ಯುವನಿಧಿ ಲೋಗೊ
ಮಂಗಳೂರು: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಪಡೆಯುವ ನಿರುದ್ಯೋಗಿ ಪದವೀಧರರಿಗೆ ‘ಕೌಶಲ ತರಬೇತಿ’ ನೀಡಿ ಅವರನ್ನು ಉದ್ಯೋಗಕ್ಕೆ ಅಣಿಗೊಳಿಸುವ ಸರ್ಕಾರದ ಕಾರ್ಯಕ್ರಮಕ್ಕೆ ಜಿಲ್ಲೆಯ ಯುವಜನರ ಸ್ಪಂದನೆ ನೀರಸವಾಗಿದೆ.
ಜಿಲ್ಲೆಯಲ್ಲಿ 4,000ಕ್ಕೂ ಅಧಿಕ ನಿರುದ್ಯೋಗಿ ಯುವಕ–ಯುವತಿಯರು ಯುವನಿಧಿ ಪಡೆಯುತ್ತಿದ್ದಾರೆ. ಈ ಯೋಜನೆಯಡಿ ನಿರುದ್ಯೋಗಿ ಪದವೀಧರರಿಗೆ ಮಾಸಿಕ ₹3,000, ಡಿಪ್ಲೊಮಾ ಪೂರೈಸಿದ ನಿರುದ್ಯೋಗಿಗಳಿಗೆ ಮಾಸಿಕ ₹1,500 ಭತ್ಯೆ ದೊರೆಯುತ್ತದೆ.
ಯುವನಿಧಿ ಪಡೆಯುವ ನಿರುದ್ಯೋಗಿ ಯುವಜನರು ಉದ್ಯೋಗ ಸ್ವಾಲಂಬನೆ ಸಾಧಿಸಬೇಕೆಂಬ ಉದ್ದೇಶದಿಂದ ಇಂಡಸ್ಟ್ರಿ ಲಿಂಕೆಜ್ ಸೆಲ್ ಅಡಿ ಭವಿಷ್ಯ ಕೌಶಲ ತರಬೇತಿ ನೀಡುವ ‘ಯುವನಿಧಿ ಪ್ಲಸ್’ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಪರಿಚಯಿಸಿದೆ. ಕೌಶಲ್‌ಕಾರ್ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಅರ್ಜಿ ಭರ್ತಿ ಮಾಡಿ ಈ ತರಬೇತಿಯಲ್ಲಿ ಭಾಗವಹಿಸಬಹುದು. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನವರಿಯಿಂದ ಜೂನ್‌ವರೆಗೆ ಆರು ತಿಂಗಳ ಅವಧಿಯಲ್ಲಿ ತರಬೇತಿ ಪಡೆದವರು 44 ಮಂದಿ ಮಾತ್ರ!
ಕೌಶಲ ತರಬೇತಿ ನೀಡುವ ಹೊಣೆಯನ್ನು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ), ಕರ್ನಾಟಕ ಜರ್ಮನ್ ಟೆಕ್ನಿಕಲ್ ಟ್ರೇನಿಂಗ್ ಇನ್‌ಸ್ಟಿಟ್ಯೂಟ್ (ಕೆಜಿಟಿಟಿಐ), ಎಲ್ಲ ಸರ್ಕಾರಿ ಐಟಿಐ ಕಾಲೇಜುಗಳು ಮತ್ತು ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ ಕರ್ನಾಟಕ (ಸೆಡಾಕ್) ಇವುಗಳಿಗೆ ವಹಿಸಲಾಗಿದೆ. ಈ ಸಂಸ್ಥೆಗಳು ಯುವನಿಧಿ ಪಡೆಯುವ 4,000ಕ್ಕೂ ಅಧಿಕ ನಿರುದ್ಯೋಗಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿವೆ. ಕರೆ ಮಾಡಿದಾಗ ಕೆಲವರು ತರಬೇತಿಗೆ ಬರಲು ಆಸಕ್ತಿ ತೋರಿದ್ದರು. ಆದರೆ, ತರಬೇತಿಗೆ ಬಂದವರು ಕೆಲವರಷ್ಟೇ. ತರಬೇತಿ ಪಡೆದ 44 ಜನರಲ್ಲಿ 42 ಮಂದಿ ಯುವತಿಯರು, ಇಬ್ಬರು ಮಾತ್ರ ಯುವಕರು. 34 ಮಂದಿ ಟೇಲರಿಂಗ್ ತರಬೇತಿ ಮತ್ತು 10 ಮಂದಿ ಟ್ಯಾಲಿ ತರಬೇತಿ ಪಡೆದಿದ್ದಾರೆ ಎಂದು ಕೌಶಲಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ಯುವನಿಧಿಗೆ ನೋಂದಾಯಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಅವರಲ್ಲಿ ಕೌಶಲ ತರಬೇತಿಗೆ ಬಂದು ಆರ್ಥಿಕ ಸ್ವಾವಲಂಬಿ ಆಗಬೇಕೆಂಬ ಛಲ ಇರುವವರು ವಿರಳವಾಗಿದ್ದಾರೆ ಎಂದು ತರಬೇತಿ ಕೇಂದ್ರ ಅಧಿಕಾರಿಯೊಬ್ಬರು ಬೇಸರಿದರು.
‘ಯುವನಿಧಿಗೆ ನೋಂದಾಯಿಸಿಕೊಂಡಿರುವ ಹಲವಾರು ವಿದ್ಯಾರ್ಥಿಗಳನ್ನು ನಮ್ಮ ಕಾಲೇಜಿನಿಂದ ಸಂಪರ್ಕಿಸಿದ್ದೆವು. ಒಬ್ಬ ಯುವತಿ ನೋಂದಣಿಗೆ ಬಂದಿದ್ದರು. ದಾಖಲೆ ಕೊರತೆ ಕಾರಣಕ್ಕೆ ಮರುದಿನ ಬರುವುದಾಗಿ ಹೇಳಿದವರು, ಅವರೂ ಕೂಡ ಬಂದಿಲ್ಲ. ಅಟೊಮೇಷನ್ ಸೇರಿದಂತೆ ನಾಲ್ಕು ಮಾದರಿಯ ಕೌಶಲ ತರಬೇತಿಯನ್ನು ನಮ್ಮ ಕಾಲೇಜಿನಲ್ಲಿ ನೀಡಲಾಗುತ್ತದೆ’ ಎಂದು ಜಿಟಿಟಿಸಿ ಪ್ರಾಂಶುಪಾಲ ಲಕ್ಷ್ಮಿನಾರಾಯಣ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಕರೆ ಮಾಡಿ ಸಂಪರ್ಕಿಸಿದರೂ ಬರುತ್ತಿಲ್ಲ’
ಯುವನಿಧಿಯನ್ನು ಫಲಾನುಭವಿಗೆ ಗರಿಷ್ಠ ಎರಡು ವರ್ಷ (24 ಕಂತು) ನೀಡಲಾ ಗುತ್ತದೆ. ಈ ಅವಧಿಯಲ್ಲಿ ನಿರುದ್ಯೋ ಗಿಗಳು ತರಬೇತಿ ಪಡೆದು, ಸ್ವಂತ ಉದ್ಯೋಗ ಪ್ರಾರಂಭಿಸಬೇಕು ಅಥವಾ ಬೇರೆ ಕಡೆಗಳಲ್ಲಿ ಉದ್ಯೋಗ ಪಡೆದು ಸ್ವತಂತ್ರ ದುಡಿಮೆ ಮಾಡಬೇಕು ಎಂಬ ಉದ್ದೇಶದಿಂದ ಉದ್ಯೋಗ ಆಧಾರಿತ ಕೌಶಲ ತರಬೇತಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಫಲಾನುಭವಿಗಳನ್ನು ಹಲವಾರು ಸಂಪರ್ಕ ಮಾಡಿದರೂ, ಅವರು ತರಬೇತಿ ಬರುತ್ತಿಲ್ಲ ಎಂಬುದೇ ಬೇಸರದ ಸಂಗತಿ ಎನ್ನುತ್ತಾರೆ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜ.
ತರಬೇತಿಗೆ ನೋಂದಣಿಗೆ ಹೇಗೆ?
ಕರ್ನಾಟಕ ಕೌಶಲಾಭಿವೃದ್ಧಿ ನಿಗಮದ ಕೌಶಲ್‌ಕಾರ್ ಪೋರ್ಟಲ್‌ನಲ್ಲಿ ಯುವನಿಧಿ ಪ್ಲಸ್ ತರಬೇತಿಗೆ ನೋಂದಾಯಿಸಬಹುದು. ಆನ್‌ಲೈನ್ ಅರ್ಜಿ ಭರ್ತಿ ಮಾಡುವ ವೇಳೆ ಆಧಾರ್ ಸಂಖ್ಯೆ, ಸ್ವ ವಿವರ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಪರಿಶಿಷ್ಟ ಜಾತಿಗೆ ಸೇರಿದವರಾದರೆ ಜಾತಿಪ್ರಮಾಣ ಪತ್ರ ಇವಿಷ್ಟು ದಾಖಲೆಗಳನ್ನು ನೀಡಬೇಕಾಗುತ್ತದೆ. ಅರ್ಜಿ ಸಲ್ಲಿಸಿರುವವರ ಆಸಕ್ತಿ ಆಧರಿಸಿ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ. ಉದ್ಯೋಗ ಆಧಾರಿತ 1,000 ವಿವಿಧ ರೀತಿಯ ಕೌಶಲ ತರಬೇತಿಗಳನ್ನು ಪಟ್ಟಿ ಯೋಜನೆಯಡಿ ನಿಗದಿಗೊಳಿಸಲಾಗಿದೆ. ಸ್ಥಳೀಯವಾಗಿ ಆರು ಮಾದರಿಯ ತರಬೇತಿಗೆ ಅವಕಾಶ ದೊರೆತಿದೆ.
ತರಬೇತಿ ಪಡೆದವರಿಗೆ ಸರ್ಕಾರದ ಉದ್ಯೋಗ ವಿನಿಮಯ ಕೇಂದ್ರದ ಮೂಲಕ ಉದ್ಯೋಗ ಪಡೆಯಲು ಸಾಧ್ಯವಿದೆ. ಸಿಡಾಕ್ ಮೂಲಕ ಸ್ವ ಉದ್ಯೋಗಕ್ಕೆ ನೆರವು ದೊರೆಯುತ್ತದೆ ಎನ್ನುತ್ತಾರೆ ಅಧಿಕಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.