ADVERTISEMENT

ಮಂಗಳೂರು ವಿವಿ| 9 ಕೋರ್ಸ್‌ಗೆ ಶೂನ್ಯ ಪ್ರವೇಶಾತಿ!

ವಿವಿ ಪ್ರವೇಶ ಪ್ರಕ್ರಿಯೆ: ಎರಡು ದಿನಗಳು ಮಾತ್ರ ಬಾಕಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 6:53 IST
Last Updated 8 ಅಕ್ಟೋಬರ್ 2024, 6:53 IST

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 2024–25ನೇ ಸಾಲಿನ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ ಇನ್ನು ಎರಡು ದಿನಗಳಷ್ಟೇ ಬಾಕಿ ಇದೆ. ಆದರೆ, ಒಂಬತ್ತಕ್ಕೂ ಹೆಚ್ಚು ಕೋರ್ಸ್‌ಗಳಿಗೆ ಈವರೆಗೆ ಒಬ್ಬರೂ ಪ್ರವೇಶ ಪಡೆದಿಲ್ಲ ಎಂದು ಮೂಲಗಳು ತಿಳಿಸಿವೆ.

ಮಂಗಳೂರು ವಿವಿಯಲ್ಲಿ 28 ವಿಭಾಗಗಳು ಇದ್ದು, ಒಟ್ಟು 42 ವಿವಿಧ ಕೋರ್ಸ್‌ಗಳು ಅಸ್ತಿತ್ವದಲ್ಲಿವೆ. ಇವುಗಳಲ್ಲಿ ಲೆಕ್ಕಶಾಸ್ತ್ರ (ಸ್ಟ್ಯಾಟಿಸ್ಟಿಕ್ಸ್), ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಎಲೆಕ್ಟ್ರಾನಿಕ್ಸ್, ಎಂ.ಇಡಿ, ಎಂಎಸ್‌ಡಬ್ಲ್ಯು, ಜಿಯೊಇನ್ಪೊಮ್ಯಾಟಿಕ್ಸ್, ಮಟೀರಿಯಲ್ ಸೈನ್ಸ್, ಎಂಎಲ್ ಸೈನ್ಸ್‌ ಕೋರ್ಸ್‌ಗಳು, ಹಂಪನಕಟ್ಟೆಯಲ್ಲಿರುವ ವಿಶ್ವವಿದ್ಯಾನಿಲಯ ಸಂಜೆ ಕಾಲೇಜಿನಲ್ಲಿರುವ ಕೊಂಕಣಿ ಸ್ನಾತಕೋತ್ತರ ಕೋರ್ಸ್‌ ‍ಪ್ರವೇಶಾತಿ ಶೂನ್ಯವಾಗಿದೆ. ವಿವಿಯಲ್ಲಿರುವ ಪರಿಸರ ವಿಜ್ಞಾನ ಕೋರ್ಸ್‌ಗೆ ಐವರು ಪ್ರವೇಶ ಪಡೆದಿದ್ದರೆ, ತುಳು ಎಂ.ಎ.ಗೆ ಒಂದು ದಾಖಲಾತಿ ಆಗಿದೆ.

ಪ್ರವೇಶ ಹೆಚ್ಚಿಸಲು ಅರ್ಜಿ ಸಲ್ಲಿಕೆಯ ದಿನಾಂಕವನ್ನು ಎರಡು ಬಾರಿ ವಿಸ್ತರಣೆ ಮಾಡಲಾಗಿದೆ. ಮೊದಲ ಬಾರಿ ಇದ್ದ ದಿನಾಂಕವನ್ನು ಸೆಪ್ಟೆಂಬರ್ 25ರವರೆಗೆ ವಿಸ್ತರಿಸಿ, ನಂತರ ಮತ್ತೊಮ್ಮೆ ಅ.10ರವರೆಗೆ ವಿಸ್ತರಿಸಲಾಗಿತ್ತು. ಆದರೂ, ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿಲ್ಲ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ವಿವಿಯ ವಿವಿಧ ವಿಭಾಗಗಳಿಂದ ಸಣ್ಣ ವಿಡಿಯೊ ತುಣುಕುಗಳನ್ನು ಸಿದ್ಧಪಡಿಸಿ, ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೆ ಮಾಡಲಾಗಿತ್ತು. ಈ ಮೂಲಕ ಹೊರ ರಾಜ್ಯಗಳ ವಿದ್ಯಾ‌ರ್ಥಿಗಳನ್ನು ಸೆಳೆಯಲು ವಿವಿ ಪ್ರಯತ್ನಿಸಿತ್ತು. 

ADVERTISEMENT

ಪ್ರತಿ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳ ಸಂಖ್ಯೆ 15ಕ್ಕಿಂತ ಕಡಿಮೆ ಇದ್ದರೆ, ಅಂತಹ ವಿಭಾಗವನ್ನು ತಾತ್ಕಾಲಿಕವಾಗಿ ಬಂದ್ ಮಾಡಿ, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದಾಗ ಪುನಃ ತೆರೆಯುವ ನಿರ್ಧಾರವನ್ನು ವಿವಿ ಕೈಗೊಂಡಿತ್ತು. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಪ್ರಸ್ತುತ ಈ ಸಂಖ್ಯೆಯನ್ನು ಇಳಿಕೆ ಮಾಡಿ, ಪ್ರತಿ ವಿಭಾಗದಲ್ಲಿ 10 ಜನರು ಪ್ರವೇಶ ಪಡೆದರೆ ವಿಭಾಗವನ್ನು ಮುಂದುವರಿಸಲು ವಿಶ್ವವಿದ್ಯಾನಿಲಯ ನಿರ್ಧರಿಸಿದೆ. 1,800ಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದರೂ, ಈವರೆಗೆ ಪ್ರವೇಶ ಪಡೆದವರು 680ರಷ್ಟು ಮಾತ್ರ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.