ADVERTISEMENT

ವಿಟ್ಲ | ED ಅಧಿಕಾರಿಗಳ ಸೋಗಲ್ಲಿ ಬೀಡಿ ಉದ್ಯಮಿಯ ದರೋಡೆ: ASI ಸೇರಿ ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2025, 1:11 IST
Last Updated 17 ಫೆಬ್ರುವರಿ 2025, 1:11 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ವಿಟ್ಲ (ದಕ್ಷಿಣಕನ್ನಡ): ಕೊಳ್ನಾಡು ಗ್ರಾಮದ ಬೋಳಂತೂರು ನಾರ್ಶ ಎಂಬಲ್ಲಿ ಬೀಡಿ ಉದ್ಯಮಿ ಸುಲೇಮಾನ್ ಅವರ ಮನೆಗೆ ಜಾರಿ ನಿರ್ದೇಶ ನಾಲಯದ ಅಧಿಕಾರಿಗಳ ಸೋಗಿನಲ್ಲಿ ತೆರಳಿ ಸುಮಾರು ₹30 ಲಕ್ಷ ದರೋಡೆ ಮಾಡಿದ ಪ್ರಕರಣದ ಸೂತ್ರಧಾರನಾಗಿರುವ ಪೊಲೀಸ್ ಅಧಿಕಾರಿ ಸೇರಿದಂತೆ ನಾಲ್ವರು ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಕೇರಳದ ತ್ರಿಶ್ಶೂರ್‌ ಜಿಲ್ಲೆಯ ಕೊಡುಂನಲ್ಲೂರು ಪೊಲೀಸ್‌ ಠಾಣೆಯ ಎಎಸ್‌ಐ ಶಫೀರ್‌ ಬಾಬು (48), ಬಂಟ್ವಾಳ ತಾಲ್ಲೂಕಿನ ಕೊಳ್ನಾಡು ನಿವಾಸಿ ಸಿರಾಜುದ್ದೀನ್‌ (37), ಬಂಟ್ವಾಳ ನಿವಾಸಿ ಮೊಹಮ್ಮದ್‌ ಇಕ್ಬಾಲ್‌ (38) ಹಾಗೂ ಮಂಗಳೂರಿನ ಪಡೀಲ್ ನಿವಾಸಿ ಮೊಹಮ್ಮದ್‌ ಅನ್ಸಾರ್‌ (27) ಬಂಧಿತರು. ಈ ನಾಲ್ವರು ಆರೋಪಿಗಳನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಸುಲೇಮಾನ್ ಅವರ ಬೀಡಿ ಉದ್ಯಮದಲ್ಲಿ ಆರೋಪಿ ಸಿರಾಜುದ್ದೀನ್ ಈ ಹಿಂದೆ ವಾಹನ ಚಾಲಕನಾಗಿ ಕೆಲಸಕ್ಕಿದ್ದ. ಆತನಿಗೆ ಅವರ ವ್ಯವಹಾರಗಳ ಬಗ್ಗೆ ಮಾಹಿತಿ ಇತ್ತು. ಆತನೇ ಕೊಲ್ಲಂನ ದರೋಡೆಕೋರರ ತಂಡಕ್ಕೆ ಉದ್ಯಮಿಯ ಪೂರ್ವಾಪರಗಳ ಬಗ್ಗೆ ಮಾಹಿತಿ ಒದಗಿಸಿದ್ದ. ಆತ ನೀಡಿದ್ದ ಮಾಹಿತಿ ಆಧಾರದಲ್ಲಿ ಎಎಸ್‌ಐ ಶಫೀರ್‌ ಬಾಬು ದರೋಡೆ ಕೃತ್ಯದ ರೂಪುರೇಷೆ ತಯಾರಿಸಿದ್ದ. ಅದನ್ನು ಕಾರ್ಯರೂಪಕ್ಕೆ ಇಳಿಸುವಲ್ಲಿ ಬಂಟ್ವಾಳದ ಮೊಹಮ್ಮದ್ ಇಕ್ಬಾಲ್‌ ಹಾಗೂ ಮೊಹಮ್ಮದ್ ಅನ್ಸಾರ್‌ ಹಾಗೂ ಈ ಮೊದಲೇ ಬಂಧಿತರಾಗಿರುವ ಅನಿಲ್ ಫರ್ನಾಂಡಿಸ್‌, ಸಚಿನ್ ಟಿ.ಎಸ್. ಹಾಗೂ ಶಬಿನ್ ಸಹಕರಿಸಿದ್ದರು’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್ ಎನ್. ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಕೊಳ್ನಾಡು ಗ್ರಾಮದ ಬೋಳಂತೂರು ನಾರ್ಶದಲ್ಲಿರುವ ಬೀಡಿ ಉದ್ಯಮಿ ಸುಲೇಮಾನ್ ಮನೆಗೆ ಜ.3ರಂದು ಕಾರಿನಲ್ಲಿ ತೆರಳಿದ್ದ ಆರೋಪಿ ಗಳು, ತಮ್ಮನ್ನು ಜಾರಿ ನಿರ್ದೇಶ ನಾಲಯದ ಅಧಿಕಾರಿಗಳೆಂದು ಪರಿಚಯಿ ಸಿಕೊಂಡಿದ್ದರು. ಮನೆಯಲ್ಲಿರುವ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸುವ ನೆಪದಲ್ಲಿ ಸುಮಾರು ₹30 ಲಕ್ಷ ನಗದನ್ನು ದೋಚಿ ಪರಾರಿಯಾಗಿ ದ್ದರು. ಅವರು ತೆರಳಿದ ಬಳಿಕ ಸಂದೇಹ ಬಂದಿದ್ದರಿಂದ ಉದ್ಯಮಿ ಸುಲೇಮಾನ್‌ ಮನೆಯವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಕೇರಳದ ಕೊಲ್ಲಂ ಜಿಲ್ಲೆಯ ಪೆರಿನಾಡ್‌, ತ್ರಿಕ್ಕಡವೂರಿನ ಅನಿಲ್‌ ಫರ್ನಾಂಡಿಸ್‌ (49) ಎಂಬುವನನ್ನು ಪೊಲೀಸರು ಮೊದಲು ಬಂಧಿಸಿದ್ದರು. ಕೃತ್ಯಕ್ಕೆ ಬಳಸಿದ್ದ ಕೇರಳ ನೋಂದಣಿಯ ಎರ್ಟಿಗಾ ಕಾರು ಹಾಗೂ ಕೃತ್ಯ ನಡೆಸುವಾಗ ಆ ಕಾರಿಗೆ ಅಳವಡಿಸಿದ್ದ ನಕಲಿ ನಂಬರ್ ಪ್ಲೇಟ್‌ ಹಾಗೂ ₹5 ಲಕ್ಷ ನಗದನ್ನು ಆತನಿಂದ ವಶಪಡಿಸಿ ಕೊಂಡಿದ್ದರು. ಆತ ನೀಡಿದ ಮಾಹಿತಿ ಆಧಾರದಲ್ಲಿ ಇನ್ನಿಬ್ಬರು ಆರೋಪಿಗಳಾದ ಕೇರಳ ಕೊಲ್ಲಂನ ಶಬಿನ್ ಮತ್ತು ಸಚಿನ್‌ನನ್ನು ಬಂಧಿಸಿದ್ದರು. ವಿದೇಶಕ್ಕೆ ಪರಾರಿಯಾಗಲು ಯತ್ನಿಸಿದ್ದ ಶಬಿನ್‌ನನ್ನು ತಿರುವನಂತಪುರದ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಈ ಮೂವರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಈ ಪ್ರಕರಣವನ್ನು ಬೇಧಿಸುವ ಸಲುವಾಗಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಅಪರಾಧ ಕೃತ್ಯಗಳ ತನಿಖೆಯಲ್ಲಿ ಪರಿಣಿತರಾದ ಅಧಿಕಾರಿ ಹಾಗೂ ಸಿಬ್ಬಂದಿ ಒಳಗೊಂಡ ನಾಲ್ಕು ತಂಡಗಳನ್ನು ಜಿಲ್ಲಾ ಪೊಲೀಸ್ ವರಿಷ್ಠರು ರಚಿಸಿದ್ದರು.

‘ಸಿಕ್ಕಿದ್ದು ₹ 5 ಲಕ್ಷ’

‘ಈ ಪ್ರಕರಣದಲ್ಲಿ ಒಟ್ಟು ಏಳು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ. ಈ ಕೃತ್ಯದಲ್ಲಿ ₹ 30 ಲಕ್ಷ ದರೋಡೆಯಾದ ಬಗ್ಗೆ ದೂರು ನೀಡಲಾಗಿದೆ. ಸದ್ಯಕ್ಕೆ ₹ 5 ಲಕ್ಷವನ್ನು ಮಾತ್ರ ಆರೋಪಿಗಳಿಂದ ವಶಪಡಿಸಿ ಕೊಳ್ಳಲಾಗಿದೆ. ಆರೋಪಿಗಳನ್ನು ಪೊಲೀಸ್‌ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಿದ್ದೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌. ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.