ADVERTISEMENT

ಧರ್ಮಸ್ಥಳ ಮೃತದೇಹ ಹೂತುಹಾಕಿದ ಪ್ರಕರಣ;'ದೂರುದಾರ ಜೀವಂತ, ತನಿಖೆ ನೆರವಿಗೆ ಬದ್ಧ'

ಸಾಕ್ಷ್ಯ ರಕ್ಷಣೆ ನಿರಾಕರಣೆ ಸಲ್ಲ: ವಕೀಲರು

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 0:30 IST
Last Updated 17 ಜುಲೈ 2025, 0:30 IST
<div class="paragraphs"><p>ಪೊಲೀಸ್</p></div>

ಪೊಲೀಸ್

   

(ಸಾಂದರ್ಭಿಕ ಚಿತ್ರ)

ಮಂಗಳೂರು: ‘ಧರ್ಮಸ್ಥಳದ ಮೃತದೇಹಗಳನ್ನು ಹೂತುಹಾಕಿದ ಪ್ರಕರಣ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಹೇಳಿಕೆಯಿಂದ ಅಚ್ಚರಿಯಾಗಿದೆ’ ಎಂದು ಸಾಕ್ಷಿದಾರ ವ್ಯಕ್ತಿಯ ಪರ ವಕೀಲರೆಂದು ಹೇಳಿಕೊಂಡ ಧೀರಜ್‌ ಎಸ್‌.ಜೆ ಮತ್ತು ಅನನ್ಯಾ ಗೌಡ ತಿಳಿಸಿದ್ದಾರೆ.

ADVERTISEMENT

‘ನಾವು ಈಗ ಆತನ ಜೊತೆಗೆ ಇದ್ದು, ನಮ್ಮ ಸಹೋದ್ಯೋಗಿಗಳಾದ ಓಜಸ್ವಿ ಗೌಡ ಮತ್ತು ಸಚಿನ್ ದೇಶಪಾಂಡೆ ಅವರಿಂದ ಹೊಣೆ ವಹಿಸಿಕೊಂಡಿದ್ದೇವೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ದೂರುದಾರ ವ್ಯಕ್ತಿ ಮೊದಲು ಪೊಲೀಸರನ್ನಾಗಲೀ ಅಥವಾ ಜಿಲ್ಲಾ ಪೊಲೀಸ್ ವರಿಷ್ಠರನ್ನಾಗಲೀ ಏಕೆ ಸಂಪರ್ಕಿಸಿಲ್ಲ ಎಂದರೆ, ಇಲ್ಲಿ ಯಾವುದೇ ಪ್ರಕರಣದ ತನಿಖೆ ಬಾಕಿ ಇರಲಿಲ್ಲ ಅಥವಾ ಮೃತಪಟ್ಟ ವ್ಯಕ್ತಿಗಳ ಅವಶೇಷಗಳಿಗಾಗಿ ಯಾರೂ ಹುಡುಕುತ್ತಿರಲಿಲ್ಲ. ದೇವರ ಮೇಲಿನ ಭಯ  ಹಾಗೂ ಆತ್ಮಸಾಕ್ಷಿಯ ಕಾರಣಕ್ಕೆ ದೂರುದಾರ ತಪ್ಪೊಪ್ಪಿಕೊಳ್ಳುವ ಹಾಗೂ ಮಾರ್ಗದರ್ಶನ ಬಯಸುವ ಉದ್ದೇಶದಿಂದ ವಕೀಲರನ್ನು ಸಂಪರ್ಕಿಸಿದ್ದ. ಇತಿಹಾಸದಲ್ಲಿ ನಡೆದ ಘೋರ  ಪ್ರಮಾದಗಳಿಗೆ ಅಂತ್ಯ ಹಾಡುವುದು ಆತನ ಉದ್ದೇಶವಾಗಿತ್ತು. ಈ ಘನ ಉದ್ದೇಶವನ್ನೇ ಪೊಲೀಸರು ಸತತ ನಿರ್ಲಕ್ಷ್ಯ ಮಾಡಿರುವುದು ಅವರ ಹೇಳಿಕೆಯಲ್ಲಿ ಕಂಡು ಬಂದಿದೆ’.

‘ದೂರು ನೀಡಿದ ವ್ಯಕ್ತಿಯು ಪರಿಶೀಲನೆಗೆ ಒಳಪಡುವುದರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ತನ್ನ ಗುರುತು ಬಹಿರಂಗಪಡಿಸಬಾರದು ಎಂದು ಬಯಸುತ್ತಿಲ್ಲ. ಅದರ ಬದಲು, ಸ್ವತಃ ಮುಂದೆ ಬಂದು ಪರಿಷ್ಕೃತ ದೂರನ್ನು ನೀಡುವಂತೆ ತನ್ನ ವಕೀಲರಿಗೆ ಆತ ಸೂಚಿಸಿದ್ದು, ಎಫ್‌ಐಆರ್ ದಾಖಲಿಸಿದ್ದೆಲ್ಲವನ್ನೂ ಆತ ಪ್ರಜ್ಞಾಪೂರ್ವಕವಾಗಿಯೇ ಮಾಡಿದ್ದಾನೆ. ಈ ಹಂತದಲ್ಲಿ ಪೊಲೀಸರು ಆತನಿಗೆ ರಕ್ಷಣೆ ಒದಗಿಸಬೇಕಾದ ಕರ್ತವ್ಯದಿಂದ ಹಿಂದೆ ಸರಿಯುವುದು ತಪ್ಪು. ಪರಿಷ್ಕೃತ  ದೂರನ್ನು ನೀಡುವಂತೆ ಅರ್ಜಿದಾರ ವ್ಯಕ್ತಿ ತನ್ನ ವಕೀಲರಿಗೆ ನಿರ್ದಿಷ್ಟ ಸೂಚನೆಯನ್ನೇನಾದರೂ ನೀಡಿದ್ದಾರೆಯೇ ಎಂದು ತನಿಖಾಧಿಕಾರಿ ತಿಳಿದುಕೊಳ್ಳಲು ಪ್ರಯತ್ನಿಸುವ ಮೂಲಕ ವಕೀಲರು ಮತ್ತು ಕಕ್ಷಿದಾರರ ಹಕ್ಕುಗಳಿಗೆ ಚ್ಯುತಿಯನ್ನು ಉಂಟು ಮಾಡುವುದು ತೀವ್ರ ಆಕ್ಷೇಪಾರ್ಹ’ ಎಂದು ಅವರು ಹೇಳಿದ್ದಾರೆ.

‘ಸಾಕ್ಷಿದಾರ ವ್ಯಕ್ತಿ ಹೇಳಿದ ಜಾಗದ ಬಗ್ಗೆ ತಿಳಿದಿಲ್ಲ ಹಾಗೂ ಅದು ಸುಳ್ಳು ಎಂದು ಎದ್ದುಕಾಣುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಜುಲೈ 14ರಂದು ಆತ ಹೇಳಿದ ಜಾಗದಲ್ಲೇ ಪೊಲೀಸರು ಸುಮಾರು ನಾಲ್ಕು ಗಂಟೆ ಆತನ ಜೊತೆಗಿದ್ದು ಹೇಳಿಕೆಗಳನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೇ ಜುಲೈ 13ರಂದು ಆತನ ತಾತ್ಕಾಲಿಕ ವಿಳಾಸವನ್ನು ಪೊಲೀಸರ ಜೊತೆಗೆ ಇಮೇಲ್ ಮೂಲಕ ಔಪಚಾರಿಕವಾಗಿಯೇ ಹಂಚಿಕೊಂಡಿದ್ದೆವು. ಆತ ಎಲ್ಲಿದ್ದಾನೋ ಗೊತ್ತಾಗಿಲ್ಲ, ಆತ ಲಭ್ಯವಿಲ್ಲ ಎಂಬ ಹೇಳಿಕೆಗಳು ಪೊಲೀಸರ ಕಡೆಯಿಂದ ಆಗಿರುವ ಲೋಪಗಳು. ಜುಲೈ 11ರಂದು ರಾತ್ರಿ ಮ್ಯಾಜಿಸ್ಟ್ರೇಟ್ ಎದುರು ನೀಡಿದ ಪ್ರಮಾಣೀಕೃತ ಹೇಳಿಕೆಯಲ್ಲಿ ನಿರ್ದಿಷ್ಟ ಹೆಸರುಗಳನ್ನು ಬಹಿರಂಗಪಡಿಸಿದ್ದೇನೆ ಎಂದು ದೂರುದಾರ ವ್ಯಕ್ತಿ ನಮಗೆ ತಿಳಿಸಿದ್ದಾನೆ. ತನ್ನ ಜೀವಕ್ಕೆ ಬೆದರಿಕೆ ಇದೆ ಎಂಬುದಾಗಿ ಆತ ತೀವ್ರ ಆತಂಕ ತೋಡಿಕೊಂಡಿದ್ದಾನೆ’.

‘ಜುಲೈ 11ರಂದು (ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್ 183ರಡಿ) ನೀಡಿರುವ 164 ಹೇಳಿಕೆಯ ಭಾಗವಾಗಿ ತಾನು ನಿರ್ದಿಷ್ಟ ಜಾಗದಿಂದ ಅಗೆದು ತೆಗೆದ ಮಾನವನ ಅಸ್ಥಿಪಂಜರವನ್ನು ಸ್ವಯಂಪ್ರೇರಿತವಾಗಿ ಹಸ್ತಾಂತರ ಮಾಡಿದ್ದಾನೆ. ಅದನ್ನು ವಿಧಿವಿಜ್ಞಾನ ತಜ್ಞರು ಗಂಟೆ ಗಟ್ಟಲೆ ಸಂಸ್ಕರಣೆಗೆ ಒಳಪಡಿಸಿದ ಬಳಿಕ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಇದಾದ ಮರುದಿನವೇ ಪೊಲೀಸರು ಮಹಜರು ಹಾಗೂ ದಾಖಲೀಕರಣಕ್ಕಾಗಿ ತನ್ನನ್ನು ಕರೆಯುತ್ತಾರೆ ಎಂದು ಆತ ಭಾವಿಸಿದ್ದ’. 

‘ಆದರೂ ಜುಲೈ 16ರವರೆಗೂ  ಅಂತಹ ಯಾವುದೇ ಕ್ರಮಗಳನ್ನು ಪೊಲೀಸರು ಕೈಗೊಂಡಿಲ್ಲ. ಸಾಕ್ಷಿದಾರ ನೀಡಬಹುದಾದ ಅತ್ಯಂತ ಪ್ರಮುಖ ಹಾಗೂ ನಿರಾಕರಿಸಲಾಗದ ಸಾಕ್ಷ್ಯಗಳಾದ ಶವ ಹೂತ ಜಾಗ ಮತ್ತು ನೆಲದಿಂದ ಹೊರತೆಗೆದ ಅಸ್ಥಿಪಂಜರಗಳ  ಬಗ್ಗೆ ಪೊಲೀಸರು ಸಂಪೂರ್ಣ ನಿರಾಸಕ್ತಿ ತೋರಿಸಿರುವಂತೆ ಕಂಡುಬರುತ್ತಿದೆ. ನಿರಂತರ ವಿಳಂಬವು ದೂರುದಾರನ ಪಾಲಿಗೆ ಆಘಾತಕರವಷ್ಟೇ ಅಲ್ಲ ಅದನ್ನು ಮಾತಿನಲ್ಲಿ ಹೇಳುವುದಕ್ಕೂ ಆಗದಂತಹದ್ದು’.

‘ದೂರುದಾರ ಲಭ್ಯ ಇದ್ದಾನೆ. ಮೊದಲು ಅಸ್ಥಿಪಂಜರಗಳ ಅವಶೇಷಗಳನ್ನು ಹೊರತೆಗೆಯಲು ಸಹಕರಿಸುವ ಮೂಲಕ ತನಿಖೆಗೆ ಸಹಕರಿಸುವ ಇಚ್ಛೆ ಮತ್ತು ಬದ್ಧತೆಯನ್ನೂ ಹೊಂದಿದ್ದಾನೆ. ಆತನೇ ಹೇಳಿಕೊಳ್ಳುವ ಹಾಗೆ ಆತನಿನ್ನೂ ಜೀವಂತ ಇದ್ದಾನೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.