
ಸುಬ್ರಹ್ಮಣ್ಯ: ‘ಕ್ಷೇತ್ರದಲ್ಲಿನ ವೈದಿಕ ವಿಧಿ ವಿಧಾನಗಳು, ಅರ್ಚಕರು ಹೇಳುವ ಮಂತ್ರ, ಉತ್ಸವಗಳು, ಅನ್ನದಾನ ಮೊದಲಾದ ಪಂಚ ಸಂಗತಿಗಳು ಕ್ಷೇತ್ರದ ಪಾವಿತ್ರ್ಯವನ್ನು ಹೆಚ್ಚಿಸುತ್ತವೆ. ಕ್ಷೇತ್ರಾರಾಧನೆ ಭಾರತೀಯ ಸಂಸ್ಕೃತಿಯಲ್ಲಿ ಮಹೋನ್ನತವಾದುದು’ ಎಂದು ಸೋಲೂರು ಆರ್ಯ ಈಡಿಗ ಮಹಾ ಸಂಸ್ಥಾನ ಮಠದ ವಿಖ್ಯಾತಾನಂದ ಸ್ವಾಮೀಜಿ ಹೇಳಿದರು.
ಮಹತೋಭಾರ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಐದು ದಿನಗಳ ಕಿರು ಷಷ್ಠಿ ಮಹೋತ್ಸವದ ಅಂಗವಾಗಿ ಧಾರ್ಮಿಕ ಸಮ್ಮೇಳನ ಹಾಗೂ ಸಾಂಸ್ಕೃತಿಕ ವೈಭವದ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಶ್ರೀಗುರುಬಸವ ಮಹಾಮನೆ ಚನ್ನಯನಗಿರಿಯ ಶ್ರೀಬಸವಾನಂದ ಸ್ವಾಮೀಜಿ, ‘ವೈವಿಧ್ಯತೆಯಲ್ಲಿ ಏಕತೆ ಸಾಧಿಸಿರುವುದು ಭಾರತದ ಹಿರಿಮೆ. ಶುದ್ಧವಾದ ನೀರು, ಸ್ವಚ್ಛ ಗಾಳಿ ಸೇವನೆ, ಪರಿಶುದ್ಧವಾದ ಚಿಂತನೆ ಮತ್ತು ಉಪವಾಸಗಳು ಶ್ರೇಷ್ಠ ಔಷಧಿ. ಇದರ ಪರಿಪಾಲನೆಯಿಂದ ದೇಹದ ಆರೋಗ್ಯ ಅಭಿವೃದ್ಧಿಯಾಗುತ್ತದೆ’ ಎಂದರು.
ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ.ಡಿ.ಎಸ್.ಗಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮುಖಂಡ ಬಿ.ರಮಾನಾಥ ರೈ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸುರೇಶ್, ಕೆಡಿಪಿ ಸದಸ್ಯ ಶಿವರಾಮ ರೈ ಭಾಗವಹಿಸಿದ್ದರು.
ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಡಾ.ರಘು, ಅಜಿತ್ ಕುಮಾರ್, ಸೌಮ್ಯ ಭರತ್, ಲೀಲಾ ಮನಮೋಹನ್, ಪ್ರವೀಣಾ ರೈ ಮರುವಂಜ, ಮಾಸ್ಟರ್ ಪ್ಲಾನ್ ಮೇಲ್ವಿಚಾರಣಾ ಸಮಿತಿ ಸದಸ್ಯರಾದ ಲೋಲಾಕ್ಷ ಕೈಕಂಬ, ಪವನ್ ಎಂ.ಡಿ, ಸತೀಶ್ ಕೂಜುಗೋಡು, ಅಚ್ಯುತ ಗೌಡ ಬಳ್ಪ ವೇದಿಕೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.