ಉಳ್ಳಾಲ: ರಾಜ್ಯದ ಪ್ರತಿ ತಾಲ್ಲೂಕಿನಲ್ಲೂ ಅಗ್ನಿಶಾಮಕ ಠಾಣೆ ಇರಬೇಕು ಎಂದು ತೀರ್ಮಾನಿಸಲಾಗಿದ್ದು, ಈಗಾಗಲೇ ಸುಮಾರು 200 ಠಾಣೆಗಳು ಇದ್ದು ಸುಮಾರು 40 ಠಾಣೆಗಳನ್ನು ಮಂಜೂರು ಮಾಡಲಾಗಿದೆ. ದ.ಕ ಜಿಲ್ಲೆಯ ಕಡಬ ಮತ್ತು ಮೂಲ್ಕಿಗೆ ಎರಡು ನೂತನ ಠಾಣೆಗಳು ಮಂಜೂರಾಗಿದ್ದು, ತಲಾ ₹ 3 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಗೃಹಸಚಿವ ಜಿ.ಪರಮೇಶ್ವರ ತಿಳಿಸಿದರು.
ಉಳ್ಳಾಲ ತಾಲ್ಲೂಕಿನ ಕಂಬಳಪದವು ಬಳಿ ನೂತನ ಅಗ್ನಿಶಾಮಕ ಠಾಣೆಗೆ ಬುಧವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಸುಮಾರು ಮೂರು ಸಾವಿರ ಕೋಟಿ ಅಸ್ತಿಯನ್ನು ಅಗ್ನಿಶಾಮಕ ದಳ ರಕ್ಷಿಸುತ್ತಿದೆ. ಆಧುನಿಕತೆಯ ದೃಷ್ಟಿಯಿಂದ 90 ಮೀಟರ್‌ನ ಏಣಿಯನ್ನು ಆಮದು ಮಾಡಿಕೊಳ್ಳಲಾಗಿದೆ. ಅಗ್ನಿಶಾಮಕ ಇಲಾಖೆಗೆ ಬೇಕಾಗುವ ವಾಹನಗಳನ್ನು ಸರ್ಕಾರದ ವತಿಯಿಂದ ನೀಡಲಾಗಿದ್ದು, ವಾಹನಗಳಿಗೆ ₹ 50 ಕೋಟಿಯನ್ನು ಮುಖ್ಯಮಂತ್ರಿ ಬಿಡುಗಡೆ ಮಾಡಿದ್ದಾರೆ ಎಂದರು.
ಬಡವರಿಗಾಗಿ ಹಲವು ಕಾರ್ಯಕ್ರಮ ಮಾಡಿದ್ದರೂ ಜನ ಸರ್ಕಾರವನ್ನು ಟೀಕೆ ಮಾಡುತ್ತಿದ್ದಾರೆ. ನಾವು ಪಕ್ಷ ನೋಡಿ ಸವಲತ್ತು ಕೊಟ್ಟಿಲ್ಲ; ರಾಜ್ಯದ ಬಡವರಿಗೆ ನೀಡಿದ್ದೇವೆ. ನಮ್ಮ ಉದ್ದೇಶ ಪಕ್ಷ ಅಲ್ಲ; ಬಡವರ ಮೇಲಿನ ಕಾಳಜಿ ಎಂದರು.
ಅಧ್ಯಕ್ಷತೆ ವಹಿದ್ದ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಉಳ್ಳಾಲ ತಾಲ್ಲೂಕು ಆಗಿ ಘೋಷಣೆ ಆದ ಬಳಿಕ ವಿವಿಧ ಇಲಾಖೆಗಳ ಶಾಖೆ ಹಂತ ಹಂತವಾಗಿ ಬರುತ್ತಿದೆ. ಮುಂದೆಯೂ ಅಗತ್ಯ ಕಾಮಗಾರಿಗೆ ಅನುದಾನ ಒದಗಿಸಲು ಪ್ರಯತ್ನ ಮಾಡಲಾಗುವುದು. ಮಾದರಿ ಅಗ್ನಿಶಾಮಕ ಕಚೇರಿ ಉಳ್ಳಾಲದಲ್ಲಿ ನಿರ್ಮಾಣ ಮಾಡಲಾಗುವುದು. ಉಳ್ಳಾಲ, ಕೊಣಾಜೆ ಪೊಲೀಸ್ ಠಾಣೆಯನ್ನು ಮಾದರಿ ಆಗಿ ನಿರ್ಮಾಣ ಮಾಡುವ ಗುರಿ ಇದೆ ಎಂದು ಹೇಳಿದರು.
ಅಗ್ನಿಶಾಮಕ ಇಲಾಖೆಯ ಉಪ ನಿರ್ದೇಶಕ ಈಶ್ವರ ನಾಯಕ್, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್.ಗಟ್ಟಿ, ಪಜೀರು ಪಂಚಾಯಿತಿ ಅಧ್ಯಕ್ಷ ರಫೀಕ್ ಪಜೀರು, ಮುನ್ನೂರು ಪಂಚಾಯಿತಿ ಅಧ್ಯಕ್ಷೆ ರೆಹನಾ ಬಾನು, ಮಂಜನಾಡಿ ಗ್ರಾಪಂ ಅಧ್ಯಕ್ಷೆ ಸರೋಜಿನಿ, ಕೊಣಾಜೆ ಗ್ರಾಪಂ ಅಧ್ಯಕ್ಷೆ ಗೀತಾ ದಾಮೋದರ್ ಕುಂದರ್, ಬಾಳೆಪುಣಿ ಗ್ರಾಪಂ ಅಧ್ಯಕ್ಷೆ ಗೀತಾ ಭಂಡಾರಿ, ಕುರ್ನಾಡು ಗ್ರಾಪಂ ಅಧ್ಯಕ್ಷೆ ಪ್ರೇಮಾ ಗಟ್ಟಿ, ಕುರ್ನಾಡು ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಶಾಂತ್ ಕಾಜವ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಚಂದ್ರಹಾಸ ಕರ್ಕೆರ, ರಮೇಶ್ ಶೆಟ್ಟಿ, ಮುಖಂಡರಾದ ಸೀತಾರಾಂ ಶೆಟ್ಟಿ ಪೆರ್ನ, ಜೆ.ಬಾವ, ಕಣಚೂರು ಮೋನು, ಹರ್ಷರಾಜ್ ಮುದ್ಯ ಭಾಗವಹಿಸಿದ್ದರು.
ಮುಖ್ಯ ಅಗ್ನಿಶಾಮಕ ಅಧಿಕಾರಿ ತಿರುಮಲೇಶ್ ಸ್ವಾಗತಿಸಿ, ಮಂಜುಳಾ ಕಾರ್ಯಕ್ರಮ ನಿರೂಪಿಸಿದರು.
ಪಜೀರ್ ಗ್ರಾಮ ಪಂಚಾಯತಿ ಅಧ್ಯಕ್ಷ ಮೊಹಮ್ಮದ್ ರಫೀಕ್ ವಂದಿಸಿದರು.
‘ಖಾದರ್ ಅವರನ್ನು ಕಂಡರೆ ನನಗೆ ಎಲ್ಲಿಲ್ಲದ ಪ್ರೀತಿ ಹಾಗೂ ಗೌರವ. ಸಭಾಧ್ಯಕ್ಷನಾಗಿ ಕೆಲಸ ಮಾಡುವುದು ಅತ್ಯಂತ ಕಠಿಣವಾದ ಕೆಲಸ. ವಿಧಾನ ಸೌಧದಲ್ಲಿ ಅನೇಕ ಬದಲಾವಣೆ ತಂದಿದ್ದಾರೆ. ಈ ಮೂಲಕ ಉಳ್ಳಾಲಕ್ಕೆ ಹೆಸರು ಹಾಗೂ ಕೀರ್ತಿಯನ್ನು ತಂದುಕೊಟ್ಟಿದ್ದಾರೆ’ ಎಂದರು.
ಈ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳು ಹೆಚ್ಚಾಗಿ ಬರಬೇಕು. ಈ ಮೂಲಕ ಎಲ್ಲರಿಗೂ ಶಿಕ್ಷಣ ಸಿಗುವಂತಗಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.