
ಮಂಗಳೂರು: ಒಂಟೆ, ಕುದುರೆಗಳ ಹೆಗಲೇರಿ ಸವಾರಿ ಮಾಡಿದ್ದು, ತಿರುಗುವ ತೊಟ್ಟಿಲಿನಲ್ಲಿ ಕುಳಿತದ್ದು, ಬಕೆಟ್ ಒಳಗೆ ಚೆಂಡೆಸೆದದ್ದು, ಕಣ್ಣಿಗೆ ಬಟ್ಟೆ ಕಟ್ಟಿ ಭಾವಚಿತ್ರಕ್ಕೆ ಬಿಂದಿ ಇಟ್ಟಿದ್ದು, ಕೈಗಳಿಗೆ ಮೆಹಂದಿ ಹಾಕಿಸಿಕೊಂಡಿದ್ದು, ಬಗೆ ಬಗೆಯ ತಿಂಡಿ ತಿನಿಸು ಮೆದ್ದಿದ್ದು... ಒಂದೊಂದು ಕ್ಷಣವೂ ನಿಷ್ಕಲ್ಮಶ ಭಾವದ ಭಿನ್ನ ಸಾಮರ್ಥ್ಯದ ಮಕ್ಕಳು ಖುಷಿಯ ಅಲೆಯಲ್ಲಿ ತೇಲುವಂತೆ ಮಾಡಿತು.
ಸೇವಾ ಭಾರತಿಯ ಆಶಾಜ್ಯೋತಿ ಸಂಸ್ಥೆಯು ನಗರದ ಡೊಂಗರಕೇರಿಯ ಕೆನರಾ ಮೇನ್ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ವಿಶಿಷ್ಟರಿಗಾಗಿ ವಿಶಿಷ್ಟ ಮೇಳ ವಿವಿಧ ವಯೋವರ್ಗದ ಭಿನ್ನ ಸಾಮರ್ಥ್ಯದ ಚಿಣ್ಣರಿಗೆ ಅವಿಸ್ಮರಣೀಯ ಕ್ಷಣಗಳನ್ನು ಕಟ್ಟಿಕೊಟ್ಟಿತು.
ಟೇಬಲ್ ಮೇಲಿದ್ದ ಸಾಮಗ್ರಿಗೆ ರಿಂಗ್ ಎಸೆಯುವುದು, ಡಬ್ಬಿಗೆ ಗುರಿ ಇಡುವುದು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುದುರೆ ಚಿತ್ರಕ್ಕೆ ಬಾಲ ಬಿಡಿಸುವುದು, ಡಬ್ಬಿಯಲ್ಲಿ ತುಂಬಿದ್ದ ನಾಣ್ಯಗಳ ಹಾಗೂ ಚೆಂಡುಗಳ ಸಂಖ್ಯೆ ಎಷ್ಟು ಎಂದು ಅಂದಾಜಿಸುವುದು, ಕವಡೆ ಆಟ, ಗಜುಗದ ಕಾಯಿ ಆಟ, ಇಟ್ಟಿಗೆಯ ತೂಕ ಪತ್ತೆ ಹಚ್ಚುವುದು... ಮುಂತಾದ ಹಲ ಬಗೆಯ ಮನರಂಜನಾ ಆಟಗಳು ಭಿನ್ನ ಸಾಮರ್ಥ್ಯದ ಮಕ್ಕಳ ಬುದ್ಧಿಗೂ ಕೆಲಸ ಕೊಟ್ಟವು.
ಬಿರು ಬಿಸಿಲಿನಲ್ಲಿ ಕೆಲ ಮಕ್ಕಳು ಕಲ್ಲಂಗಡಿ, ಐಸ್ ಕ್ಯಾಂಡಿ, ಲಸ್ಸಿ, ಮಜ್ಜಿಗೆ, ತಂಪು ಪಾನೀಯ ಸವಿದರೆ, ಇನ್ನು ಕೆಲವರು ಬಿಸಿ ಬಿಸಿ ಪೋಡಿ ತಿಂದರು. ಚಕ್ಕುಲಿ, ಉಂಡೆ ಚಿಕ್ಕಿ, ಸಕ್ಕರೆ ಮಿಠಾಯಿ, ನೆಲಗಡಲೆ, ಚಾಕಲೇಟ್, ಪಾವ್ ಬಾಜಿ, ಬೇಲ್ ಪುರಿ, ಪಾನಿಪುರಿ ಮಳಿಗೆಗಳಿಗೆ ಕೆಲ ಚಿಣ್ಣರು ಮುಗಿಬಿದ್ದರು.
‘2 ಸಾವಿರಕ್ಕೂ ಹೆಚ್ಚು ಮಂದಿ ಭಿನ್ನ ಸಾಮರ್ಥ್ಯದವರು, 150 ದಾನಿಗಳು, 500ಕ್ಕೂ ಹೆಚ್ಚು ಪೋಷಕರು ಸೇರಿದಂತೆ 3200ಕ್ಕೂ ಹೆಚ್ಚು ಮಂದಿ ಈ ಮೇಳದಲ್ಲಿ ಭಾಗವಹಿಸಿದ್ದಾರೆ. ವಿವಿಧ ಕಾಲೇಜುಗಳ 300 ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ದುಡಿದಿದ್ದಾರೆ’ ಎಂದು ಸಂಘಟಕರು ತಿಳಿಸಿದರು.
ಮೇಳವನ್ನು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಡಾ.ಶಾಂತಾರಾಮ ಶೆಟ್ಟಿ ಉದ್ಘಾಟಿಸಿದರು. ಕರ್ಣಾಟಕ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ವಿನಯ ಭಟ್ ಪಿ.ಜೆ., ಎಂಆರ್‌ಪಿಎಲ್ ಜಿಜಿಎಂ (ಮಾನವ ಸಂಪನ್ಮೂಲ) ಕೃಷ್ಣ ಹೆಗ್ಡೆ ಭಾಗವಹಿಸಿದ್ದರು. ಎಚ್.ಎನ್.ನಾಗರಾಜ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷೆ ಗೀತಾ ಲಕ್ಷ್ಮೀಶ ಅವರು ಸ್ವಾಗತಿಸಿದರು. ಗಣರಾಜ ಏತಡ್ಕ ವಂದಿಸಿದರು.
‘ವಿಶೇಷ’ ಸಾಧಕರಿಗೆ ಸನ್ಮಾನ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಭಿನ್ನ ಸಾಮರ್ಥ್ಯದ ಚಿಣ್ಣರಾದ ಪಾಂಬೂರಿನ ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರದ ಸಾಯಿದೀಪ್ ಶೆಟ್ಟಿ ಮತ್ತು ಚಿರಾಗ್ ಪೈ ಮೂಡುಬಿದಿರೆ ಸ್ಪೂರ್ತಿ ವಿಶೇಷ ಶಾಲೆಯ ಸಹಲಾ ಸುರತ್ಕಲ್‌ನ ಲಯನ್ಸ್ ವಿಶೇಷ ಶಾಲೆಯ ದೀಕ್ಷಿತಾ ಸನಿಲ್ ಕಾರ್ಕಳದ ವಿಜೇತಾ ವಿಶೇಷ ಶಾಲೆಯ ಕಿಶೋರ್ ಮತ್ತು ಪ್ರೀತಿ ಮಂಗಳೂರಿ ರೋಮನ್ ಆ್ಯಂಡ್ ಕ್ಯಾಥರೀನ್ ಲೋಬೊ ಅಂಧರ ವಸತಿ ಶಾಲೆಯ ಈಶ್ವರಿ ಅವರನ್ನು ಅಭಿನಂದಿಸಲಾಯಿತು.
ಇಂತಹ ಮಕ್ಕಳ ಬಗ್ಗೆ ತಿಳಿದವರೇ ಇಲ್ಲಿರುವುದರಿಂದ ಭಿನ್ನ ಸಾಮರ್ಥ್ಯದ ಮಕ್ಕಳು ಇಲ್ಲಿನ ಚಟುವಟಿಕೆಗಳಲ್ಲಿ ಅಳುಕಿಲ್ಲದೇ ಭಾಗವಹಿಸಬಹುದು. ಬೇರೆ ಮೇಳಗಳಲ್ಲಿ ಇಷ್ಟು ಮುಕ್ತವಾಗಿರಲು ಸಾಧ್ಯವಿಲ್ಲ–ಆನಂದ ಡಿ., ಭಿನ್ನಸಾಮರ್ಥ್ಯದ ಮಗುವಿನ ಪೋಷಕ ಶಕ್ತಿನಗರ
ಕುದುರೆ ಹಾಗೂ ಒಂಟೆಯಲ್ಲಿ ಮೊದಲ ಸಲ ಕುಳಿತೆ. ಜಾಯಿಂಟ್ ವ್ಹೀಲ್‌ನಲ್ಲಿ ಕುಳಿತ ಹಾಗೂ ಜೋಕಾಲಿ ಆಡಿದ ಖುಷಿ ಮರೆಯುವಂತಿಲ್ಲ. ಮುಂದಿನ ವರ್ಷವೂ ಈ ಮೇಳಕ್ಕೆ ಬರುತ್ತೇನೆ–ಮೊಹಮ್ಮದ್ ಸಫ್ವಾನ್, ಪಂಪ್‌ವೆಲ್
ಒಂಟೆ ಹಾಗೂ ಕುದುರೆ ಸವಾರಿ ಮಾಡಿದ್ದು ತುಂಭಾ ಖುಷಿಕೊಟ್ಟಿತು. ಇಲ್ಲಿ ಹಮ್ಮಿಕೊಂಡಿದ್ದ ಅನೇಕ ಆಟಗಳಲ್ಲಿ ಭಾಗವಹಿಸಿದೆ. ಬಿಸಿ ಬಿಸಿ ಪೋಡಿ ಇಷ್ಟವಾಯಿತು. ಈ ಹಿಂದಿನ ವರ್ಷವೂ ಈ ಮೇಳದಲ್ಲಿ ಭಾಗವಹಿಸಿದ್ದೆ.–ಸಾಬಿತ್, ಮಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.