ADVERTISEMENT

ಉಳ್ಳಾಲ: ಮಹಿಳಾ ಕಾನ್‌ಸ್ಟೆಬಲ್‌ಗಳಿಗೆ ಕಿರುಕುಳ ನೀಡಿದ ಇಬ್ಬರ ಬಂಧನ 

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 4:08 IST
Last Updated 18 ಆಗಸ್ಟ್ 2025, 4:08 IST
<div class="paragraphs"><p>ಬಂಧನ  </p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಉಳ್ಳಾಲ: ತೊಕ್ಕೊಟ್ಟು ಶ್ರೀಕೃಷ್ಣ ಜನ್ಮಾಷ್ಟಮಿಯ ಮೊಸರುಕುಡಿಕೆ ಉತ್ಸವದ ಮೆರವಣಿಗೆ ಸಂದರ್ಭ ಮಹಿಳಾ ಕಾನ್‌ಸ್ಟೆಬಲ್‌ಗಳಿಗೆ ಕಿರುಕುಳ ನೀಡಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

ADVERTISEMENT

ಅಸೈಗೋಳಿ ನಿವಾಸಿ ದೀಪಕ್ ಮತ್ತು ತೊಕ್ಕೊಟ್ಟು ನಿವಾಸಿ ಕಿರಣ್ ‌ಬಂಧಿತರು.

ತೊಕ್ಕೊಟ್ಟು ಮೊಸರುಕುಡಿಕೆ ಉತ್ಸವದ ಮೆರವಣಿಗೆ ಒಳಪೇಟೆಯ್ಲಲಿದ್ದಾಗ ದಟ್ಟಣೆ ಉಂಟಾಗಿದ್ದು, ಈ ವೇಳೆ ನಾಸಿಕ್ ಬ್ಯಾಂಡ್ ಕಲಾವಿದರು, ಡ್ಯಾನ್ಸ್ ಮಾಡುತ್ತಿದ್ದ ಯುವಕರನ್ನು ಮುಂದೆ ಹೋಗುವಂತೆ ಕಾನ್‌ಸ್ಟೆಬಲ್‌ಗಳು ವಿನಂತಿಸಿದ್ದಾರೆ. ಈ ವೇಳೆ ಆರೋಪಿಗಳು ಅಸಭ್ಯವಾಗಿ ವರ್ತಿಸಿದ್ದಾರೆ. ಅವರ ವಿರುಧ್ಧ ಮಾನಭಂಗ ಸಹಿತ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಿಸಿದ್ದಾರೆ.

ಕಾರುಗಳ ಅಪಘಾತ: ಪ್ರಕರಣ ದಾಖಲು

ಉಳ್ಳಾಲ: ಕಾರು ಅಪಘಾತದ ವಿಚಾರಕ್ಕೆ ಸಂಬಂಧಿಸಿ ಎರಡು ಇತ್ತಂಡಗಳ ನಡುವೆ ನಡೆದ ಗಲಾಟೆ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದೆ.

ಸೈಯ್ಯದ್ ತ್ವಾಹ ಎಂಬುವರು ನೀಡಿದ ದೂರಿನಂತೆ, ‘ತಲಪಾಡಿ ಟೋಲ್‌ನಲ್ಲಿ ಟೋಲ್ ಪಾವತಿಸದ ಕಾರು ನನ್ನ ಕಾರಿಗೆ ಡಿಕ್ಕಿ ಹೊಡೆದು ಮುಂದೆ ಹೋಗಿದೆ. ಬಳಿಕ ಮುಂದೆ ನಿಲ್ಲಿಸಿದ ಕಾರಿನಿಂದ ಹೊರಗಿಳಿದ ಅಪರಿಚಿತ ಇಬ್ಬರು ಯುವಕರು, ಇಬ್ಬರು ಯುವತಿಯರಿದ್ದ ತಂಡ ಅವರ ಕಾರನ್ನು ಪರಿಶೀಲಿಸಿ ನನ್ನ ಕಾರಿನಲ್ಲಿದ್ದ ತಾಯಿ ಮನ್ಸೂರ ಎಂಬುವರ ಮೇಲೆ ನಾಲ್ವರು ಹಲ್ಲೆ ನಡೆಸಿದ್ದಾರೆ. ಮತ್ತೆ ಕೊಲ್ಯವರೆಗೂ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ನಾಲ್ವರ ತಂಡ ಕಾರಿಗೆ ದಾಳಿ ನಡೆಸಿ, ನಿಂದಿಸಿ ತಾಯಿಗೆ ಹಲ್ಲೆ ನಡೆಸಿದ್ದಾರೆ. ಈ ಕುರಿತು ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಶಕ್ತಿನಗರದ ಬಿಂದಿಯಾ ಎಂಬುವರು ನೀಡಿರುವ ದೂರಿನಂತೆ, ‘ನಾನು, ತಂಗಿ ಗ್ರೀಷ್ಮಾ, ಸ್ನೇಹಿತರಾದ ರಕ್ಷಾ, ಮನ್ವಿತ್, ಜೀವನ್ ಎಂಬುವರ ಜೊತೆ ಮಂಜೇಶ್ವರದಿಂದ ಮಂಗಳೂರಿಗೆ ಮನ್ವಿತ್ ಚಲಾಯಿಸುತ್ತಿದ್ದ ಕಾರಿನಲ್ಲಿ ಪ್ರಯಾಣಿಸುತ್ತಿದ್ದು, ತಲಪಾಡಿ ಟೋಲ್ ಗೇಟ್‌ನಲ್ಲಿ ಮುಂಭಾಗದಲ್ಲಿದ್ದ ಕಾರು ಚಾಲಕ ಹಠಾತ್ ಬ್ರೇಕ್ ಹಾಕಿದ್ದ. ಡಿಕ್ಕಿಯಾಗುವುದನ್ನು ತಪ್ಪಿಸಲು ಯತ್ನಿಸಿದಾಗ ಎದುರಿನಲ್ಲಿದ್ದ ಕಾರಿಗೆ ಡಿಕ್ಕಿಯಾಗಿದೆ. ಅಲ್ಲಿ ಮಾತುಕತೆ ನಡೆಸಿ ವಾಪಸ್‌ ಬರುವಾಗ ಕಾರಿನಲ್ಲಿ ಹಿಂಬಾಲಿಸಿದ ಬಂದ ಕಾರಿನಲ್ಲಿದ್ದವರು ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾರೆ.

ಈ ವೇಳೆ ಮಾತುಕತೆ ನಡೆಸುವ ಸಂದರ್ಭದಲ್ಲೇ ಸುಮಾರು 20-30 ಮಂದಿ ದ್ವಿಚಕ್ರ ವಾಹನಗಳಲ್ಲಿ ಪರಿಚಿತರನ್ನು ಕರೆಸಿ ನಿಂದಿಸಿದ್ದಾರೆ. ಪ್ರಶ್ನಿಸಿದ ಮನ್ವಿತ್ ಅವರ ಕುತ್ತಿಗೆ ಒತ್ತಿ ಹಿಡಿದಿದ್ದು, ಬಿಡಿಸಲು ಮುಂದಾದ ಸ್ನೇಹಿತ ಜೀವನ್ ಎಂಬವರಿಗೂ ಜೀವ ಬೆದರಿಕೆ ಒಡ್ಡಿದ್ದಾರೆ. ಈ ವೇಳೆ ಸಹೋದರಿಗೂ ಹಲ್ಲೆ ನಡೆಸಿದ್ದಾನೆ. ಆರೋಪಿಗಳು ಹೆಲ್ಮೆಟ್‌ನಿಂದ ಕಾರಿಗೆ ಗುದ್ದಿ ಹಾನಿಗೊಳಿಸಿದ್ದಾರೆ ಎಂದು ದೂರಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.