ADVERTISEMENT

ಉಜಿರೆ | ವೀರೇಂದ್ರ ಹೆಗ್ಗಡೆ ಅವರ ಸೇವೆ ಅನನ್ಯ: ಸಿದ್ಧಗಂಗಾ ಶ್ರೀ

ವೀರೇಂದ್ರ ಹೆಗ್ಗಡೆ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 16:15 IST
Last Updated 24 ಅಕ್ಟೋಬರ್ 2025, 16:15 IST
ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಅಶೀರ್ವಚನ ನೀಡಿದರು
ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಅಶೀರ್ವಚನ ನೀಡಿದರು   

ಉಜಿರೆ (ದಕ್ಷಿಣ ಕನ್ನಡ): ‘ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳ ನಾಡಿನ ಪವಿತ್ರ ಪುಣ್ಯಕ್ಷೇತ್ರ. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಮಾತೃ ಹೃದಯದಿಂದ ಮಾಡುವ ಸಮಾಜಸೇವೆ ಅನನ್ಯ ಮತ್ತು ಅನುಪಮ’ ಎಂದು ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಮಹಾತ್ಮಗಾಂಧಿ ಅವರ ಗ್ರಾಮರಾಜ್ಯದ ಮೂಲಕ ರಾಮರಾಜ್ಯದ ಕನಸನ್ನು ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆ, ಮನಃಪರಿವರ್ತನೆ ಮೂಲಕ ಮದ್ಯವರ್ಜನ ಶಿಬಿರದೊಂದಿಗೆ ನನಸು ಮಾಡಿದ್ದಾರೆ. ಪ್ರಧಾನಿ ಮೋದಿಯವರ ವಿಕಸಿತ ಭಾರತ ಕಲ್ಪನೆಯನ್ನು ಅನುಷ್ಠಾನಗೊಳಿಸಿದ್ದಾರೆ. ದೀನ– ದಲಿತರ, ಮಹಿಳೆಯರ ಬದುಕಿಗೆ ತಾಯಿ– ತಂದೆ, ಪೋಷಕರಂತೆ ಪ್ರೀತಿ– ವಿಶ್ವಾಸದಿಂದ ಪ್ರೇರಣೆ ಮಾರ್ಗದರ್ಶನ, ಪ್ರೋತ್ಸಾಹ ನೀಡಿ ನವ ಚೈತನ್ಯದೊಂದಿಗೆ ಸ್ವಾವಲಂಬಿ ಜೀವನ ಮಾಡಲು ದಾರಿದೀಪವಾಗಿದ್ದಾರೆ ಎಂದರು.

ADVERTISEMENT

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಹೊಸ ಯೋಜನೆಗಳನ್ನು ಪ್ರಕಟಿಸಿದರು. ಉಜಿರೆಯಲ್ಲಿ ನರ್ಸಿಂಗ್ ಕಾಲೇಜು ಪ್ರಾರಂಭ, ಎಂ.ಆರ್.ಐ. ಘಟಕ, 2000ನೇ ಮದ್ಯವರ್ಜನ ಶಿಬಿರ ಧರ್ಮಸ್ಥಳದಲ್ಲಿ ನವೆಂಬರ್ 6ರಂದು ನಡೆಯಲಿದ್ದು, 1,35,000 ವ್ಯಸನಮುಕ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಶಾಸಕ ಹರೀಶ್ ಪೂಂಜ, ಕಂಚಿಕಾಮಕೋಟಿ ಪೀಠದ ಪ್ರತಿನಿಧಿ ಗುರುಚರಣಮೂರ್ತಿ ಮಾತನಾಡಿದರು. ವಿಘ್ನರಾಜ, ಪವನ್ ಸಂಪಾದಿಸಿದ ‘ವೃಷಭೇಶ್ವರ’ ಗ್ರಂಥವನ್ನು ಸ್ವಾಮೀಜಿ ಲೋಕಾರ್ಪಣೆ ಮಾಡಿದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಪ್ರಾಂಶುಪಾಲ ಸುನಿಲ್ ಪಂಡಿತ್ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.