ADVERTISEMENT

ಮಂಗಳೂರು: ಅಗಲಿದ ‘ವಿನಯ’ವಂತನಿಗೆ ಕಂಬನಿ ಮಿಡಿದ ಕರಾವಳಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 4:20 IST
Last Updated 15 ಜನವರಿ 2026, 4:20 IST
ದಿ.ಎನ್‌.ವಿನಯ ಹೆಗ್ಡೆ ಅವರಿಗೆ ನುಡಿ ನಮನ ಸಲ್ಲಿಸಲು ಮಂಗಳೂರಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸೇರಿದ್ದ ಅವರ ಅಭಿಮಾನಿಗಳು
ದಿ.ಎನ್‌.ವಿನಯ ಹೆಗ್ಡೆ ಅವರಿಗೆ ನುಡಿ ನಮನ ಸಲ್ಲಿಸಲು ಮಂಗಳೂರಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸೇರಿದ್ದ ಅವರ ಅಭಿಮಾನಿಗಳು   

ಮಂಗಳೂರು: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ, ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ದಿ.ನಿಟ್ಟೆ ವಿನಯ ಹೆಗ್ಡೆ ಅವರ ಕೊಡುಗೆಗಳನ್ನು ಸ್ಮರಿಸಿದ ಕರಾವಳಿಯ ಜನರು ಅವರಿಗೆ ಆಶ್ರುತರ್ಪಣ ಸಲ್ಲಿಸಿದರು. ಅಗಲಿದ ಅವರ ಆತ್ಮಕ್ಕೆ ಕಂಬನಿ ಮಿಡಿದರು.

ಇಲ್ಲಿ ಮಂಗಳವಾರ ಏರ್ಪಡಿಸಿದ್ದ ನಿಟ್ಟೆ ವಿನಯ ಹೆಗ್ಡೆ ನುಡಿನಮನ ಕಾರ್ಯಕ್ರಮವು ಜನ ಅವರ ಮೇಲಿಟ್ಟ ಪ್ರೀತಿ ಆದರಗಳಿಗೆ ಕನ್ನಡಿ ಹಿಡಿಯಿತು.  

ವಿನಯ ಹೆಗ್ಡೆ ಅವರ ಸೋದರ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ ಹೆಗ್ಡೆ, ‘ನಾವು ಜೊತೆ ಜೊತೆಯಲ್ಲೇ ಬೆಳೆದೆವು. ವಿದ್ಯಾಭ್ಯಾಸದ ಬಳಿಕ ವೃತ್ತಿ ಬದುಕಿನ ಕಾರಣಕ್ಕೆ ನಾವಿಬ್ಬರು ಬೇರೆ ಬೇರೆ ಕಡೆ ನೆಲೆಸಬೇಕಾಗಿ ಬಂತು. ಪ್ರೀತಿಯ ಸೋದರ, ನನಗಿಂತ 14 ತಿಂಗಳು ದೊಡ್ಡವನು. ಆದರೂ ಅನೇಕರು ನಮ್ಮಿಬ್ಬರನ್ನು ಅವಳಿ–ಜವಳಿ ಎಂದೇ ಭಾವಿಸಿದ್ದರು’ ಎಂದರು.

ADVERTISEMENT

‘ಲೆಮಿನಾ ಸಂಸ್ಥೆಯನ್ನು ಸ್ಥಾಪಿಸಿದ ಅಣ್ಣ ಯಶಸ್ವಿ ಉದ್ಯಮಿಯಾಗಿ ಸಾಧನೆಯ ಹಾದಿಯಲ್ಲಿ ಮುನ್ನಡೆದರು. ಕೆ.ಎಸ್.ಹೆಗ್ಡೆ ವೈದ್ಯಕೀಯ ಅಕಾಡೆಮಿ ಸ್ಥಾಪಿಸಿ ಸಮಾಜಕ್ಕೆ ಮಹತ್ತರ ಕೊಡುಗೆ ನೀಡಿದರು. ಪ್ರಾಮಾಣಿಕತೆ, ನಿಷ್ಠೆ, ಶ್ರಮದ ಫಲವಾಗಿ ಇಂದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ’ ಎಂದು ಸ್ಮರಿಸಿದರು.   

ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಾಧಿಪತಿ  ಡಾ.ಶಾಂತಾರಾಮ ಶೆಟ್ಟಿ, ‘ವಿನಯ ಹೆಗ್ಡೆ ಅವರೊಬ್ಬ ಕನಸುಗಾರ. ರಾತ್ರಿ ಕಂಡ ಕನಸನ್ನು ನಾವು ಮರೆತುಬಿಟ್ಟರೆ, ಅವರು ಹಗಲು ಕೂಡ ಕನಸು ಕಂಡು, ಅದು ನನಸಾಗುವವರೆಗೂ ನಿದ್ರಿಸುತ್ತಿರಲಿಲ್ಲ. ಆವಿಷ್ಕಾರ ಪ್ರವೃತ್ತಿಯ ಅವರು ಸದಾ ಶ್ರೇಷ್ಠವಾದುದನ್ನು ಸಾಧಿಸಲು ಹಂಬಲಿಸುತ್ತಿದ್ದರು’ ಎಂದರು.

‘ಈ ನೆಲದಲ್ಲಿ ಏನೆಲ್ಲ ಸಾಧಿಸಬಹುದು ಎಂಬುದನ್ನು ಉದ್ಯಮಿಯಾಗಿ, ಶಿಕ್ಷಣ ತಜ್ಞರಾಗಿ, ಕ್ರೀಡಾ ಪ್ರೇಮಿಯಾಗಿ ತೋರಿಸಿಕೊಟ್ಟ ವ್ಯಕ್ತಿತ್ವಕ್ಕೆ ನಾವೆಲ್ಲ ನಮಿಸುತ್ತಿದ್ದೇವೆ’ ಎಂದರು.   

ಮೇಧಾ ವಿದ್ಯಾಭೂಷಣ ಅವರ ತಂಡದಿಂದ ಭಜನ ಸಂಕೀರ್ತನೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.