
ವಿಟ್ಲ: ದಿನವೂ ಜನರಿಂದ ಗಿಜಿಗುಟ್ಟುತ್ತಿರುವ ವಿಟ್ಲ ಸಮುದಾಯದ ಆಸ್ಪತ್ರೆಯು ಪ್ರಾಥಮಿಕ ಆಸ್ಪತ್ರೆಯಾಗಿ ಕೆಳದರ್ಜೆಗೆ ಇಳಿಯಲಿದೆ ಎಂಬ ವದಂತಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ ಎಂದು ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯರು ಆತಂಕ ವ್ಯಕ್ತಪಡಿಸಿದರು.
ವಿಟ್ಲ ಪಟ್ಟಣ ಪಂಚಾಯಿತಿನಲ್ಲಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ತೀವ್ರ ಕಳವಳ ವ್ಯಕ್ತಪಡಿಸಿದರು.
ಸದಸ್ಯ ಅರುಣ್ ವಿಟ್ಲ ಮಾತನಾಡಿ, ಸಾರ್ವಜನಿಕರಲ್ಲಿ ಗೊಂದಲ ಇದೆ, ಸ್ಪಷ್ಟನೆ ಬೇಕು ಎಂದರು. ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ರವಿಪ್ರಕಾಶ್, ವಿರೋಧಪಕ್ಷದ ವಿ. ಕೆ.ಎಂ.ಆಶ್ರಫ್ ಇದಕ್ಕೆ ಧ್ವನಿಗೂಡಿಸಿದರು.
ಗ್ರಾಮೀಣ ಪ್ರದೇಶವಾದ ವಿಟ್ಲದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಅಗತ್ಯವಿದೆ. ಜನರಿಗೆ ಸೀಮಿತ ಮತ್ತು ನಿಗದಿತ ಅವಧಿಯಲ್ಲಿ ಮಾತ್ರ ಚಿಕಿತ್ಸೆ ನೀಡುವ ಬದಲು 24 ಗಂಟೆಯೂ ಚಿಕಿತ್ಸೆ, ಸೌಲಭ್ಯಗಳು ಸಿಗಬೇಕು. ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ಕೈಗೊಳ್ಳಬೇಕು. ಸೌಲಭ್ಯ ಹೆಚ್ಚಿಸಬೇಕು. ಅದರ ಬದಲು ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಕೆಳದರ್ಜೆಗೆ ಇಳಿಸುವ ವಿಚಾರ ಖಂಡನೀಯ ಎಂದು ಸದಸ್ಯರು ಹೇಳಿದರು.
ಸಮುದಾಯ ಆರೋಗ್ಯ ಕೇಂದ್ರವನ್ನು ಕೆಳದರ್ಜೆಗೆ ಇಳಿಸದಂತೆ ಸರ್ಕಾರವನ್ನು ಒತ್ತಾಯಿಸುವ ಒಕ್ಕೊರಳ ನಿರ್ಣಯ ಅಂಗೀಕರಿಸಲಾಯಿತು.
ಬೀದಿ ನಾಯಿಗಳ ಉಪಟಳ ನಿಯಂತ್ರಣ ಬಗ್ಗೆ ಮಾಹಿತಿ ನೀಡಿದ ಮುಖ್ಯಾಧಿಕಾರಿ ಕರುಣಾಕರ ವಿ., ನಾಯಿಗಳಿಗೆ ಆಹಾರ ಹಾಕುವವರಿಗೆ ನಿಗದಿತ ಸ್ಥಳದಲ್ಲಿ ಹಾಕಲು ಸ್ಥಳ ಗುರುತಿಸುವಿಕೆಗೆ ಸಭೆ ಕರೆಯಲಾಗಿದೆ. ನ್ಯಾಯಾಲಯದ ಸೂಚನೆಯಂತೆ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಸರ್ವೇ ಕಾರ್ಯ ನಡೆದಿದೆ ಎಂದರು.
ನಿಯಂತ್ರಣಕ್ಕೆ ಬಾರದ ಟ್ರಾಫಿಕ್ ಸಮಸ್ಯೆ ಬಗ್ಗೆ, ಮಂಗಳೂರು ರಸ್ತೆಯಲ್ಲಿನ ಬಸ್ ತಂಗುದಾಣದ ಬಗ್ಗೆ ಹಿಂದಿನ ಹಲವು ಸಭೆಗಳಲ್ಲಿ ಚರ್ಚೆ ನಡೆದು ನಿರ್ಣಯ ಆಗಿದ್ದರೂ ನಿಲ್ದಾಣ ಆಗದ ಬಗ್ಗೆ ಕೆಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಪಂಚಾಯಿತಿ ಉಪಾಧ್ಯಕ್ಷೆ ಸಂಗೀತಾ ಪಾಣೆಮಜಲು, ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಮುಖ್ಯಾಧಿಕಾರಿ ಕರುಣಾಕರ ವಿ., ಸದಸ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.