ADVERTISEMENT

ಹೂವಿನ ದ್ವಾರದಲ್ಲಿ ಸಾಗಿ ದೇವರ ದರ್ಶನ

ವೈಕುಂಠ ಏಕಾದಶಿ: ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 7:50 IST
Last Updated 31 ಡಿಸೆಂಬರ್ 2025, 7:50 IST
ವೈಕುಂಠ ಏಕಾದಶಿ ಪ್ರಯುಕ್ತ ಮಂಗಳೂರಿನ  ಇಸ್ಕಾನ್‌ ನಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಯಿತು ಪ್ರಜಾವಾಣಿ ಚಿತ್ರ 
ವೈಕುಂಠ ಏಕಾದಶಿ ಪ್ರಯುಕ್ತ ಮಂಗಳೂರಿನ  ಇಸ್ಕಾನ್‌ ನಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಯಿತು ಪ್ರಜಾವಾಣಿ ಚಿತ್ರ    

ಮಂಗಳೂರು: ವೈಕುಂಠ ಏಕಾದಶಿ ಪ್ರಯುಕ್ತ ನಗರದ ಡೊಂಗರಕೇರಿ ವೆಂಕಟರಮಣ ದೇವಸ್ಥಾನ, ಇಸ್ಕಾನ್‌ ಸೇರಿದಂತೆ ಜಿಲ್ಲೆಯ ವಿವಿಧ ವಿಷ್ಣು ದೇವಾಲಯಗಳಲ್ಲಿ ಮಂಗಳವಾರ ವಿಶೇಷ ಪೂಜೆಗಳು ನಡೆದವು. ಹೂವಿನಿಂದ ಅಲಂಕರಿಸಿದ ವೈಕುಂಠ ದ್ವಾರದ ಮೂಲಕ ಸಾಗಿದ ಭಕ್ತರು ಈ ಪುಣ್ಯ ದಿನದಲ್ಲಿ ದೇವರ ದರ್ಶನ ಪಡೆದು ಪುನೀತರಾದರು. 

ಡೊಂಗರಕೇರಿಯ ವೆಂಕಟರಮಣ ದೇವಸ್ಥಾನವನ್ನು ಹೂವುಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಇಲ್ಲಿ ನಾಮತ್ರಯ ಮಹಾಮಂತ್ರ ಜಪಯಜ್ಞ, ಪುಷ್ಪಯಾಗ, ಅಷ್ಟಾವಧಾನ ಸೇವೆಗಳು ನಡೆದವು.  ಡೊಂಗರಕೇರಿ ಕಟ್ಟೆಯಿಂದ ದೇವಸ್ಥಾನದ ವರೆಗೆ ನಡೆದ ಪುಷ್ಪಯಾಗದ ಹೂವಿನ ಮೆರವಣಿಗೆಯಲ್ಲಿ ಭಕ್ತಾದಿಗಳು ಶ್ರದ್ಧೆಯಿಂದ ಪಾಲ್ಗೊಂಡರು. ವಿಠೋಬ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು. 

ಶೃಂಗೇರಿ ಸ್ವಾಮೀಜಿ ಭೇಟಿ: ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತೀ ಸ್ವಾಮೀಜಿ ದೇವಸ್ಥಾನವನ್ನು ಸಂದರ್ಶಿಸಿದರು. ಸ್ವಾಮೀಜಿಯನ್ನು ಪೂರ್ಣಕುಂಭ ಸ್ವಾಗತದೊಂದಿಗೆ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು.

ADVERTISEMENT

ದೇವಸ್ಥಾನದಲ್ಲಿ ಬೆಳಿಗ್ಗೆ 5.30ರಿಂದ ಸುಪ್ರಭಾತ ಸೇವೆ,  ಸಾಮೂಹಿಕ ಪ್ರಾರ್ಥನೆ, ಅಷ್ಟಾಕ್ಷರಿ ಮಂತ್ರ ಜಪ, ಪ್ರಾತಃಕಾಲ ಪೂಜೆ, ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಮಧ್ಯಾಹ್ನ ಮಹಾಪೂಜೆ,  ಭಜನೆ, ವೈದಿಕರಿಂದ ವೇದ ಪಾರಾಯಣ,ರಾತ್ರಿ ದೀಪಾರಾಧನೆ, ಮಹಾಪೂಜೆಗಳನ್ನು ನೆರವೇರಿಸಲಾಯಿತು.

ರಥಬೀದಿಯ ವೆಂಕಟರಮಣ ದೇವಸ್ಥಾನದಲ್ಲಿ ಬೆಳಿಗ್ಗೆ 5.30ರಿಂದಲೇ ದೇವಸ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು. ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು.   ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣದಲ್ಲಿ ಭಕ್ತಾದಿಗಳು ಶ್ರದ್ಧೆಯಿಂದ ಭಾಗವಹಿಸಿದರು. 

ಕೊಡಿಯಾಲ್‌ಬೈಲ್‌ನ ಇಸ್ಕಾನ್‌ನಲ್ಲಿ ಶ್ರೀಕೃಷ್ಣ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾಲ ಮಾಡಲಾಗಿತ್ತು. ದೇವರಿಗೆ ವಿಶೇಷ ಪೂಜೆ ನೆರವೇರಿತು.

ವೈಕುಂಠ ಏಕಾದಶಿ ಪ್ರಯುಕ್ತ ಮಂಗಳೂರಿನ ಡೊಂಗರಕೇರಿ  ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿದ ಶೃಂಗೇರಿಯ ವಿಧುಶೇಖರ ಭಾರತಿ ಸ್ವಾಮೀಜಿ ದೇವರ ದರ್ಶನ ಪಡೆದರು ಪ್ರಜಾವಾಣಿ ಚಿತ್ರ
ವೈಕುಂಠ ಏಕಾದಶಿ ಪ್ರಯುಕ್ತ ಮಂಗಳೂರಿನ ರಥಬಿದಿಯ ವೆಂಕಟರಮಣ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಯಿತು ಪ್ರಜಾವಾಣಿ ಚಿತ್ರ
ವೈಕುಂಠ ಏಕಾದಶಿ ಪ್ರಯುಕ್ತ ಹೂವುಗಳಿಂದ ಅಲಂಕೃತಗೊಂಡ  ಡೊಂಗರಕೇರಿ ವೆಂಕಟರಮಣ ದೇವಸ್ಥಾನಕ್ಕೆ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು ಪ್ರಜಾವಾಣಿ ಚಿತ್ರ

ಭಕ್ತರಿಗೆ ತುಳಸಿ ಗಿಡ ವಿತರಣೆ  ವೈಕುಂಠ ಏಕಾದಶಿ ಪ್ರಯುಕ್ತ ಡೊಂಗರಕೇರಿ ವೆಂಕಟರಮಣ ದೇವಸ್ಥಾನಕ್ಕೆ ಬಂದ ಭಕ್ತರಿಗೆ ಪ್ರತಿ ಮನೆಗೆ ಒಂದರಂತೆ ತುಳಸಿ ಗಿಡ ವಿತರಿಸಲಾಯಿತು. ಈ ಸಲುವಾಗಿ 24 ಸಾವಿರ ತುಳಸಿ ಗಿಡಗಳನ್ನು ದೇವಸ್ಥಾನದ ವತಿಯಿಂದ ಸಿದ್ಧಪಡಿಸಲಾಗಿತ್ತು.  ಗಮನ ಸೆಳೆದ ರಂಗೋಲಿ: ದೇವಸ್ಥಾನದಲ್ಲಿ ವಿಷ್ಣು ದೇವರ ದಶಾವತಾರಗಳನ್ನು ಬಿಂಬಿಸುವ ಚಿತ್ತಾಕರ್ಷಕ ರಂಗೋಲಿಗಳನ್ನು ಬಿಡಿಸಲಾಗಿತ್ತು. ದೇವರ ದರ್ಶನಕ್ಕೆ ಬಂದ ಭಕ್ತರು ಈ ರಂಗೋಲಿಯಲ್ಲಿ ಮೂಡಿದ ಮತ್ಸ್ಯ ಕೂರ್ಮ ವರಾಹ ನರಸಿಂಹ ವಾಮನ ಪರಶುರಾಮ ಶ್ರೀರಾಮ ಶ್ರೀಕೃಷ್ಣ ಬುದ್ಧ ಮೊದಲಾದ ಅವತಾರಗಳ ಮನೋಹರ ಚಿತ್ತಾರಗಳನ್ನು ಕಣ್ತುಂಬಿಕೊಂಡರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.