ADVERTISEMENT

ಆಮೆ ನಡಿಗೆಯಲ್ಲಿ ದೋಣಿ ವಿಹಾರ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2011, 7:10 IST
Last Updated 10 ಜೂನ್ 2011, 7:10 IST

ಚನ್ನಗಿರಿ: ಏಷ್ಯಾದಲ್ಲಿಯೇ ಎರಡನೇ ಅತಿ ದೊಡ್ಡ ಕೆರೆಯೆನಿಸಿರುವ ಸೂಳೆಕೆರೆಯಲ್ಲಿ ದೋಣಿ ವಿಹಾರ ಕೇಂದ್ರದ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದ್ದು, ದೋಣಿ ವಿಹಾರಕೇಂದ್ರ ಮರೀಚೆಕೆಯಾಗುತ್ತಿದೆ ಎಂದು ಪ್ರವಾಸಿಗರು ದೂರಿದ್ದಾರೆ.

ದೋಣಿ ವಿಹಾರ ಕೇಂದ್ರವನ್ನು ಮಾಡಲು ಪ್ರವಾಸೋದ್ಯಮ ಇಲಾಖೆ ರೂ. 2 ಕೋಟಿ ಅನುದಾನವನ್ನು ಕಳೆದ ಎರಡು ವರ್ಷಗಳ ಹಿಂದೆ ಬಿಡುಗಡೆ ಮಾಡಿದೆ. ಹಾಗೆಯೇ, ಎರಡು ಬೋಟ್‌ಗಳು ಕೂಡಾ ತ್ಯಾವಣಿಗೆ ಗ್ರಾಮದ ನೀರಾವರಿ ಇಲಾಖೆ ಕಚೇರಿ ಆವರಣದಲ್ಲಿ ಒಂದು ವರ್ಷದಿಂದ ಬಿಸಿಲು, ಮಳೆ, ಗಾಳಿಗೆ ಸಿಕ್ಕು ನಲುಗುತ್ತಿವೆ.

ಬಸವರಾಜಪುರ ಗ್ರಾಮದ ಬಳಿ ಸೂಳೆಕೆರೆಯ ದಂಡೆಯಲ್ಲಿ ದೋಣಿ ವಿಹಾರ ಕೇಂದ್ರ ನಿರ್ಮಿಸಲು ಆಯ್ಕೆ ಮಾಡಲಾಗಿತ್ತು. ಅದರಂತೆ ಅದ್ದೂರಿಯ ಸಮಾರಂಭ ಮಾಡುವ ಮೂಲಕ ಕಾಮಗಾರಿಯ ಗುದ್ದಲಿ ಪೂಜೆಯನ್ನು ಪ್ರವಾಸೋದ್ಯಮ ಸಚಿವರ ನೆರವೇರಿಸಿದ್ದರು. ಆರಂಭದ ದಿನಗಳಲ್ಲಿ ವೇಗವಾಗಿ ನಡೆದ ಕಾಮಗಾರಿ ನಂತರ ಅತ್ಯಂತ ನಿಧಾನಗತಿಯಲ್ಲಿ ನಡೆಯುತ್ತಿದೆ. ಭೂ ಸೇನಾ ನಿಗಮದವರು ಕಾಮಗಾರಿಯ ಗುತ್ತಿಗೆಯನ್ನು ತೆಗೆದುಕೊಂಡಿದ್ದಾರೆ. ಈಗಿನ ಕಾಮಗಾರಿಯ ವೇಗವನ್ನು ಗಮನಿಸಿದರೆ ಇನ್ನು ಮುಕ್ತಾಯಗೊಳ್ಳಲು ಕನಿಷ್ಠ ಆರೇಳು ತಿಂಗಳು ಬೇಕಾಗುತ್ತದೆ. ಅಷ್ಟರಲ್ಲಿ ಇಲ್ಲಿಗೆ ಬಂದಿರುವ ಬೋಟ್‌ಗಳು ಶಿಥಿಲಗೊಂಡು ಹಾಳಾಗಿ ಹೋಗುತ್ತವೆ.

ಸೂಳೆಕೆರೆಯಲ್ಲಿ ಕಳೆದ ಒಂದು ವರ್ಷದವರೆಗೂ ಇಲ್ಲಿನ ಮೀನು ಹಿಡಿಯುವ ತೆಪ್ಪಗಳಲ್ಲಿ ಇಲ್ಲಿಗೆ ಬಂದ ಪ್ರವಾಸಿಗರನ್ನು ಕೆರೆ ವಿಹಾರಕ್ಕೆ ಕರೆದೊಯ್ಯುತ್ತಿದ್ದರು. ತೆಪ್ಪ ದುರಂತದಲ್ಲಿ ಮೂವರು ನೀರು ಪಾಲಾದ ಕಾರಣದಿಂದ ತೆಪ್ಪದಲ್ಲಿ ಕೆರೆ ವಿಹಾರವನ್ನು ನಿಷೇಧಿಸಲಾಯಿತು. ಇದರಿಂದ ದೋಣಿ ವಿಹಾರ ಇಲ್ಲದೇ ಸೂಳೆಕೆರೆ ವೀಕ್ಷಣೆಗೆ ಪ್ರವಾಸಿಗರು ಬರುವ ಸಂಖ್ಯೆ ಕಡಿಮೆಯಾಗಿದೆ. ಆದ್ದರಿಂದ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಶೀಘ್ರದಲ್ಲಿ ಇಲ್ಲಿ ದೋಣಿ ವಿಹಾರ ಕೇಂದ್ರವನ್ನು ಆರಂಭಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.