ಮೂಲ್ಕಿ: ‘ಧರ್ಮಸ್ಥಳದ ವಿರುದ್ಧ ವ್ಯವಸ್ಥಿತವಾಗಿ ನಡೆಯುತ್ತಿರುವ ಸಂಚು, ಕ್ಷೇತ್ರದ ಧರ್ಮಾಧಿಕಾರಿ ವಿರುದ್ಧ ನಡೆಯುವ ಅಪಪ್ರಚಾರ ಖಂಡನೀಯ. ಕ್ಷೇತ್ರದ ಬಗ್ಗೆ ಇರುವ ನಂಬಿಕೆ ಶ್ರೇಷ್ಠವಾಗಿದ್ದು, ಅಲ್ಲಿನ ಚಟುವಟಿಕೆಗಳು ಜನಸ್ನೇಹಿಯಾಗಿವೆ’ ಎಂದು ಹಳೆಯಂಗಡಿ ಪ್ರಿಯದರ್ಶಿನಿ ಕೊ–ಆಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾಡ್ ಹೇಳಿದರು.
ಮೂಲ್ಕಿ ಅರಮನೆಯಲ್ಲಿ ತಾಲ್ಲೂಕಿನ ವಿವಿಧ ದೇವಸ್ಥಾನದ ಆಡಳಿತ ಸಮಿತಿ, ಭಜನಾ ಮಂಡಳಿ, ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮೂಲ್ಕಿ ಅರಸು ವಂಶಸ್ಥ ಎಂ.ದುಗ್ಗಣ್ಣ ಸಾವಂತರು ಮಾತನಾಡಿ, ‘ಹೆಣ್ಣು ಮಗಳೊಬ್ಬಳ ಪ್ರಕರಣವನ್ನು ಮುಂದಿಟ್ಟುಕೊಂಡು ಧರ್ಮಸ್ಥಳದ ತೇಜೋವಧೆ ಮಾಡುತ್ತಿರುವುದನ್ನು ತೀವ್ರವಾಗಿ ಖಂಡಿಸಬೇಕು. ಕ್ಷೇತ್ರಕ್ಕೆ ಮತ್ತು ಖಾವಂದರಿಗೆ ನೈತಿಕ ಬೆಂಬಲವನ್ನು ನೀಡುವ ಸಂಕಲ್ಪವನ್ನು ಮಾಡೋಣ’ ಎಂದರು.
ಹೊಯ್ಗೆಗುಡ್ಡೆ ಉಮಾಮಹೇಶ್ವರಿ ದೇವಸ್ಥಾನದ ಮೊಕ್ತೇಸರ ರಾಮ ಭಟ್, ತೋಕೂರು ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗುರುರಾಜ್ ಪೂಜಾರಿ, ಸಸಿಹಿತ್ಲು ಸಾರಂತಾಯ ಗರಡಿ ಸಮಿತಿಯ ಪರಮಾನಂದ ಸಾಲ್ಯಾನ್ ಮಾತನಾಡಿದರು.
ಪಾವಂಜೆ ದೇವಾಡಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಅಣ್ಣಪ್ಪ ದೇವಾಡಿಗ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಚೇಳಾಯೂರು, ಬೆಳ್ಳಾಯರು ಚಂದ್ರಮೌಳೇಶ್ವರ ದೇವಸ್ಥಾನದ ಪ್ರವೀಣ್ ಶೆಟ್ಟಿ, ಶಶಿ ಕೊಲ್ನಾಡು, ಕಲ್ಲಾಪು ವೀರಭದ್ರ ಮಹಾಮಾಯಿ ದೇವಸ್ಥಾನದ ಕರುಣಾಕರ ಶೆಟ್ಟಿಗಾರ್, ಪಾವಂಜೆ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಸುಭಾಸ್ ಸಸಿಹಿತ್ಲು ಭಾಗವಹಿಸಿದ್ದರು.
ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರು ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.