್ಯಾಸ ನೆರವೇರಿಸಿದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಉಜಿರೆ-ಧರ್ಮಸ್ಥಳ-ಪೆರಿಯಶಾಂತಿ ಸ್ಪರ್‌ರಸ್ತೆ ವಿಸ್ತರಣೆ ಮತ್ತು ಡಾಂಬರೀಕರಣದಿಂದಾಗಿ ಧರ್ಮಸ್ಥಳಕ್ಕೆ ಬರುವ ಶೇ 90ರಷ್ಟು ಹೊರಜಿಲ್ಲೆಗಳ ಪ್ರವಾಸಿಗರು ಹಾಗೂ ಭಕ್ತರಿಗೆ ಪ್ರಯಾಣದ ಸಮಯ ಉಳಿತಾಯವಾಗಲಿದೆ ಎಂದರು.
ರಸ್ತೆಯ ಉಭಯ ಪಾರ್ಶ್ವಗಳಲ್ಲಿರುವ ಗುಡ್ಡಗಳಲ್ಲಿ ಕವರ್‌ಕ್ರಾಪ್ ಗಿಡ ಬೆಳೆಸಿ ಮಳೆಗಾಲದಲ್ಲಿ ಗುಡ್ಡ ಕುಸಿತ ತಡೆಗಟ್ಟಬಹುದು. ಧರ್ಮಸ್ಥಳದ ಪ್ರವೇಶದ್ವಾರದಿಂದ ನೇತ್ರಾವತಿ ಸ್ನಾನಘಟ್ಟ ಸಂಪರ್ಕಿಸುವ ರಸ್ತೆ ಬದಿ ಇರುವ ಗುಡ್ಡಗಳಲ್ಲಿ ಕವರ್‌ಕ್ರಾಪ್ ಗಿಡ ನೆಡಲಾಗಿದೆ. ಈ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೂ ನೀಡಲಾಗಿದೆ ಎಂದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಪೆರಿಯಶಾಂತಿ - ಸುಬ್ರಹ್ಮಣ್ಯ ಮೂಲಕ ಸುಳ್ಯಕ್ಕೆ ಹಾಗೂ ಉಜಿರೆ-ನಾರಾವಿ-ಬಜಗೋಳಿ ಮೂಲಕ ಎರಡು ಸ್ಪರ್ ರಸ್ತೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಾಣಿ-ಸಂಪಾಜೆ ಹೆದ್ದಾರಿಯನ್ನು ಚತುಷ್ಪಥ ರಸ್ತೆಯಾಗಿ ರೂಪಿಸಲಾಗುವುದು. ಶಿರಾಡಿ ಘಾಟಿ ರಸ್ತೆ ಹಾಗೂ ರೈಲು ಮಾರ್ಗ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಶಾಸಕ ಹರೀಶ್ ಪೂಂಜ ಮಾತನಾಡಿದರು.
ತಾಂತ್ರಿಕ ಮಾಹಿತಿ ನೀಡಿದ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ನಿವೃತ್ತ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಪ್ರಸಾದ ಅಜಿಲ, ಉಜಿರೆ-ಪೆರಿಯಶಾಂತಿ ಸ್ಪರ್ ರಸ್ತೆ ನಿರ್ಮಾಣದಿಂದ ಎರಡು ಕಿ.ಮೀ. ದೂರ ಕಡಿಮೆಯಾಗುತ್ತದೆ. ಧರ್ಮಸ್ಥಳದಿಂದ ಪೆರಿಯಶಾಂತಿಯವರೆಗೆ ಮೂರು ಹೊಸ ಸೇತುವೆ ನಿರ್ಮಿಸಲಾಗುವುದು. ನೇತ್ರಾವತಿ ನದಿಗೆ ಧರ್ಮಸ್ಥಳದಲ್ಲಿ ಎರಡು ಹೊಸ ಸೇತುವೆ ನಿರ್ಮಾಣಗೊಳ್ಳಲಿವೆ. ಉಜಿರೆಯಲ್ಲಿ ಕಾಲೇಜುವರೆಗೆ ನಾಲ್ಕು ಲೇನ್ ರಸ್ತೆ ಮಾಡಿದಂತೆ ಉಜಿರೆಯಿಂದ ಧರ್ಮಸ್ಥಳದವರೆಗೆ ಚತುಷ್ಪಥ ರಸ್ತೆ, ಧರ್ಮಸ್ಥಳದಿಂದ ಪೆರಿಯಶಾಂತಿ ವರೆಗೆ ಹತ್ತು ಮೀ. ಅಗಲದ ದ್ವಿಪಥ ರಸ್ತೆ ನಿರ್ಮಾಣಗೊಳ್ಳಲಿದೆ. ಧರ್ಮಸ್ಥಳಕ್ಕೆ ಬರುವ ಪಾದಚಾರಿಗಳಿಗೆ ಸಬ್‌ವೇ ಅಂಡರ್‌ಪಾಸ್ ನಿರ್ಮಿಸಲಾಗುವುದು ಎಂದರು.
ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಮಲಾ, ಪಿಡಿಒ ಗಾಯತ್ರಿ, ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರೀತಮ್, ಕುಶಾಲಪ್ಪ ಗೌಡ, ಉಜಿರೆ ಗ್ರಾಮಪಂಚಾಯಿತಿ ಅಧ್ಯಕ್ಷೆ ಉಷಾಕಿರಣ್ ಕಾರಂತ, ರಸ್ತೆ ಕಾಮಗಾರಿಯ ಗುತ್ತಿಗೆದಾರ ಸುಧಾಕರ ಶೆಟ್ಟಿ ಭಾಗವಹಿಸಿದ್ದರು.
ಶ್ರೀನಿವಾಸ್ ರಾವ್ ಧರ್ಮಸ್ಥಳ ಸ್ವಾಗತಿಸಿದರು. ಯೋಗೀಶ್ ಅಲಂಬಿಲ ವಂದಿಸಿದರು. ಸುಧೀರ್ ರೈ ಕಾರ್ಯಕ್ರಮ ನಿರ್ವಹಿಸಿದರು.