ಮಂಗಳೂರು: ಸಂವಿಧಾನದ ಹತ್ತನೇ ಅನುಸೂಚಿ ಅಡಿಯಲ್ಲಿ ಸಭಾಧ್ಯಕ್ಷರ ಅಧಿಕಾರ ಮತ್ತು ನಿಯಮ ಪರಿಶೀಲಿಸುವ ರಾಷ್ಟ್ರೀಯ ಸಮಿತಿಗೆ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
ಈ ರಾಷ್ಟ್ರೀಯ ಸಮಿತಿಯಲ್ಲಿ ಬೇರೆ ಬೇರೆ ರಾಜ್ಯಗಳ ನಾಲ್ವರು ಸ್ಪೀಕರ್ ಮಾತ್ರ ಇರಲಿದ್ದಾರೆ. ಮಹಾರಾಷ್ಟ್ರ ಸ್ಪೀಕರ್ ರಾಹುಲ್ ನಾರ್ವೇಕರ್ ಸಮಿತಿಯ ಅಧ್ಯಕ್ಷರಾಗಿದ್ದು, ಒಡಿಶಾ ಸ್ಪೀಕರ್ ಸುರಮ ಪಾದಿ, ಕರ್ನಾಟಕ ಸ್ಪೀಕರ್ ಯು.ಟಿ.ಖಾದರ್ ಫರೀದ್, ನಾಗಲ್ಯಾಂಡ್ ಸ್ಪೀಕರ್ ಷರಿಂಗೈನ್ ಲಾಂಗ್ ಕುಮೆರ್ ಸಮಿತಿ ಸದಸ್ಯರಾಗಿದ್ದಾರೆ.
ಪರೀಕ್ಷೆ: ನಿಷೇಧಾಜ್ಞೆ ಜಾರಿ
ಮಂಗಳೂರು: ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಇತರ ಪರೀಕ್ಷೆಗಳು) ವತಿಯಿಂದ ಪ್ರಥಮ ಮತ್ತು ದ್ವಿತೀಯ ಡಿ.ಎಲ್.ಇಡಿ ಹಾಗೂ ಡಿ.ಪಿ.ಇಡಿ ಪರೀಕ್ಷೆಗಳು ಮೇ 15 ರಿಂದ 27ರವರೆಗೆ ಕೊಡಿಯಾಲ್‌ಬೈಲ್ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ನಡೆಯಲಿವೆ.
ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯುವ ಸಮಯ ಕಾನೂನು ಬಾಹಿರ ಚಟುವಟಿಕೆ ನಡೆಯದಮತೆ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಡಿಸಿಪಿ ಸಿದ್ದಾರ್ಥ್ ಗೋಯಲ್ ಆದೇಶಿಸಿದ್ದಾರೆ.
ಡೆಂಗಿ ನಿಯಂತ್ರಣ: ಜಾಥಾ 17ಕ್ಕೆ
ಮಂಗಳೂರು: ಮಳೆಗಾಲ ಹಾಗೂ ನಂತರದ ದಿನಗಳಲ್ಲಿ ಡೆಂಗಿ ಪ್ರಕರಣ ನಿಯಂತ್ರಿಸುವ ನಿಟ್ಟಿನಲ್ಲಿ ಮುಂಜಾಗ್ರತೆಯಾಗಿ ಅರಿವು ಮೂಡಿಸಲು ಮೇ 17ರಂದು ಬೆಳಿಗ್ಗೆ 7.30ಕ್ಕೆ ಮಹಾನಗರ ಪಾಲಿಕೆಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯವರೆಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಗರಿಕ ರಕ್ಷಣಾ ಸ್ವಯಂಸೇವಕ: ನೋಂದಣಿ ಆಹ್ವಾನ
ಮಂಗಳೂರು: ‘ಮೈ ಭಾರತ’ ಯುವ ಜನರನ್ನು ನಾಗರಿಕ ರಕ್ಷಣಾ ಸ್ವಯಂಸೇವಕರಾಗಿ ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಯುವ ಮತ್ತು ಕ್ರೀಡಾ ಸಚಿವಾಲಯದ ಮೈ ಭಾರತ ಕಾರ್ಯಕ್ರಮವು ಯುವಕರನ್ನು ಮೈ ಭಾರತ ನಾಗರಿಕ ರಕ್ಷಣಾ ಸ್ವಯಂಸೇವಕರಾಗಿ ನೋಂದಾಯಿಸಿಕೊಳ್ಳಲು ಪ್ರೇರೇಪಿಸುತ್ತಿದ್ದು, ತುರ್ತು ಪರಿಸ್ಥಿತಿ ಮತ್ತು ಬಿಕ್ಕಟ್ಟಿನ ಸಮಯದಲ್ಲಿ ರಾಷ್ಟ್ರೀಯ ಕಾರಣಕ್ಕಾಗಿ ಮಹತ್ವದ ಪಾತ್ರವಹಿಸಲು ಯುವ ನಾಗರಿಕರನ್ನು ಸಶಕ್ತಗೊಳಿಸುವ ಉದ್ದೇಶವನ್ನು ಹೊಂದಿದೆ. ಆಸಕ್ತರು ಮೈ ಭಾರತ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಮಾಹಿತಿಗೆ ಮೈ ಭಾರತ್ ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ಕೆ.ಟಿ.ಕೆ (9961332968) ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಮಾವು ಮೇಳ ನಾಳೆಯಿಂದ
ಮಂಗಳೂರು: ತೋಟಗಾರಿಕಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ ವತಿಯಿಂದ ನಗರದ ಕದ್ರಿ ಉದ್ಯಾನದಲ್ಲಿ ಮೇ 16 ರಿಂದ 18 ರವರೆಗೆ ಮಾವು ಮೇಳ ಆಯೋಜಿಸಲಾಗಿದ್ದು, ಮೇ 16ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮೇಳ ಉದ್ಘಾಟಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.