ADVERTISEMENT

ಧರ್ಮಸ್ಥಳದಲ್ಲಿ ಗುಂಪು ಘರ್ಷಣೆ ಘಟನೆ: 7 ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 9:07 IST
Last Updated 7 ಆಗಸ್ಟ್ 2025, 9:07 IST
ಧರ್ಮಸ್ಥಳ ಪೊಲೀಸ್ ಠಾಣೆಯ ಬಳಿ ಬುಧವಾರ ರಾತ್ರಿ ಪ್ರತಿಭಟನೆ ನಡೆಯಿತು
ಧರ್ಮಸ್ಥಳ ಪೊಲೀಸ್ ಠಾಣೆಯ ಬಳಿ ಬುಧವಾರ ರಾತ್ರಿ ಪ್ರತಿಭಟನೆ ನಡೆಯಿತು   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮದಲ್ಲಿ ಬುಧವಾರ‌ ನಡೆದ ಅಹಿತಕರ ಘಟನೆಗಳ ಸಂಬಂಧ ಒಟ್ಟು ನಾಲ್ಕು ಹಾಗೂ ಬೆಳ್ತಂಗಡಿ ಠಾಣೆಯ ವ್ಯಾಪ್ತಿಯ ಉಜಿರೆಯಲ್ಲಿ ನಡೆದ ಅಹಿತಕರ ಘಟನೆ ಸಂಬಂಧ ಒಟ್ಟು ಮೂರು ಪ್ರಕರಣಗಳು ದಾಖಲಾಗಿವೆ.

ಧರ್ಮಸ್ಥಳ ಗ್ರಾಮದ ಪಾಂಗಾಳ ರಸ್ತೆ ಬಳಿ ಯೂಟ್ಯೂಬರ್ ಗಳ ಮೇಲೆ ನಡೆದ ಹಲ್ಲೆ ಸಂಬಂಧ ಕುಡ್ಲ ರಾಂಪೇಜ್' ಯುಟ್ಯೂಬ್ ಚಾನೆಲ್ ನ ಮಾಲೀಕರಾದ ಅಜಯ್ ಅಂಚನ್ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ.

'ಧರ್ಮಸ್ಥಳದ ಪಾಂಗಾಳ ರಸ್ತೆ ಬಳಿ, ಒಬ್ಬರ ವಿಡಿಯೊ ಹೇಳಿಕೆ ಪಡೆಯುತ್ತಿದ್ದ ಸ್ಥಳಕ್ಕೆ ಸುಮಾರು 15 ರಿಂದ 50 ಜನರ ಕಿಡಿಗೇಡಿಗಳ ಗುಂಪು ಬಂದಿತ್ತು. ನನಗೆ ಹಾಗೂ ನನ್ನ ಕ್ಯಾಮೆರಾಮ್ಯಾನ್ ಸುಹಾಸ್, ಸಂಚಾರಿ ಸ್ಟುಡಿಯೊ ಯೂಟ್ಯೂಬ್ ಚಾನೆಲ್‌ನ ಸಂತೋಷ್ ಹಾಗೂ ಯುನೈಟೆಡ್ ಮೀಡಿಯಾ ಯೂಟ್ಯೂಬ್ ಚಾನೆಲ್‌ನ ಅಭಿಷೇಕ್ ಎಂಬವರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದೆ. ನನ್ನ ವಿಡಿಯೊ ಕ್ಯಾಮೆರಾವನ್ನು ರಸ್ತೆಗೆಸೆದು ಹಾನಿಗೊಳಿಸಿದೆ. ಕ್ಯಾಮೆರಾದಲ್ಲಿದ್ದ ಮೆಮೊರಿ ಕಾರ್ಡ್ ಅನ್ನು ಕಿತ್ತುಕೊಂಡಿದೆ' ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ(ಬಿಎನ್ಎಸ್) ಸೆಕ್ಷನ್ 189(2), 191(2), 115(2), 324(5) , 352, 307 ಜೊತೆಗೆ 190 ಅಡಿ ಪ್ರಕರಣದ ದಾಖಲಾಗಿದೆ.

ADVERTISEMENT

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಪಾಂಗಳ ರಸ್ತೆ ಬಳಿ  ಸುಮಾರು 25 ರಿಂದ 50 ಜನರು, ಎರಡು ಕಡೆ ಪ್ರತ್ಯೇಕವಾಗಿ ಗುಂಪುಗೂಡಿದ್ದರು. ಅವರು ಅಪರಾಧ ಕೃತ್ಯ ನಡೆಸಲು ಅಕ್ರಮವಾಗಿ ಗುಂಪು ಗೂಡಿದ್ದಾರೆ ಎಂಬ ಮಾಹಿತಿ ಪಡೆದು ಧರ್ಮಸ್ಥಳ ಪೊಲೀಸ್‌ ಠಾಣೆಯ ಸಬ್ ಇನ್ಸ್‌ಪೆಕ್ಟರ್‌ ಸ್ಥಳಕ್ಕೆ ಧಾವಿಸಿದ್ದರು. ಅಲ್ಲಿ ಗುಂಪುಗೂಡಿದ್ದವರಿಗೆ ಸ್ಥಳದಿಂದ ತೆರಳುವಂತೆ ಸೂಚಿಸಿದ್ದರು.‌ಆದರೂ, ಅಲ್ಲಿದ್ದವರು ಈ ಸೂಚನೆ ಪಾಲಿಸದೇ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡ್ಡಿಪಡಿಸಿದ್ದಾರೆ. ಪರಸ್ಪರ ಗಲಾಟೆ ನಡೆಸಿದ್ದಾರೆ ಎಂದು ಧರ್ಮಸ್ಥಳ ಠಾಣೆಯ ಪೊಲೀಸರು ಬಿಎನ್ಎಸ್ ಸೆಕ್ಷನ್ 189(2), 191(2), 132, 324(6) ಮತ್ತು 190 ಬಿ ಅಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಾಂಗಾಳ ರಸ್ತೆ ಬಳಿ ನಡೆದ ಅಹಿತಕರ ಘಟನೆ ಸಂಬಂಧ, ಸುಮಾರು 100 ಮಂದಿ, ಧರ್ಮಸ್ಥಳ ಠಾಣಾ ಆವರಣ ಮುಂದೆ ಯಾವುದೇ ಪೂರ್ವಾನುಮತಿಯಿಲ್ಲದೇ, ಕಾನೂನು ಬಾಹಿರವಾಗಿ ಅಕ್ರಮ ಕೂಟ ರಚಿಸಿಕೊಂಡು ಪ್ರತಿಭಟನೆ ನಡೆಸಿದ್ದಾರೆ. ಅವರ ವಿರುದ್ದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 189 (2) ಮತ್ತು 190 ಅಡಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಧರ್ಮಸ್ಥಳ ಪಾಂಗಾಳ ರಸ್ತೆ ಎಂಬಲ್ಲಿ, 'ಯೂಟ್ಯೂಬರ್ ಗಳ ಮೇಲೆ ಹಲ್ಲೆ ನಡೆದ ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ್ದೆ. ಅಲ್ಲಿ ಸೇರಿದ್ದ ಸುಮಾರು 30 ರಿಂದ 40 ಜನರ ಗುಂಪು ಅವ್ಯಾಚವಾಗಿ‌ ಬೈದು, ಹಲ್ಲೆ ನಡೆಸಿದೆ. ಸ್ಥಳದಲ್ಲಿದ್ದ ಎರಡು ವಾಹನಗಳಿಗೆ ಹಾಗೂ ಕ್ಯಾಮರಾಗಳಿಗೆ ಹಾನಿಗೊಳಿಸಿದೆ' ಎಂದು ಬೆಳ್ತಂಗಡಿ ನಿವಾಸಿ ಪ್ರಮೋದ್‌ ಕುಮಾರ್ ಶೆಟ್ಟಿ (42) ದೂರು ನೀಡಿದ್ದು, ಧರ್ಮಸ್ಥಳ ಠಾಣೆಯಲ್ಲಿ ಬಿಎನ್ ಎಸ್ ಸೆಕ್ಷನ್ 189(2), 191(2), 115(2), 110, 324(3),  352, 351(2) ಹಾಗೂ 190ರ ಅಡಿ ಪ್ರಕರಣ ದಾಖಲಾಗಿದೆ.

ಉಜಿರೆಯ ಬೆನಕ‌ ಆಸ್ಪತ್ರೆ ಬಳಿ ನಡೆದಿದೆ ಎನ್ನಲಾದ ಅಹಿತಕರ ಘಟನೆ ಸಂಬಂಧ ಬೆಳ್ತಂಗಡಿ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ.

ಧರ್ಮಸ್ಥಳದ‌ ಪಾಂಗಾಳ ರಸ್ತೆ ಬಳಿ ನಡೆದ ಹಲ್ಲೆಯ ಗಾಯಾಳುಗಳ ಬಗ್ಗೆ ವರದಿ ಮಾಡಲು ಉಜಿರೆಯ ಬೆನಕ ಆಸ್ಪತ್ರೆಯ ಬಳಿ ತೆರಳಿದ್ದೆ. ರುತ್ತಾರೆ. ಸ್ಥಳದಲ್ಲಿದ್ದ  ಗಿರೀಶ್ ಮಟ್ಟಣ್ಣನವರ್ ಅವರ ಬಳಿ ವಿಡಿಯೊ ಹೇಳಿಕೆ ನೀಡುವಂತೆ ಕೋರಿದ್ದೆ. ಆಗ ಅವರು ಏಕಾಏಕಿ ಬೈದಿದ್ದಾರೆ. ಸ್ಥಳದಲ್ಲಿದ್ದ ಆರೋಪಿ ಮಹೇಶ್ ಶೆಟ್ಟಿ ತಿಮರೋಡಿ  ಮತ್ತು ಅವರ ಜೊತೆಗಿದ್ದ ಇತರರು ಹಲ್ಲೆ ನಡೆಸಿ ಅವ್ಯಾಚವಾಗಿ ಬೈದಿದ್ದಾರೆ. ಆಗ ಸ್ಥಳಕ್ಕೆ ಬಂದ ಆರೋಪಿ, ಯೂಟ್ಯೂಬರ್ ಸಮೀರ್ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಏಷ್ಯಾನೆಟ್ ಸುವರ್ಣ ಸುದ್ದಿವಾಹಿನಿಯ ವರದಿಗಾರ ಹರೀಶ್ ಆರ್. (34) ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದು, ಬಿಎನ್ ಎಸ್ ಸೆಕ್ಷನ್ 189(2), 191(1) (2), 115(2), 351(2), 352 ಮತ್ತು 190ರ ಅಡಿ ಪ್ರಕರಣ ದಾಖಲಾಗಿದೆ.

ಧರ್ಮಸ್ಥಳದ ಪಾಂಗಳ ರಸ್ತೆ ಬಳಿ ಹಲ್ಲೆಗೊಳಗಾದ ಗಾಯಾಳುಗಳನ್ನು ನಾನು ಚಿಕಿತ್ಸೆಗಾಗಿ ಉಜಿರೆ ಬೆನಕ ಆಸ್ಪತ್ರೆಗೆ ವಾಹನವೊಂದರಲ್ಲಿ ಕರೆದೊಯ್ದಿದ್ದೆ. ಗಾಯಾಳುಗಳನ್ನು ನೋಡಲು ಬಂದಿದ್ದ ಮಹೇಶ್‌ ಶೆಟ್ಟಿ ತಿಮರೋಡಿ  ಹಾಗೂ ಗಿರೀಶ್‌ ಮಟ್ಟಣ್ಣನವರ್‌ ಅವರಿಂದ ಹೇಳಿಕೆ ಪಡೆಯಲು ಬಂದಿದ್ದ ಆರೊಪಿ, ಏಷ್ಯಾನೆಟ್ ಸುವರ್ಣ ಚಾನೆಲ್ ನ ವರದಿಗಾರ ಹಾಗೂ ಕ್ಯಾಮರಾಮೆನ್‌ ತಡೆದು ನಿಲ್ಲಿಸಿದ್ದರು. ಅವರು ಹೇಳಿಕೆ ಕೊಡಲು ನಿರಾಕರಿಸಿದಾಗ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ತಳ್ಳಾಟ ನಡೆಸಿದ್ದರು. ಈ ಘಟನೆ ನಡೆದು ಕೆಲಹೊತ್ತಿನಲ್ಲಿ ಸುವರ್ಣ ಸುದ್ದಿ ವಾಹಿನಿಯಲ್ಲಿ  ಅಜಿತ್‌ ಹನುಮಕ್ಕನವರ್‌  ಎಂಬ ನ್ಯೂಸ್‌ ಆಂಕರ್‌, 'ಸುವರ್ಣ ನ್ಯೂಸ್‌ ವರದಿಗಾರರ ಮೇಲೆ ಮಹೇಶ್‌ ಶೆಟ್ಟಿ ತಿಮರೋಡಿಯಿಂದ ಹಲ್ಲೆ' ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಾರೆ' ಎಂದು ಬೆಳ್ತಂಗಡಿ ನಿವಾಸಿ ಗಣೇಶ್ ಶೆಟ್ಟಿ (28) ಎಂಬವರು ಬೆಳ್ತಂಗಡಿ ಠಾಣೆ‍ಗೆ ದೂರು ನೀಡಿದ್ದು, ಬಿಎನ್ಎಸ್ ಸೆಕ್ಷನ್ 126(2), 296, 351 ಹಾಗೂ 3(5) ಅಡಿ ಪ್ರಕರಣ ದಾಖಲಾಗಿದೆ.

ಧರ್ಮಸ್ಥಳ ಪಾಂಗಾಳ ರಸ್ತೆ ಬಳಿ ಹಲ್ಲೆಗೊಳಗಾದ ಗಾಯಾಳುಗಳನ್ನು ಚಿಕಿತ್ಸೆಗಾಗಿ ದಾಖಲಿಸಿದ್ದ ಬೆಳ್ತಂಗಡಿ ಉಜಿರೆ ಬೆನಕ ಆಸ್ಪತ್ರೆಯ ಬಳಿ ಸಾರ್ವಜನಿಕರು ಸೇರಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣಾ ಎಸ್.ಐ ಅವರು ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದರು. ಅಲ್ಲಿ ಸುಮಾರು 50 ರಿಂದ 100 ಜನರು ಪೂರ್ವಾನುಮತಿ ಪಡೆಯದೇ ಕಾನೂನು ಬಾಹಿರವಾಗಿ ಸೇರಿ, ಘೋಷಣೆಗಳನ್ನು ಕೂಗುತ್ತಿದ್ದರು‌. ಸ್ಥಳದಿಂದ ತೆರಳುವಂತೆ ಸೂಚಿಸಿದರೂ ತೆರಳದೇ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯ ಪೊಲೀಸರು ಬಿಎನ್ಎಸ್ ಸೆಕ್ಷನ್ 189(2) ಮತ್ತು 190ರ ಅಡಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.