ADVERTISEMENT

ಹಿಂದೂ– ಜೈನ ಧರ್ಮದ ಸಂಬಂಧ ಗಟ್ಟಿ

ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 3:50 IST
Last Updated 6 ಸೆಪ್ಟೆಂಬರ್ 2022, 3:50 IST
ವಿಟ್ಲದಲ್ಲಿ ನಡೆದ ಚಂದ್ರನಾಥ ಸ್ವಾಮಿ ಬಸದಿಯ ಪುನರ್ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮೋಹನದಾಸ ಪರಮಹಂಸ ಸ್ವಾಮೀಜಿ, ಹರ್ಷೇಂದ್ರಕುಮಾರ್, ಸುರೇಂದ್ರ ಕುಮಾರ್ ಇದ್ದರು.
ವಿಟ್ಲದಲ್ಲಿ ನಡೆದ ಚಂದ್ರನಾಥ ಸ್ವಾಮಿ ಬಸದಿಯ ಪುನರ್ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮೋಹನದಾಸ ಪರಮಹಂಸ ಸ್ವಾಮೀಜಿ, ಹರ್ಷೇಂದ್ರಕುಮಾರ್, ಸುರೇಂದ್ರ ಕುಮಾರ್ ಇದ್ದರು.   

ವಿಟ್ಲ: ಇಲ್ಲಿನ ಮೇಗಿನಪೇಟೆಯಲ್ಲಿರುವ ಚಂದ್ರನಾಥ ಸ್ವಾಮಿ ಬಸದಿಯ ಪುನರ್ ನಿರ್ಮಾಣದ ಶಿಲಾನ್ಯಾಸ ಸಮಾರಂಭವು ಸೋಮವಾರ ನಡೆಯಿತು.

ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು, ‘ಬಸದಿಯ ಪುನರ್ ನಿರ್ಮಾಣದೊಂದಿಗೆ
ವಿಟ್ಲ ಭಾಗದ ಜನರ ಪುಣ್ಯ ಹೆಚ್ಚಾಗಲಿದೆ. ಹಿಂದೂ, ಜೈನ ಧರ್ಮದೊಳಗಿನ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ. ಧಾನ, ಧರ್ಮ ಹಾಗೂ ಪ್ರೇರಣೆ ನಮ್ಮೊಳಗಿರಬೇಕು. ಇಂತಹ ಪಾವನ ಕ್ಷೇತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಾಗ ಜೀವನದಲ್ಲಿ ಸಂತೋಷ ಪ್ರಾಪ್ತಿಯಾಗುತ್ತದೆ’ ಎಂದರು.

ಶ್ರೀಧಾಮ ಮಾಣಿಲ ಮಹಾಲಕ್ಷ್ಮಿ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, ‘ಇತಿಹಾಸದಲ್ಲಿ ಜೈನ ಸಮುದಾಯಕ್ಕೆ ಹಾಗೂ ಹಿಂದೂ ಸಮಾಜಕ್ಕೆ ಅವಿನಾಭಾವ ಸಂಬಂಧವಿದೆ. ಜೈನ ಸಮುದಾಯ ವಿಟ್ಲ ಸೀಮೆಗೆ ಸಾಮರಸ್ಯದ ಸಂದೇಶ ನೀಡಿದೆ. ಸಾಮರಸ್ಯದ ಜಿನ ಮಂದಿರ ದೇಶಕ್ಕೆ ಮಾದರಿಯಾಗಲಿ. ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಜಿತೇಶ್ ಹಾಗೂ ದರ್ಷಣ್ ಎಂಬ ಇಬ್ಬರು ಯುವಕರ ನಿಸ್ವಾರ್ಥ ಸೇವೆಗೆ ತಕ್ಕ ಪ್ರತಿಫಲ ಸಿಗಲಿದೆ’ ಎಂದರು.

ADVERTISEMENT

ಶ್ರೀ ಕ್ಷೇತ್ರ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಮಾತನಾಡಿ, ನಿಷ್ಕಲ್ಮಶ ಸೇವೆಯಿಂದ ಯಶಸ್ಸು ಸಾಧ್ಯ ಎಂದರು. ಶಾಸಕ ಸಂಜೀವ ಮಠಂದೂರು ಮಾತನಾಡಿ,ಹಿಂದೂ ಧರ್ಮದಷ್ಟೇ ಪವಿತ್ರವಾದುದು ಜೈನ ಧರ್ಮ. ತುಳುನಾಡಿಗೆ ಜೈನ ಧರ್ಮೀಯರ ಕೊಡುಗೆ ಅಪಾರವಾಗಿದೆ ಎಂದರು.

ವಿಟ್ಲ ಅರಮನೆಯ ಬಂಗಾರು ಅರಸರು, ಶ್ರೀ ಕ್ಷೇತ್ರ ಧರ್ಮಸ್ಥಳದ ಸುರೇಂದ್ರ ಕುಮಾರ್ ಉಪಸ್ಥಿತರಿದ್ದರು. ಬಸದಿಯ ಆಡಳಿತ ಮೊಕ್ತೇಸರ ಡಿ.ವಿನಯ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಾಧ್ಯಕ್ಷ ಜಿತೇಶ್ ಎಂ. ಸ್ವಾಗತಿಸಿದರು. ದರ್ಷಣ್ ಜೈನ್ ವಂದಿಸಿದರು. ಸೌಜನ್ಯ ಎಸ್. ಜೈನ್ ಪ್ರಾರ್ಥಿಸಿದರು. ಡಾ. ಶ್ರೀಮಂದಾರ ಜೈನ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.