ADVERTISEMENT

ಬಾಡಿಗೆ ಮನೆಯವರ ಮಾಹಿತಿ ಸಂಗ್ರಹ

ಉಪ್ಪಿನಂಗಡಿ: ಸಾಮಾನ್ಯ ಸಭೆಯಲ್ಲಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 6:30 IST
Last Updated 2 ಡಿಸೆಂಬರ್ 2022, 6:30 IST
ಉಪ್ಪಿನಂಗಡಿ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆ ಅಧ್ಯಕ್ಷೆ ಉಷಾಚಂದ್ರ ಮುಳಿಯ ಅಧ್ಯಕ್ಷತೆಯಲ್ಲಿ ನಡೆಯಿತು.
ಉಪ್ಪಿನಂಗಡಿ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆ ಅಧ್ಯಕ್ಷೆ ಉಷಾಚಂದ್ರ ಮುಳಿಯ ಅಧ್ಯಕ್ಷತೆಯಲ್ಲಿ ನಡೆಯಿತು.   

ಉಪ್ಪಿನಂಗಡಿ: ಇಲ್ಲಿನ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ಸಮುಚ್ಚಯಗಳಲ್ಲಿ ಬಾಡಿಗೆಯಾಗಿ, ಮಾಲೀಕತ್ವ ಪಡೆದು ವಾಸವಾಗಿರುವವರು ಮತ್ತು ಬಾಡಿಗೆ ಮನೆಯಲ್ಲಿ ವಾಸವಾಗಿರುವವರ ಮಾಹಿತಿಯನ್ನು ಆಯಾ ಕಟ್ಟಡಗಳ ಮಾಲೀಕರಿಂದ ಪಡೆಯುವ ಬಗ್ಗೆ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಚಂದ್ರ ಮುಳಿಯ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಯಿತು. ವಿಷಯ ಪ್ರಸ್ತಾಪಿಸಿದ ಸದಸ್ಯರು, ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಬಾಡಿಗೆ ಮನೆ, ಫ್ಲಾಟ್‌ಗಳಲ್ಲಿ ಬೇರೆ ಬೇರೆ ಊರಿನ ಜನರು ವಾಸ್ತವ್ಯ ಹೊಂದಿದ್ದು, ಅವರ ಬಗ್ಗೆ ಪಂಚಾಯಿತಿಯಲ್ಲಿ ಮಾಹಿತಿ ಇಡಬೇಕು. ಈ ನಿಟ್ಟಿನಲ್ಲಿ ಕಟ್ಟಡ ಮಾಲೀಕರಿಗೆ ನೋಟಿಸ್‌ ನೀಡಿ ಅವರಿಂದ ಮಾಹಿತಿ ಪಡೆದುಕೊಳಬೇಕು ಎಂದರು. ಅದರಂತೆ ನಿರ್ಣಯ ಅಂಗೀಕರಿಸಲಾಯಿತು.

ಪೇಟೆಯ ಒಳಗಿನ ರಸ್ತೆ ವಿಸ್ತರಣೆ ಮಾಡುವ ಸಲುವಾಗಿ ಸಮೀಕ್ಷೆ ನಡೆಸಿ ಗುರುತು ಮಾಡುವ ಮತ್ತು ದಾಖಲೆ ಸಂಗ್ರಹಿಸುವ ಬಗ್ಗೆ ಈ ಹಿಂದಿನ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ಆದರೆ, ಅದರ ಬಗ್ಗೆ ಯಾವುದೇ ಕ್ರಮ ನಡೆದಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಆಗ ಅಧ್ಯಕ್ಷರು, ಈ ಬಗ್ಗೆ ಕೆಲವು ವರ್ತಕರು ಶಾಸಕರ ಬಳಿ ನಿಯೋಗ ಹೋಗಿದ್ದು, ಆದ ಕಾರಣ ಅದರ ಬಗ್ಗೆ ಮುಂದುವರಿದಿಲ್ಲ ಎಂದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯರು, ನಾವೇನು ಈಗ ಅನಧಿಕೃತ ಅಥವಾ ವಿಸ್ತರಿಸಿದ ಕಟ್ಟಡ ತೆರವು ಮಾಡಬೇಕು ಎಂದು ನಿರ್ಣಯಿಸಿದ್ದಲ್ಲ. ಕೇವಲ ರಸ್ತೆ ಮಾರ್ಜಿನ್ ಅತಿಕ್ರಮಣ ಬಗ್ಗೆ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸುವಂತದ್ದು. ಅದನ್ನು ಮಾಡಲೇ ಬೇಕಾಗಿದ್ದು, ಈ ಬಗ್ಗೆ ಕಾರ್ಯಪ್ರವೃತ್ತರಾಗಬೇಕಾಗಿದ್ದು, ನಿರ್ಣಯ ಅನುಷ್ಠಾನ ಮಾಡಬೇಕು ಎಂದರು. ಅದರಂತೆ ಎಲ್ಲ ಸದಸ್ಯರು ಸ್ಥಳ ಪರಿಶೀಲನೆ ನಡೆಸುವ ಬಗ್ಗೆ ನಿರ್ಣಯಿಸಲಾಯಿತು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿನಾಯಕ ಪೈ, ಸದಸ್ಯರಾದ ಕೆ. ಅಬ್ದುಲ್ ರಹಿಮಾನ್, ಸುರೇಶ್ ಅತ್ರಮಜಲು, ಯು.ಟಿ. ತೌಸೀಫ್, ಲೋಕೇಶ್ ಬೆತ್ತೋಡಿ, ಧನಂಜಯ ಕುಮಾರ್, ಯು.ಕೆ. ಇಬ್ರಾಹಿಂ, ವಿದ್ಯಾಲಕ್ಷ್ಮೀ ಪ್ರಭು, ಅಬ್ದುಲ್ ರಶೀದ್, ಮೈಸಿದಿ ಇಬ್ರಾಹಿಂ ಮಾತನಾಡಿದರು. ಉಷಾ ನಾಯ್ಕ್, ಶೋಭಾ, ಜಯಂತಿ, ವನಿತಾ, ನೆಬಿಸಾ, ಸೌದ ಇದ್ದರು. ಪ್ರಭಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಚಂದ್ರ ಸ್ವಾಗತಿಸಿದರು. ಕಾರ್ಯದರ್ಶಿ ದಿನೇಶ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.