ADVERTISEMENT

ಯಕ್ಷಗಾನದಲ್ಲಿ ಅನುಕರಣೆ ಮಾಡಿದರೆ ಸ್ವಂತಿಕೆ ಹಾಳು;ಇಂದಿನ ಹಾಸ್ಯಪ್ರಜ್ಞೆ ಅಪಾಯಕಾರಿ

ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2018, 19:49 IST
Last Updated 23 ಡಿಸೆಂಬರ್ 2018, 19:49 IST
23ಪಿಟಿಆರ್2 : ಪುತ್ತೂರಿನ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ಭಾನುವಾರ ಬೊಳುವಾರು ಆಂಜನೇಯ ಯಕ್ಷಗಾನ ಕಲಾ ಸಂಘದ ಸುವರ್ಣ ಸಂಭ್ರಮದ ಅಂಗವಾಗಿ ನಡೆದ `ಮಾತುಕತೆ' ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಅವರು ಮಾತನಾಡಿದರು.
23ಪಿಟಿಆರ್2 : ಪುತ್ತೂರಿನ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ಭಾನುವಾರ ಬೊಳುವಾರು ಆಂಜನೇಯ ಯಕ್ಷಗಾನ ಕಲಾ ಸಂಘದ ಸುವರ್ಣ ಸಂಭ್ರಮದ ಅಂಗವಾಗಿ ನಡೆದ `ಮಾತುಕತೆ' ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಅವರು ಮಾತನಾಡಿದರು.   

ಪುತ್ತೂರು: ಯಕ್ಷಗಾನ ಭಾಗವತರು, ಅರ್ಥಧಾರಿಗಳು ಹಿರಿಯ ಕಲಾವಿದರ ಅನುಸರಣೆ ಮಾಡುವುದು ತಪ್ಪಲ್ಲ. ಆದರೆ ಹೊಸದಾಗಿ ಈ ಕ್ಷೇತ್ರಕ್ಕೆ ಬಂದ ಯುವ ಭಾಗವತರು ಮತ್ತು ಯುವ ಕಲಾವಿದರು ಹಿರಿಯ ಕಲಾವಿದರನ್ನು ಅನುಸರಣೆ ಮಾಡುವ ಬದಲು ಅನುಕರಣೆ ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ಕಲಾ ಸ್ವಂತಿಕೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಅವರು ಹೇಳಿದರು.

ಪುತ್ತೂರಿನ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ಭಾನುವಾರ ಬೊಳುವಾರು ಆಂಜನೇಯ ಯಕ್ಷಗಾನ ಕಲಾ ಸಂಘದ ಸುವರ್ಣ ಸಂಭ್ರಮದ ಅಂಗವಾಗಿ ಹಮ್ಮಿಕೊಳ್ಳಲಾದ `ಮಾತುಕತೆ' ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಕ್ಷಗಾನದ ಕುರಿತು 37 ಪ್ರೌಢ ಪ್ರಬಂಧಗಳು ಮಂಡನೆಯಾಗಿವೆ. ಯಕ್ಷಗಾನದ ಸಾಂಪ್ರದಾಯಿಕ ರಂಗಭೂಮಿ ಇಂದು ಭಾರತದ ರಂಗಕಲೆಗೆ ಮಾದರಿಯಾಗಿದೆ. ಕಲೆ ಮತ್ತು ಕಲಾವಿದನ ಪರಿಶ್ರಮದಿಂದ ಯಕ್ಷಗಾನ ಇಂದಿಗೂ ಶ್ರೇಷ್ಠತೆಯನ್ನು ಉಳಿಸಿಕೊಂಡು ಮುಂದುವರಿದಿದೆ. ಆದರೆ ಯಕ್ಷಗಾನ ಕಲಾವಿದರು ಮತ್ತು ಸಂಘಟಕರು ಇಂದು ವಿಶೇಷ ಆಕರ್ಷಣೆಯ ಹೆಸರಿನಲ್ಲಿ ಮೂಲ ಸ್ವರೂಪವನ್ನು ಮರೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಯಕ್ಷಗಾನ ರಂಗದ ಹಾಸ್ಯಪ್ರಜ್ಞೆ ಇಂದು ಅಪಾಯಕಾರಿಯಾಗುತ್ತಿದೆ. ಪಾತ್ರ ನಿಮರ್ಾಣದ ಕುರಿತು ಕಲಾವಿದರ ಚಿಂತನೆ ಕಡಿಮೆಯಾಗುತ್ತಿದೆ. ಅರ್ಥ ಸ್ವರೂಪದ ವಿಸ್ತರಣೆ ಕುಂಠಿತವಾಗುತ್ತಿದೆ ಎಂದರು.

ADVERTISEMENT

`ಯಕ್ಷಗಾನದಲ್ಲಿ ಜಾಲತಾಣಗಳು' ಎಂಬ ವಿಷಯದ ಕುರಿತು ಮಾತನಾಡಿದ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ ಅವರು, ಸಾಮಾಜಿಕ ಜಾಲತಾಣಗಳ ಪ್ರಭಾವ ಯಕ್ಷಗಾನದ ಮೇಲೆ ಬಿದ್ದಿರುವುದು ಪೂರಕವಾಗಿರುವುದಕ್ಕಿಂತಲೂ ಹೆಚ್ಚು ಮಾರಕವಾಗಿವೆ. ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್ ಪ್ರಚಾರದ ಮೂಲಕ ಕಲೆಯ ಪ್ರಚಾರ ಹಾಗೂ ಪ್ರದರ್ಶನದ ಗುಣಮಟ್ಟಕ್ಕಿಂತಲೂ ಕಲಾವಿದರ ಬೆಂಬಲಿಗರ ಸಂಖ್ಯೆಯನ್ನು ಎಣಿಸುವ ಕೆಲಸ ಮುಖ್ಯವಾಗುತ್ತಿದೆ. ಆಧುನೀಕರಣ ಯಕ್ಷಗಾನಕ್ಕೆ ಒಗ್ಗುವುದಿಲ್ಲ. ಕೇವಲ ರಂಗಸ್ಥಳದ ಮೇಲೆ ಎಲ್ಲಾ ಸನ್ನಿವೇಶಗಳನ್ನು ಸಾಂಕೇತಿಕವಾಗಿ ಪ್ರದರ್ಶಿಸುವ ಅದ್ಭುತ ಶಕ್ತಿ ಯಕ್ಷಗಾನದ ಮೂಲ ಸ್ವರೂಪಕ್ಕಿದೆ. ಯಕ್ಷಗಾನದ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳು ಪ್ರಸ್ತುತವಲ್ಲ ಎಂದರು.

`ಮಹಿಳಾ ತಾಳಮದ್ದಳೆ' ಕುರಿತು ವಿಷಯ ಮಂಡನೆ ಮಾಡಿದ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಸದಸ್ಯೆ ಗೌರಿ ಸಾಸ್ತಾನ ಅವರು ಮಾತನಾಡಿ, ಕಳೆದ 25 ವರ್ಷಗಳಿಂದ ಮಹಿಳಾ ಯಕ್ಷಗಾನ ನಾಡಿನೆಲ್ಲೆಡೆ ನಡೆಯುತ್ತದೆ. ಯಕ್ಷಗಾನ ಕಲೆಯಲ್ಲಿ ಅಂದರೆ ಆಟ ಮತ್ತು ಕೂಟಗಳಲ್ಲಿ ಮಹಿಳಾ ಕಲಾವಿದರು ವೇಷಧಾರಿಗಳಾಗಿ ಮತ್ತು ಅರ್ಥಧಾರಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪುರುಷ ಕಲಾವಿದರಷ್ಟೇ ಪ್ರಬುದ್ಧತೆಯನ್ನು ಮೆರೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಮಹಿಳಾ ಯಕ್ಷಗಾನ ಪ್ರದರ್ಶನ ಮತ್ತು ತಾಳಮದ್ದಳೆಗಳು ಪ್ರಚಾರ ಪಡೆಯುತ್ತಿರುವುದು ಅನುಕೂಲವಾಗಿದೆ. ಕಾಲಮಿತಿಯ ಯಕ್ಷಗಾನ ಪ್ರದರ್ಶನ ಮಹಿಳೆಯರಿಗೆ ಅನುಕೂಲವಾಗಿದೆ ಎಂದರು.

ಬೊಳುವಾರು ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ, ಮಹಿಳಾ ಸಂಘದ ಅಧ್ಯಕ್ಷೆ ಪ್ರೇಮಲತಾ ಟಿ. ರಾವ್, ಸುವರ್ಣ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶುಭಾ ಜೆ.ಸಿ.ಅಡಿಗ ಇದ್ದರು. ‌

ಆಂಜನೇಯ ಯಕ್ಷಗಾನ ಕಲಾ ಸಂಘದ ಕಾರ್ಯದರ್ಶಿಗುಡ್ಡಪ್ಪ ಗೌಡ ಬಲ್ಯ ಸ್ವಾಗತಿಸಿದರು. ಕೋಶಾಧಿಕಾರಿ ದುಗ್ಗಪ್ಪ ಎನ್. ವಂದಿಸಿದರು. ನಾ.ಕಾರಂತ ಪೆರಾಜೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.