
ಉಜಿರೆ: ಎಂಟು ಶತಮಾನಗಳ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಧರ್ಮಸ್ಥಳದ ಯಕ್ಷಗಾನ ಮೇಳವು ಈ ಸಾಲಿನ ತಿರುಗಾಟಕ್ಕೆ ಅಣಿಯಾಗಿದೆ. ಕಲಾವಿದರಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಧರ್ಮಪ್ರಭಾವನೆ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಪ್ರೇರಣೆ, ಪ್ರೋತ್ಸಾಹ ನೀಡುವ ಯಕ್ಷಗಾನವು ಮೇಳವು ನಾಡಿನ ವಿವಿಧೆಡೆ ವಿವಿಧ ಪ್ರಸಂಗಗಳನ್ನು ಪ್ರಸ್ತುತಿಪಡಿಸಲಿದೆ.
ಧರ್ಮಸ್ಥಳದ ಇತಿಹಾಸದಿಂದ ತಿಳಿದು ಬರುವಂತೆ, 1785ರಲ್ಲಿ ಧರ್ಮಸ್ಥಳದಲ್ಲಿ ಯಕ್ಷಗಾನ ಪ್ರಚಲಿತವಿತ್ತು. ಆಗಿನ ಧರ್ಮಾಧಿಕಾರಿಗಳಾಗಿದ್ದ ಕುಮಾರಯ್ಯ ಹೆಗ್ಗಡೆ ಅವರು ದೂರಸಂಚಾರ ಮಾಡುವ ಸಮಯದಲ್ಲಿ ಯಕ್ಷಗಾನ ಮೇಳವೂ ಅವರ ಜೊತೆ ಹೋಗುವ ಸಂಪ್ರದಾಯವಿತ್ತು.
ಸ್ಥಳೀಯ ಕಲಾವಿದರಿಂದ ಆರಂಭಗೊಂಡ ದಶಾವತಾರ ಮೇಳವು ಬಳಿಕ ಸಂಚಾರಿ ಮೇಳವಾಗಿ ಪರಿವರ್ತನೆಗೊಂಡಿತು.
1968–1969ರ ಸಾಲಿನಲ್ಲಿ ಯಕ್ಷಗಾನ ಮೇಳವನ್ನು ಧರ್ಮಸ್ಥಳದ ಆಡಳಿತಕ್ಕೆ ತೆಗೆದುಕೊಳ್ಳಲಾಯಿತು. ದಿ.ರತ್ನವರ್ಮ ಹೆಗ್ಗಡೆ ಅವರ ಅವಧಿಯಲ್ಲಿ ಹಲವು ಪ್ರಸಿದ್ಧ ಕಲಾವಿದರನ್ನು ಆಹ್ವಾನಿಸಿ ಧರ್ಮಸ್ಥಳ ಮೇಳವನ್ನು ‘ಗಜಮೇಳ’ವಾಗಿ ರೂಪಿಸಲಾಯಿತು. ಧರ್ಮಸ್ಥಳದ ಇತಿಹಾಸವನ್ನು ‘ಧರ್ಮಸ್ಥಳ ಕ್ಷೇತ್ರ ಮಹಾತ್ಮೆ’ ರೂಪದಲ್ಲಿ ಪಸರಿಸಲು ಯಕ್ಷಗಾನ ಪ್ರದರ್ಶನಕ್ಕೆ ಕಾರಣರಾದ ಕೀರ್ತಿ ದಿ.ರತ್ನವರ್ಮ ಹೆಗ್ಗಡೆ ಅವರಿಗೆ ಸಲ್ಲುತ್ತದೆ. ಸುಸಜ್ಜಿತ ಡೇರೆ, ಉಕ್ಕಿನ ಮಂಟಪ, ವಾಹನ ಮೊದಲಾದ ಸೌಲಭ್ಯಗಳನ್ನೂ ಒದಗಿಸಲಾಯಿತು.
ಕಲಾಭಿಮಾನಿಗಳ ಬೇಡಿಕೆಯಂತೆ ಬಯಲಾಟ ಮೇಳವನ್ನು ವಾಣಿಜ್ಯ ಮೇಳವಾಗಿ ಪರಿವರ್ತಿಸಿ ಹರಿಕೆ ಬಯಲಾಟಗಳಲ್ಲದೆ, ಸಹಾಯಾರ್ಥ ಯಕ್ಷಗಾನ ಪ್ರದರ್ಶನಗಳನ್ನೂ ಆಯೋಜಿಸಲಾಯಿತು. 1968ರ ಅ.24ರಂದು ಧರ್ಮಸ್ಥಳದ 21ನೇ ಧರ್ಮಾಧಿಕಾರಿಯಾಗಿ ಡಿ.ವೀರೇಂದ್ರ ಹೆಗ್ಗಡೆ ಅವರು ಪಟ್ಟಾಭಿಷಿಕ್ತರಾದ ಬಳಿಕ ಯಕ್ಷಗಾನ ಮೇಳದಲ್ಲಿ ಹಲವು ಸುಧಾರಣೆಗಳನ್ನು ಮಾಡಿದರು.
ವಿದ್ವಾಂಸರಾದ ದಿ.ಅಮೃತಸೋಮೇಶ್ವರ, ಪ್ರೊ.ಬಿ.ಎ.ವಿವೇಕ ರೈ, ಪ್ರೊ.ಕೆ.ಚಿನ್ನಪ್ಪ ಗೌಡ ಮತ್ತು ಹಿರಿಯ ಯಕ್ಷಗಾನ ಕಲಾವಿದರೊಂದಿಗೆ ಸಮಾಲೋಚನೆ ನಡೆಸಿ, 2015–2016ನೇ ಸಾಲಿನಿಂದ ಕಾಲಮಿತಿ ಯಕ್ಷಗಾನ ಪ್ರದರ್ಶನವನ್ನು ಸಂಜೆ 7ರಿಂದ ರಾತ್ರಿ 12ರವರೆಗೆ ಆಯೋಜಿಸಲಾಗುತ್ತಿದೆ. ಇದಕ್ಕೆ ಪ್ರೇಕ್ಷಕರಿಂದ, ಯಕ್ಷಗಾನ ಕಲಾಭಿಮಾನಿಗಳಿಂದ ಹಾಗೂ ಕಲಾವಿದರಿಂದಲೂ ಉತ್ತಮ ಪ್ರೋತ್ಸಾಹ ದೊರಕುತ್ತಿದೆ.
ಹರಕೆ ಸೇವಾ ಬಯಲಾಟದ ಪ್ರದರ್ಶನಕ್ಕೆ ಹೆಚ್ಚಿನ ಬೇಡಿಕೆ ಇರುವುದರಿಂದ 1998ರಿಂದ ಧರ್ಮಸ್ಥಳ ಮೇಳವನ್ನು ಪೂರ್ಣ ಪ್ರಮಾಣದ ಬಯಲಾಟ ಮೇಳವಾಗಿ ಪರಿವರ್ತಿಸಲಾಗಿದೆ. ಮುಂದಿನ ಹತ್ತು ವರ್ಷಗಳಿಗಾಗುವಷ್ಟು ಹರಕೆ ಬಯಲಾಟಗಳು ಭಕ್ತರಿಂದ ಈಗಾಗಲೆ ದಾಖಲಾಗಿವೆ.
1982ರಿಂದ ಯಕ್ಷಗಾನ ಮೇಳದ ನಿರ್ವಹಣೆಯ ಜವಾಬ್ದಾರಿಯನ್ನು ಹೆಗ್ಗಡೆ ಅವರ ಸಹೋದರ ಡಿ.ಹರ್ಷೇಂದ್ರ ಕುಮಾರ್ ವಹಿಸಿಕೊಂಡಿದ್ದಾರೆ. ಮೇಳದಲ್ಲಿ 30 ಕಲಾವಿದರಲ್ಲದೆ, ಅರ್ಚಕರು, ಪ್ರಬಂಧಕರು ಹಾಗೂ ಇತರ ಸಿಬ್ಬಂದಿ ಸೇರಿ ಎಪ್ಪತ್ತು ಮಂದಿ ನೌಕರರಿದ್ದಾರೆ.
ಕಾರ್ತಿಕ ಮಾಸದಲ್ಲಿ ಬಯಲಾಟ ಪ್ರಾರಂಭಿಸಿ ಮೇ 24 (ಪತ್ತನಾಜೆ)ವರೆಗೆ ಮೇಳದ ಕಲಾವಿದರು ನಿಗದಿತ ಊರುಗಳಲ್ಲಿ ಯಕ್ಷಗಾನ ಸೇವಾ ಬಯಲಾಟ ಪ್ರದರ್ಶನ ನೀಡುವರು. ಈ ಬಾರಿಯ ತಿರುಗಾಟದ ಮೊದಲ ಪ್ರದರ್ಶನ ನ.23ರಂದು ಪುಂಜಾಲಕಟ್ಟೆಯ ಸ್ವಸ್ತಿಕ್ ಯಕ್ಷಗಾನ ಬಯಲಾಟ ಸಮಿತಿಯಿಂದ ಆಯೋಜನೆಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.