
ಉಜಿರೆ: ದಕ್ಷ ಆಡಳಿತಗಾರ, ಸಸ್ಯವಿಜ್ಞಾನಿ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿ ಉಜಿರೆಯನ್ನು ಸಸ್ಯಕಾಶಿಯಾಗಿ ರೂಪಿಸಿದ ಯಶಸ್ಸು ದಿ.ಬಿ.ಯಶೋವರ್ಮ ಅವರಿಗೆ ಸಲ್ಲುತ್ತದೆ ಎಂದು ಡಾ.ಪ್ರದೀಪ್ ನಾವೂರು ಹೇಳಿದರು.
ಉಜಿರೆ ಸಿದ್ಧವನ ಗುರುಕುಲದ ಬಳಿ ಯಶೋವರ್ಮ ಅವರು ರೂಪಿಸಿದ ‘ಯಶೋವನ’ದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಯಶೋವರ್ಮ ಅವರ 70ನೇ ಜನ್ಮದಿನ ಆಚರಣೆಯಲ್ಲಿ ಅವರು ಮಾತನಾಡಿದರು.
ವ್ಯಕ್ತಿ ನಿಧನರಾದರೂ ಅವರ ವ್ಯಕ್ತಿತ್ವ ಮತ್ತು ಸಾಧನೆಗಳಿಗೆ ಸಾವಿಲ್ಲ. ಹಲವು ಕ್ಷೇತ್ರಗಳಲ್ಲಿ ಅನುಪಮ ಸೇವೆ, ಸಾಧನೆ ಮಾಡಿದ್ದ ಯಶೋವರ್ಮ ಅವರ ಆದರ್ಶ ಚಿಂತನೆ, ಆದರ್ಶಗಳು ನಮ್ಮೆಲ್ಲರ ಬದುಕಿಗೆ ನಂದಾದೀಪವಾಗಿ ಮಾರ್ಗದರ್ಶಿಯಾಗಿವೆ ಎಂದು ಹೇಳಿದರು.
ಪರಿಸರ ತಜ್ಞ ಶಿವಾನಂದ ಕಳವೆ ಅವರು ಉಡುಗೊರೆಯಾಗಿ ನೀಡಿದ 40 ಅಡಿಗೂ ಎತ್ತರ ಮತ್ತು ಎರಡು ಎಕರೆಯಷ್ಟು ವಿಸ್ತಾರವಾಗಿ ಬೆಳೆಯುವ ಆಫ್ರಿಕನ್ ವಿಶೇಷ ಸಸಿಗಳನ್ನು ಸೋನಿಯಾ ಯಶೋವರ್ಮ ಮತ್ತು ಕುಟುಂಬದವರು ಯಶೋವನದಲ್ಲಿ ನೆಟ್ಟರು.
ಎಸ್‌ಡಿಎಂ ಕಾಲೇಜಿನ ಉಪನ್ಯಾಸಕ, ವ್ಯಂಗ್ಯ ಚಿತ್ರಕಾರ ಪ್ರೊ.ಶೈಲೇಶ್ ಉಜಿರೆ ಅವರು ವ್ಯಂಗ್ಯಚಿತ್ರ ರಚನೆ ಕುರಿತು ಮಾಹಿತಿ ನೀಡಿದರು.
ಧರ್ಮಸ್ಥಳದ ರಂಗಶಿವ ತಂಡದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಎಸ್‌ಡಿಎಂಐಟಿ ಮತ್ತು ವಿದ್ಯಾರ್ಥಿನಿಲಯಗಳ ಆಡಳಿತ ವಿಭಾಗದ ಸಿಇಒ ಪೂರನ್‌ವರ್ಮ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಹಿಸಿದ ಪ್ರೊ. ಸುವೀರ್ ಜೈನ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.