ADVERTISEMENT

ನಗರೀಕರಣದ ಪ್ರಭಾವ: ಸಾಮಾನ್ಯ ಮೈನಾ ಸಂಖ್ಯೆ ಇಳಿಮುಖ

ಮಂಗಳೂರು ವಿವಿ ಆವರಣದಲ್ಲಿ 102 ಪ್ರಭೇದದ ಪಕ್ಷಿಗಳು

ಸಂಧ್ಯಾ ಹೆಗಡೆ
Published 24 ಫೆಬ್ರುವರಿ 2026, 15:42 IST
Last Updated 24 ಫೆಬ್ರುವರಿ 2026, 15:42 IST
ಮಂಗಳೂರು ವಿವಿ ಆವರಣದಲ್ಲಿ ಪಕ್ಷಿ ಸಮೀಕ್ಷೆ ನಡೆಸಿದ ಸಮೀಕ್ಷಕರು
ಮಂಗಳೂರು ವಿವಿ ಆವರಣದಲ್ಲಿ ಪಕ್ಷಿ ಸಮೀಕ್ಷೆ ನಡೆಸಿದ ಸಮೀಕ್ಷಕರು   

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಸಮೃದ್ಧವಾಗಿ ಕಾಣಸಿಗುತ್ತಿದ್ದ ಸಾಮಾನ್ಯ ಮೈನಾ ಹಕ್ಕಿಗಳು ಇತ್ತೀಚಿನ ವರ್ಷಗಳಲ್ಲಿ ಅಪರೂಪವಾಗಿವೆ. ವಿವಿಯಲ್ಲಿ ಈಚೆಗೆ ನಡೆದ ಪಕ್ಷಿ ಸಮೀಕ್ಷೆಯಲ್ಲಿ ಈ ಸಂಗತಿ ಗಮನಕ್ಕೆ ಬಂದಿದೆ. 

ವಿಶ್ವವಿದ್ಯಾಲಯದ ಕ್ಯಾಂಪಸ್‌ನ ಹೊರ ಆವರಣದ ಪ್ರದೇಶಗಳು ನಗರೀಕರಣಗೊಳ್ಳುತ್ತಿರುವ ಪರಿಣಾಮ ಪಕ್ಷಿಗಳ ಆವಾಸಸ್ಥಾನದ ಮೇಲೆ ಪರಿಣಾಮ ಬೀರುತ್ತಿವೆ. ಗಿಡ–ಮರಗಳು, ಹಸಿರು ಹೊದಿಕೆ ಕಡಿಮೆಯಾಗಿ, ಕಾಂಕ್ರೀಟ್ ಕಟ್ಟಡಗಳು ತಲೆ ಎತ್ತುತ್ತಿವೆ. ಇದು ಬಾನಾಡಿಗಳ ಜೀವನಚಕ್ರದ ಮೇಲೆ ದುಷ್ಪರಿಣಾಮ ಬೀರಿರುವ ಸಾಧ್ಯತೆ ಇದೆ. ಇದರಿಂದಾಗಿ 2–3 ವರ್ಷಗಳಿಂದ ಸಾಮಾನ್ಯ ಮೈನಾ ಹಕ್ಕಿಗಳು ವಿರಳವಾಗಿ ಕಾಣಸಿಗುತ್ತಿವೆ ಎನ್ನುತ್ತಾರೆ ಪಕ್ಷಿ ವೀಕ್ಷಕರು. 

ಕೌಂಟ್ ಬರ್ಡ್ ಕೌಂಟ್ ಇಂಡಿಯಾವು ಗ್ರೇಟ್ ಬ್ಯಾಕ್‌ಯಾರ್ಡ್ ಬರ್ಡ್ ಕೌಂಟ್ ಭಾಗವಾಗಿ ವಿವಿಯ ಪ್ರಾಣಿವಿಜ್ಞಾನ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ‘ಕ್ಯಾಂಪಸ್‌ನಲ್ಲಿ ಪಕ್ಷಿ ಸಮೀಕ್ಷೆ’ ಕಾರ್ಯದಲ್ಲಿ ಈ ಬಾರಿ 102 ಪಕ್ಷಿ ಪ್ರಭೇದಗಳನ್ನು ಗುರುತಿಸಲಾಗಿದೆ.

ADVERTISEMENT
ಪ್ಲಮ್‌ ಹೆಡೆಡ್ ಪ್ಯಾರಟ್ 

ಪರ್ಪಲ್ ಸನ್‌ ಬರ್ಡ್, ಕೆಂಪು ಮೀಸೆಯ ಬುಲ್‌ಬುಲ್, ಗೋಲ್ಡನ್ ಒರಿಯೋಲ್, ಕಪ್ಪು ಡ್ರೊಂಗೊ, ಏಷಿಯನ್ ಗ್ರೀನ್ ಬಿ ಈಟರ್ ಮೊದಲಾದ ಹಕ್ಕಿಗಳು ಬಹುಸಂಖ್ಯೆಯಲ್ಲಿ ಕಂಡುಬಂದವು. ಇಂಡಿಯನ್ ಗೋಲ್ಡನ್ ಒರಿಯೋಲ್, ಆಶಿ ಡ್ರೊಂಗೊ, ಇಂಡಿಯನ್ ಪಿಟ್ಟಾ, ಬ್ರೌನ್ ವ್ಯಾಗ್ ಟೇಲ್‌ನಂತಹ ವಲಸೆ ಹಕ್ಕಿಗಳು, ಪಶ್ಚಿಮ ಘಟ್ಟದಲ್ಲಿ ಕಾಣಸಿಗುವ ಫ್ಲೇಮ್‌ ಥ್ರೊಟೆಡ್ ಬುಲ್‌ಬುಲ್, ಕಪ್ಪು ತಲೆಯ ಐಬಿಸ್, ರಾತ್ರಿ ಕಂಡು ಬರುವ ಶ್ರೀಲಂಕನ್ ಫ್ರಾಗ್‌ಮೌತ್‌ ಸೇರಿದಂತೆ ಹಲವಾರು ಪಕ್ಷಿಗಳು ಗೂಡುಕಟ್ಟಿ ವಾಸಿಸುವುದನ್ನು ಸಮೀಕ್ಷಕರು ಗುರುತಿಸಿದ್ದಾರೆ. ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.

ವಿವಿ ಆವರಣದಲ್ಲಿ ಒಂಬತ್ತು ವರ್ಷಗಳಿಂದ ಪಕ್ಷಿ ವೀಕ್ಷಣೆ ನಡೆಯುತ್ತಿದ್ದು, 2016ರಲ್ಲಿ 77 ಪ್ರಭೇದದ ಪಕ್ಷಿಗಳು ಕಂಡುಬಂದಿದ್ದವು. 2016ರಲ್ಲಿ 95 ಪ್ರಭೇದ, 2018ರಲ್ಲಿ 110, 2019ರಲ್ಲಿ 107, 2020ರಲ್ಲಿ 103, 2021ರಲ್ಲಿ 108, 2022ರಲ್ಲಿ 103, 2024ರಲ್ಲಿ 114 ಹಾಗೂ 2025ರಲ್ಲಿ 104 ಪ್ರಭೇದದ ಪಕ್ಷಿಗಳು ಸಮೀಕ್ಷೆಯಲ್ಲಿ ಪತ್ತೆಯಾಗಿವೆ. 

‘ಸಮೀಕ್ಷೆಯಲ್ಲಿ ಭಾಗವಹಿಸಿದ್ದರಿಂದ ಪಕ್ಷಿಗಳ ಆವಾಸಸ್ಥಾನ, ಗೂಡುಕಟ್ಟುವಿಕೆ ಅರಿತುಕೊಳ್ಳಲು ಸಾಧ್ಯವಾಗಿದೆ. ಅಭಿವೃದ್ಧಿಯು ಪಕ್ಷಿ ಸಂಕುಲಕ್ಕೆ ಮುಳ್ಳಾಗಬಾರದು, ಪಕ್ಷಿ, ಪರಿಸರ ರಕ್ಷಣೆ ನಮ್ಮ ಆದ್ಯತೆಯಾಗಬೇಕು’ ಎನ್ನುತ್ತಾರೆ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿ ಅಮೃತಾ ಶೆಣೈ. 

ತೇವಾಂಶ ಆವಿ: ಒಣಗುತ್ತಿರುವ ಭೂಮಿ

ಪೈಡ್ ಕುಕ್ಕೂ ಲಿಟಲ್ ರಿಂಗ್ಡ್ ಫ್ಲವರ್ ಜಾತಿಯ ಹಕ್ಕಿಗಳು ಈ ಬಾರಿಯ ಸಮೀಕ್ಷೆಯಲ್ಲಿ ಕಂಡುಬಂದಿವೆ. 2021ರ ನಂತರ ಮೊದಲ ಬಾರಿಗೆ ಇವುಗಳನ್ನು ವಿವಿ ಕ್ಯಾಂಪಸ್‌ನಲ್ಲಿ ಗುರುತಿಸಲಾಗಿದೆ.

ಕ್ಯಾಂಪಸ್‌ನಿಂದ ಒಂದು ಕಿ.ಮೀ ಸುತ್ತಮುತ್ತಲಿನ ಪ್ರದೇಶದಲ್ಲೂ ಸಮೀಕ್ಷೆ ನಡೆಸಿದ್ದೇವೆ. ಜೌಗು ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿದ್ದ ಕಪ್ಪು ರೆಕ್ಕೆಯ ಸ್ಟಿಲ್ಟ್ ವುಡ್ ಸ್ಯಾಂಡ್ ಪೈಪರ್ ಕಂಡು ಬಂದಿಲ್ಲ. ಉಳಿದಂತೆ ಸಾಮಾನ್ಯವಾಗಿ ಕಾಣುವ ಜಲಚರ ಪಕ್ಷಿಗಳು ಇದ್ದವು. ಈ ಬಾರಿ ಜೌಗು ಪ್ರದೇಶಗಳಲ್ಲಿ ತೇವಾಂಶ ಕಡಿಮೆ ಇದ್ದು ಭೂಮಿ ಒಣಗಿದೆ. ಅದಕ್ಕೆ ಪಕ್ಷಿಗಳ ಪ್ರಮಾಣ ಕಡಿಮೆ ಇದ್ದಿರುವ ಸಾಧ್ಯತೆ ಇದೆ ಎನ್ನುತ್ತಾರೆ ಪಕ್ಷಿ ಸಮೀಕ್ಷೆಯ ಸಂಯೋಜಕ ಪ್ರೊ. ದೀಪಕ್ ನಾಯಕ್. 

ಇಂಡಿಯನ್ ರೋಲರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.