ADVERTISEMENT

ವಿದ್ಯಾರ್ಥಿ ದೆಸೆಯಲ್ಲಿ ಕಷ್ಟಪಟ್ಟರೆ ಭವಿಷ್ಯದಲ್ಲಿ ಸುಖ: ಅರವಿಂದ ಬೋಳಾರ್‌

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 16:21 IST
Last Updated 16 ಆಗಸ್ಟ್ 2022, 16:21 IST
ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ನಡೆದ ಪ್ರತಿಭಾ ದಿನಾಚರಣೆಯಲ್ಲಿ ಮಕ್ಕಳು ಯಕ್ಷಗಾನ ಪ್ರದರ್ಶಿಸಿದರು
ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ನಡೆದ ಪ್ರತಿಭಾ ದಿನಾಚರಣೆಯಲ್ಲಿ ಮಕ್ಕಳು ಯಕ್ಷಗಾನ ಪ್ರದರ್ಶಿಸಿದರು   

ಮಂಗಳೂರು: ಭವಿಷ್ಯದ ಸುಖಕ್ಕಾಗಿ ವಿದ್ಯಾರ್ಥಿ ದೆಸೆಯಲ್ಲಿ ಕಷ್ಟಪಡಲು ಸಿದ್ಧರಿರಬೇಕು. ನೋವನ್ನು ಎದುರಿಸುವ ಶಕ್ತಿ ನಮ್ಮಲ್ಲಿರಬೇಕು. ಪ್ರತಿಭಾವಂತರು ವೇದಿಕೆ ಸಿಕ್ಕಾಗ ಅದನ್ನು ಸಮರ್ಪಕವಾಗಿ ಬಳಸಿಕೊಂಡರೆ, ಕಲಾವಿದನಾಗ ಬೆಳೆಯಲು ಸಾಧ್ಯ ಎಂದು ಚಲನಚಿತ್ರ ನಟ ಅರವಿಂದ ಬೋಳಾರ್‌ ಹೇಳಿದರು.

ನಗರದ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಂಗಳವಾರ ನಡೆದ ಪ್ರತಿಭಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ‘ಅಪ್ಪ- ಅಮ್ಮನ, ಗುರು–ಹಿರಿಯರ ಆಶೀರ್ವಾದವಿಲ್ಲದೆ ಯಾವುದೂ ಸಾಧ್ಯವಿಲ್ಲ. ಅವರ ಬೈಗುಳ ನಮಗೆ ಶಾಪವಾಗದು’ ಎಂದರು. ತಮ್ಮ ಹಾಸ್ಯಮಯ ಸಂಭಾಷಣೆಯಿಂದ ಸಭಿಕರನ್ನು ರಂಜಿಸಿದ ಬೋಳಾರ್‌, ಹಾಸ್ಯ ಆರೋಗ್ಯಕರವಾಗಿರಲಿ ಎಂದರು.

ಪ್ರಾಂಶುಪಾಲೆ ಡಾ. ಅನಸೂಯಾ ರೈ ಅಧ್ಯಕ್ಷತೆ ವಹಿಸಿದ್ದರು. ಲಲಿತ ಕಲಾ ಸಂಘದ ಸಹನಿರ್ದೇಶಕಿ ಡಾ. ಮೀನಾಕ್ಷಿ ಎಂ.ಎಂ ಸಂಘದ ವಾರ್ಷಿಕ ವರದಿ ವಾಚಿಸಿದರು. ಸಾಹಿತ್ಯ, ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕ್ರೀಡಾ ವಿಭಾಗ ಮುಖ್ಯಸ್ಥ ಡಾ. ಕೇಶವಮೂರ್ತಿ ಟಿ, ಉಪನ್ಯಾಸಕರಾದ ಪರಿಣಿತ ಶೆಟ್ಟಿ, ಡಾ. ಸೌಮ್ಯಾಯ ಕೆಬಿ ಸಹಕರಿಸಿದರು.

ADVERTISEMENT

ವಿದ್ಯಾರ್ಥಿ ಪ್ರಣವ್‌ ಶೆಟ್ಟಿ ಉದ್ಘಾಟನಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಧೀರಜ್‌, ಲಲಿತ ಕಲಾ ಸಂಘದ ಕಾರ್ಯದರ್ಶಿ ಅಪರ್ಣಾ ಎಸ್‌ ಶೆಟ್ಟಿ ಹಾಗೂ ಸಹಕಾರ್ಯದರ್ಶಿ ಕಾವ್ಯಾ ಎನ್‌ ಕೆ ಉಪಸ್ಥಿತರಿದ್ದರು. ವಿದ್ಯಾರ್ಥಿ ತಂಡಗಳು ಸಾಂಸ್ಕೃತಿಕ ವೈವಿಧ್ಯ ಪ್ರದರ್ಶಿಸಿದವು. ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದ ಅಮಿತಾ ಮತ್ತು ಯಶಸ್ವಿ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.