ADVERTISEMENT

ಉಪ್ಪಿನಂಗಡಿ | ಬಗೆಹರಿಯದ 9/11 ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 2:35 IST
Last Updated 6 ಫೆಬ್ರುವರಿ 2026, 2:35 IST
ಉಪ್ಪಿನಂಗಡಿ ಸಮೀಪ ಬಜತ್ತೂರು ಪಂಚಾಯಿತಿಯಲ್ಲಿ ಅಧ್ಯಕ್ಷ ಗಂಗಾಧರ್ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆ ನಡೆಯಿತು
ಉಪ್ಪಿನಂಗಡಿ ಸಮೀಪ ಬಜತ್ತೂರು ಪಂಚಾಯಿತಿಯಲ್ಲಿ ಅಧ್ಯಕ್ಷ ಗಂಗಾಧರ್ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆ ನಡೆಯಿತು   

ಉಪ್ಪಿನಂಗಡಿ: ಗ್ರಾಮ ಪಂಚಾಯಿತಿಯಲ್ಲಿ 9/11 ಸೇರಿದಂತೆ ಯಾವುದೇ ಕೆಲಸ ಆಗದೇ ಜನರಿಗೆ ಸಮಸ್ಯೆ ಉಂಟಾಗಿದೆ. ಪರಿಸ್ಥಿತಿ ಹೀಗಿರುವಾಗ ಗ್ರಾಮ ಸಭೆ ನಡೆಸುವ ಔಚಿತ್ಯವಾದರೂ ಏನು ಎಂದು ಪ್ರಶ್ನಿಸಿದ ಗ್ರಾಮಸ್ಥರು ಮತ್ತು ಸದಸ್ಯರು ಸಮಸ್ಯೆ ಬಗೆಹರಿಸುವ ಸಲುವಾಗಿ ತಾಲ್ಲೂಕು ಪಂಚಾಯಿತಿಗೆ ಮುತ್ತಿಗೆ ಹಾಕುವ  ಎಚ್ಚರಿಕೆ ನೀಡಿದ ಘಟನೆ ಬಜತ್ತೂರು ಗ್ರಾಮ ಸಭೆಯಲ್ಲಿ ನಡೆಯಿತು.

ಬುಧವಾರ ಬಜತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ ಪಿ.ಎನ್.ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಸದಸ್ಯ ಗಣೇಶ್ ಕುಲಾಲ್ ವಿಷಯ ಪ್ರಸ್ತಾಪಿಸಿದರು.

ಗ್ರಾಮ ಪಂಚಾಯಿತಿನಲ್ಲಿ ನೇರವಾಗಿ ಈ ಹಿಂದೆ ಸಿಗುತ್ತಿದ್ದ ಕಟ್ಟಡ ಪರವಾನಗಿ, ಡೋರ್ ನಂಬರ್‌ಗೆ ಈಗ ಪುಡಾಕ್ಕೆ ಹೋಗಬೇಕಿದೆ. 9/11 ಮಾಡಿಸಲು ಕೂಡ ಪುಡಾಕ್ಕೆ ಹೋಗಬೇಕು. ಆದರೆ ಎರಡು ತಿಂಗಳಿಂದ ಪುಡಾದಲ್ಲಿ ಕೂಡ 9/11 ಆಗುತ್ತಿಲ್ಲ. ಕಾರಣ ಕೇಳಿದರೆ ಸಾಫ್ಟ್‌ವೇರ್ ಸಮಸ್ಯೆ ಎಂಬ ಉತ್ತರ ಅಧಿಕಾರಿಗಳಿಂದ ಬರುತ್ತಿದೆ. ಈಗಿನ ನಿಯಮಾವಳಿ ಪ್ರಕಾರ 9/11 ವಿನ್ಯಾಸ ನಕ್ಷೆ ಪುಡಾದಿಂದ ಮಾಡಿಸಬೇಕು. ಬಳಿಕ ಅದಕ್ಕೆ ಕಾರ್ಯದರ್ಶಿ,ಪಿಡಿಒ, ತಾ.ಪಂ.ಇಒ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರ ತಂಬ್‌ ಆಗಿ ಆಮೇಲೆ ಮತ್ತೆ ಪಿಡಿಒ ಅವರ ತಂಬ್‌ ಆದ ಬಳಿಕವೇ 9/11 ಆಗುತ್ತದೆ. ಇನ್ನೇನು ಕೆಲ ದಿನಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರಾವಧಿ ಮುಗಿಯುತ್ತದೆ. ಆಗ ಅಧ್ಯಕ್ಷರ ತಂಬ್‌ಗಾಗಿ ಏನು ಮಾಡಬೇಕು ಎಂದು ಪ್ರಶ್ನಿಸಿದರು.

ADVERTISEMENT

ಈಗ ಟೆಕ್ನಾಲಜಿ ಬಹಳಷ್ಟು ಮುಂದುವರಿದಿದೆ. ಆದರೂ ಸಾಫ್ಟ್‌ವೇರ್ ಸಮಸ್ಯೆ ಅಂತ ಹೇಳುವುದು ಸರಿಯಲ್ಲ. ಅಧಿಕಾರಿಗಳಿಗೆ ಇಚ್ಛಾಶಕ್ತಿಯ ಕೊರತೆ ಇರುವುದೇ ಈ ಸಮಸ್ಯೆಗೆ ಕಾರಣ. ಆದ್ದರಿಂದ ಈ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರು ಹೋರಾಟ ನಡೆಸಬೇಕು. ತಾಲ್ಲೂಕು ಪಂಚಾಯಿತಿಗೆ ಮುತ್ತಿಗೆ ಹಾಕಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕಾರ್ಯ ಮಾಡಬೇಕು ಎಂದರು.

ಬಜತ್ತೂರಿನಲ್ಲಿ ಕಾಡಾನೆಗಳು ಬೀಡು ಬಿಡುತ್ತಿವೆ. ಕೃಷಿಗೆ ಬಹಳಷ್ಟು ತೊಂದರೆ ಮಾಡುತ್ತಿವೆ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಇವುಗಳನ್ನು ಬೇರೆ ಕಡೆ ಓಡಿಸಬೇಕು. ಇಲ್ಲದಿದ್ದಲ್ಲಿ ಅದನ್ನು ಹಿಡಿಯುವ ಕಾಯರ್ಾಚರಣೆ ನಡೆಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಇಲ್ಲಿ ಅತಿ ಹೆಚ್ಚು ಕೃಷಿ ಹಾನಿಯಾಗುತ್ತಿರುವುದು ಮಂಗಗಳಿಂದ. ಆದರೆ ಅರಣ್ಯ ಇಲಾಖೆ ಅದಕ್ಕೆ ಪರಿಹಾರವನ್ನು ನೀಡುತ್ತಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಮಂಗಗಳಿಂದ ಕೃಷಿ ಹಾನಿಯಾದರೂ ಕೃಷಿಕನಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಬೇಕೆಂಬ ಆಗ್ರಹ ಸಭೆಯಲ್ಲಿ ಕೇಳಿ ಬಂತು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಿಮಲಾ, ಸದಸ್ಯರಾದ ಮೋನಪ್ಪ ಗೌಡ, ಮಾಧವ ಪೂಜಾರಿ, ಗಂಗಾಧರ ಕೆ.ಎಸ್., ಸ್ಮಿತಾ, ರತ್ನಾ, ಭಾಗೀರಥಿ, ಪ್ರೆಸಿಲ್ಲಾ ಡಿಸೋಜ, ಯಶೋಧಾ, ಪ್ರೇಮ ಇದ್ದರು.

ಪುತ್ತೂರು ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ ನೋಡಲ್ ಅಧಿಕಾರಿಯಾಗಿದ್ದರು. ಪಿಡಿಒ ಚಿತ್ರಾವತಿ ಸ್ವಾಗತಿಸಿ, ಕಾರ್ಯದರ್ಶಿ ಕೊರಗಪ್ಪ ವಂದಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.