ADVERTISEMENT

ಬೆಳ್ತಂಗಡಿ: ಅನುದಾನ ಲೆಕ್ಕದಲ್ಲಿ ವ್ಯತ್ಯಾಸ, ಬಹಿರಂಗ ಚರ್ಚೆಗೆ ವಸಂತ ಬಂಗೇರ ಸವಾಲು

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 11:17 IST
Last Updated 27 ಜುಲೈ 2021, 11:17 IST
ವಸಂತ ಬಂಗೇರ
ವಸಂತ ಬಂಗೇರ   

ಬೆಳ್ತಂಗಡಿ: ‘ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಮೂರು ವರ್ಷಗಳಲ್ಲಿ ತಾಲ್ಲೂಕಿಗೆ ₹ 833.69 ಕೋಟಿ ಅನುದಾನ ತಂದಿದ್ದೇನೆ ಎಂದು ಹೇಳುತ್ತಿದ್ದು, ಅದರಲ್ಲಿ ನನ್ನ ಶಾಸಕತ್ವದ ಅವಧಿಯ ಅನುದಾನವೂ ಸೇರಿದೆ. ಶಾಸಕರು ಸುಳ್ಳು ಲೆಕ್ಕ ನೀಡದೆ, ಸತ್ಯಾಸತ್ಯತೆಯನ್ನು ಮಾತ್ರ ತಿಳಿಸಲಿ’ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಅನುದಾನಕ್ಕೆ ಸಂಬಂಧಪಟ್ಟ 20 ಇಲಾಖೆಗಳಿಂದ ಮಾಹಿತಿ ಪಡೆದಿದ್ದೇನೆ. ಕೆಲವೊಂದು ಅಂಕಿ ಅಂಶಗಳಲ್ಲಿ ಎರಡೆರಡು ಬಾರಿ ಒಂದೇ ಅನುದಾನವನ್ನು ತೋರಿಸಿದ ಉದಾಹರಣೆಗಳಿವೆ. ನಾನು ಶಾಸಕರನ್ನು ಬಹಿರಂಗವಾಗಿ ಚರ್ಚೆಗೆ ಆಹ್ವಾನಿಸುತ್ತಿದ್ದೇನೆ. ಪತ್ರಕರ್ತರ ಸಮಕ್ಷಮದಲ್ಲಿ ಶಾಸಕರು ನಿಗದಿಗೊಳಿಸಿದ ದಿನ ಅಧಿಕಾರಿಗಳನ್ನು ಕರೆದುಕೊಂಡು ಅವರು ನೀಡಿದ ಲೆಕ್ಕದ ಬಗ್ಗೆ ಚರ್ಚೆಗೆ ಎಲ್ಲಿಗೆ ಕರೆದರೂ ನಾನು ಬರಲು ಸಿದ್ಧನಿದ್ದೇನೆ. ₹ 833.69 ಕೋಟಿ ಅನುದಾನ ಅವರೇ ತರಿಸಿದ್ದು ಎನ್ನುವ ಬಗ್ಗೆ ದಾಖಲೆಗಳನ್ನು ನೀಡಿದಲ್ಲಿ ಅಲ್ಲಿಯೇ ಅವರನ್ನು ಅಭಿನಂದಿಸಲು ನಾನು ಬದ್ಧನಾಗಿದ್ದೇನೆ. ಇಲ್ಲದಿದ್ದರೆ ಶಾಸಕರು ಸಾರ್ವಜನಿಕವಾಗಿ ಕ್ಷಮೆಯನ್ನು ಕೇಳಬೇಕಾಗುತ್ತದೆ’ ಎಂದು ಸವಾಲು ಹಾಕಿದರು.

‘ನನ್ನ ಶಾಸಕತ್ವದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಇನ್ನಾದರೂ ಶಾಸಕರು ಪ್ರಾಮಾಣಿಕವಾಗಿ ತಂದ ಅನುದಾನವನ್ನು ಮಾತ್ರ ಜನರ ಮುಂದಿಡಲಿ. ಇದು ನಿಜವಾಗಿ ಕ್ಷೇತ್ರ ಅಭಿವೃದ್ಧಿಗೆ ಇರುವ ಕಾಳಜಿಯಾಗುತ್ತದೆ’ ಎಂದು ಸಲಹೆ ನೀಡಿದರು.

ADVERTISEMENT

ಕಾಂಗ್ರೆಸ್ ವಕ್ತಾರ ಮನೋಹರ್ ಕುಮಾರ್ ಮಾತನಾಡಿ, ‘ಕೆಲವೊಂದು ಅನುದಾನ ಸರ್ಕಾರದಿಂದ ನಿರಂತರವಾಗಿ ಬರುತ್ತಿರುತ್ತವೆ. ಅದನ್ನು ಶಾಸಕರು ತನ್ನ ಅನುದಾನ ಎಂದು ಹೇಳಿಕೊಳ್ಳುತ್ತಿದ್ದಾರೆ. ಸುಮಾರು ₹ 368.5 ಕೋಟಿ ಅನುದಾನ ಮಾಜಿ ಶಾಸಕರ ಶಿಫಾರಸ್ಸಿನ ಹಾಗೂ ವಿವಿಧ ಇಲಾಖೆಗಳಿಗೆ ನಿರಂತರವಾಗಿ ಬರುವ ಅನುದಾನವಾಗಿದೆ’ ಎಂದರು.

ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜನ್ ಜಿ. ಗೌಡ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್, ಮುಖಂಡರಾದ ಅಭಿನಂದನ್ ಹರೀಶ್ ಕುಮಾರ್, ಶೇಖರ್ ಕುಕ್ಕೇಡಿ, ದಿವ್ಯಜ್ಯೋತಿ, ಜಯಶೀಲ, ಸುಶೀಲಾ, ಜಯರಾಮ್, ಓಬಯ್ಯ ಆರಂಬೋಡಿ, ಸತೀಶ್ ಶೆಟ್ಟಿ, ಸಂದೀಪ್ ಎಸ್.ಎನ್, ಅಬ್ದುಲ್ ರೆಹಮಾನ್ ಪಡ್ಪು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.