ADVERTISEMENT

ಇಂದಿನಿಂದ ದಂಡಿ ದುರುಗಮ್ಮ ಜಾತ್ರೋತ್ಸವ

ಭಕ್ತಿ-ಭಾವಗಳ ಸಂಗಮದಲ್ಲಿ ಸಿಂಗರಿಸಿಕೊಂಡು ಸಜ್ಜುಗೊಂಡ `ಅರಸೀಕೆರೆ'

​ಪ್ರಜಾವಾಣಿ ವಾರ್ತೆ
Published 11 ಜನವರಿ 2013, 9:44 IST
Last Updated 11 ಜನವರಿ 2013, 9:44 IST
ದೇವಸ್ಥಾನದ ಮುಂಭಾಗದಲ್ಲಿ ಝಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರವಾಗಿರುವ ದ್ವಾರಬಾಗಿಲು
ದೇವಸ್ಥಾನದ ಮುಂಭಾಗದಲ್ಲಿ ಝಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರವಾಗಿರುವ ದ್ವಾರಬಾಗಿಲು   

ಹರಪನಹಳ್ಳಿ: ಗ್ರಾಮೀಣ ಪರಂಪರೆಯ ಸಾಂಸ್ಕೃತಿಕ ಬದುಕಿನ ಆರಾಧ್ಯ ದೈವವಾಗಿರುವ ದಂಡಿ ದುರುಗಮ್ಮದೇವಿ ಜಾತ್ರೋತ್ಸವಕ್ಕೆ ತಾಲ್ಲೂಕಿನ ಅರಸೀಕೆರೆ ಗ್ರಾಮ ಭಕ್ತಿ-ಭಾವಗಳ ಸಂಗಮದಲ್ಲಿ ಸಿಂಗರಿಸಿಕೊಂಡಿದೆ.

ಪ್ರತಿವರ್ಷದ ಸಾಂಪ್ರದಾಯಿಕ ಪದ್ಧತಿಯಂತೆ ಜ.11ರಿಂದ 13ರವರೆಗೆ ನಡೆಯುವ ಸಂಭ್ರಮ-ಸಡಗರ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡು, ಮನೆ-ಮನಗಳಲ್ಲಿ ಭಕ್ತರ ಭಕ್ತಿಯ- ಭಾವಬಿಂದುಗಳು ಕಳೆಗಟ್ಟಿವೆ. ಬಳ್ಳಾರಿ ಸೀಮೆಯಲ್ಲಿ ಸಹಸ್ರಾರು ವರ್ಷಗಳ ಹಿಂದೆ ಸಂಭವಿಸಿದ ಭೀಕರ ಸಾಂಕ್ರಾಮಿಕ ಕಾಯಿಲೆ ಇಡೀ ಜೀವಸಂಕುಲವನ್ನೇ ತಲ್ಲಣಗಳ ಸುಳಿಗೆ ಸಿಲುಕಿಸಿತ್ತು. ಕಾಯಿಲೆಗಳ ಅಟ್ಟಹಾಸಕ್ಕೆ ಸಹಸ್ರಾರು ಜನರ  ಸಾವು-ನೋವು ಸಂಭವಿಸಿತ್ತು.

ಹೆಣ ಹೂಳಲು ಸ್ಮಶಾನದಲ್ಲಿ ಜಾಗವಿಲ್ಲದಷ್ಟು ತತ್ವಾರ ಉಂಟಾಯಿತು. ಒಂದೇ ಸಮಾಧಿಯಲ್ಲಿ ಎಷ್ಟೋ ಹೆಣ ಹೂಳಲಾಯಿತು. ಭೂಮಂಡಲದಲ್ಲಿ ಮನುಷ್ಯ ಅನುಭವಿಸುತ್ತಿದ್ದ ಸಂಕಷ್ಟ, ಕಷ್ಟ-ಕಾರ್ಪಣ್ಯಗಳು ಶಿವನ ಹೃದಯವನ್ನು ತಲ್ಲಣಗೊಳಿಸಿತು. ಬಳ್ಳಾರಿ ಪ್ರಾಂತ್ಯಕ್ಕೆ ಅಂಟಿದ ಶಾಪ ವಿಮೋಚನೆ ಮಾಡಲು ಸಾಕ್ಷಾತ್ ಪರಬ್ರಹ್ಮ ದುರ್ಗಾದೇವಿ ರೂಪದಲ್ಲಿ ಉದ್ಭವಿಸಿದ ಎಂಬ ಪ್ರತೀತಿ ಇದೆ.

ಈ ಮಧ್ಯೆ ಬಳ್ಳಾರಿ ಪ್ರಾಂತ್ಯದ ಅಧೀನದಲ್ಲಿದ್ದ ಅರಸೀಕೆರೆ ಭಾಗದಲ್ಲಿಯೂ ನಾನಾ ತರಹದ ಕಷ್ಟ-ಕಾರ್ಪಣ್ಯಗಳು ಇಲ್ಲಿನ ಜನರನ್ನು ಬಾಧಿಸುತ್ತಿದ್ದವು. ಜನರ ಕಷ್ಟ-ಕಾರ್ಪಣ್ಯ, ಆಕ್ರಂದನ ಕುರಿತು ಅರಸೀಕೆರೆ ಗ್ರಾಮದ ಈಡಿಗರ ಲಚ್ಚಮ್ಮ ಎಂಬ ಮಹಿಳೆ, ಬಳ್ಳಾರಿಯ ಅರಸರಿಗೆ ಪತ್ರಬರೆದು, ಅರಸರಿಗೆ ಮುಟ್ಟಿಸುವಂತೆ ಪರಿಶಿಷ್ಟ ಜನಾಂಗದ ಮರಿಯಜ್ಜ ಎಂಬ ಹಿರಿಯರ ಕೈಗೆ ಕೊಟ್ಟು ಕಳುಹಿಸಿದಳಂತೆ. 

ಪ್ರಜೆಗಳು ಅನುಭವಿಸುತ್ತಿದ್ದ ಸಂಕಷ್ಟ ಹಾಗೂ ಯಮಯಾತನೆಯ ನರಕದ ಬದುಕಿನ ಪತ್ರವನ್ನು ಮರಿಯಜ್ಜ ಬಳ್ಳಾರಿಯ ಅರಸರ ಸನ್ನಿಧಿಗೆ ತಲುಪಿಸಿ, ವಾಪಸ್ ಮರಳುತ್ತಿದ್ದಾಗ, ಆತನ ಕಣ್ಣಿಗೆ ಸ್ಮಶಾನ ಕಾಣಿಸಿತು. ಹೆಣಗಳ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಉಪಯೋಗಿಸಿದ ಸಿಡಿಗೆಯ ಕಟ್ಟಿಗೆ ರಾಶಿರಾಶಿಯಾಗಿ ಬಿದ್ದಿತ್ತು. ಮರಿಯಜ್ಜನ ಮನಸು ಕಟ್ಟಿಗೆ ಕಡೆವಾಲಿತು. ದೊಡ್ಡದೊಡ್ಡ ಕಟ್ಟಿಗೆಯ ತುಂಡನ್ನು ಹೊರೆ ಮಾಡಿಕೊಂಡು ತಲೆಯ ಮೇಲೆ ಹೊತ್ತೊಯ್ಯುವಾಗ, ಇದ್ದಕ್ಕಿದ್ದಂತೆ ಹೊರೆ ತುಂಬಾ ಭಾರ ಎನಿಸಿತು. ಭಾರ ತಾಳಲಾರದ ಮರಿಯಜ್ಜ ಹೊರೆಯನ್ನು ಕೆಳಗಿಸಿ, ದಣಿವಾರಿಸಿಕೊಳ್ಳಲು ಕುಳಿತ.

`ನಾನು ಬಳ್ಳಾರಿ ದುರುಗಮ್ಮ... ನಿನ್ನ ಕಟ್ಟಿಗೆ ಹೊರೆಯ ತುಂಡೊಂದರಲ್ಲಿ ನನ್ನ ಆತ್ಮ ಅಡಗಿದೆ. ನೀನು ಹೋಗುವ ಊರಿಗೆ ನನ್ನನ್ನು ಕರೆದೊಯ್ಯಿ. ನಿನ್ನ ನಾಡಿಗೆ ಆವರಿಸಿರುವ ಕಷ್ಟ- ಕಾರ್ಪಣ್ಯ ನಿವಾರಣೆಯಾಗುತ್ತವೆ' ಎಂಬ ಆಶರೀರವಾಣಿ ಆಕಾಶದಲ್ಲಿ ಮಾರ್ದನಿಸಿತಂತೆ! ಆಶರೀರವಾಣಿಯಿಂದ ಅಧೀರನಂತೆ ಕಂಡುಬಂದ ಮರಿಯಜ್ಜ ಸುಧಾರಿಸಿಕೊಂಡು, `ನಾನು ನಿರ್ಗತಿಕ. ಕಟ್ಟಿಗೆ ಮಾರಿ ಜೀವಿಸುವ ಬಡಜೀವಿ. ನಿನ್ನನ್ನು ಕರೆದೊಯ್ದು ನಾನೇನು ಮಾಡಲಿ?'ಎಂದನಂತೆ. ಇದಕ್ಕೆ ಪ್ರತಿಯಾಗಿ, ಕೂಡಲೇ ತನ್ನ ಮಹಾ ಮಹಿಮೆಯಿಂದ ದೇವಿ ಪವಾಡ ಪ್ರದರ್ಶಿಸಿದಳಂತೆ. ಇದಕ್ಕೆ ಮರು ಮಾತನಾಡದ ಮರಿಯಜ್ಜ ದೇವಿಯನ್ನು ಅರಸೀಕೆರೆಗೆ ತಂದು ಪ್ರತಿಷ್ಠಾಪಿಸಿದನಂತೆ.

ADVERTISEMENT

ಬಳ್ಳಾರಿಯಿಂದ ಬಂದ ದುರುಗಮ್ಮ ದೇವಿ, ದಂಡಿನ ದುರುಗಮ್ಮ ಹೆಸರಿನಲ್ಲಿ ಪೂಜೆ- ಪುನಸ್ಕಾರಗಳು ಆರಂಭವಾದವಂತೆ. ಅಂದಿನಿಂದ ನಾಡಿನಲ್ಲಿ ಮನೆಮಾಡಿದ್ದ ದಾರಿದ್ರ್ಯ ತೊಲಗಿ, ಸಂಪತ್ತಿನ ಪರ್ವ ಆರಂಭವಾಯಿತು ಎಂದು ಇತಿಹಾಸ ಬಿಚ್ಚಿಡುತ್ತಾರೆ ಸ್ಥಳೀಯ ಉಪನ್ಯಾಸಕ ಪಿ. ದುರುಗೇಶ್ ಹಾಗೂ ಹಿರಿಯರಾದ ಪೂಜಾರ್ ಮರಿಯಪ್ಪ.

ಜ. 11ರಂದು ಸಂಜೆ 7ಕ್ಕೆ ದೇವಿಯ ಕಾರ್ತೀಕೋತ್ಸವ, 12ರಂದು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಜ. 13ರಂದು ಬೆಳಗಿನಜಾವ ದೇವಿ ಗಂಗೆಗೆ ಹೋಗುತ್ತಾಳೆ. ವಾಪಸ್ ಬರುವಾಗ ಸುಮಾರು 2ಕಿ.ಮೀ. ನಷ್ಟು ದೂರ ಹರಕೆ ತೀರಿಸಲು ರಸ್ತೆಯುದ್ದಕ್ಕೂ ಮಲಗಿದ ಭಕ್ತರ ಮೇಲೆ ದೇವಿ ಹೆಜ್ಜೆ ಹಾಕುತ್ತ ಬರುತ್ತಾಳೆ.

ಪರಿಶಿಷ್ಟ ಸಮುದಾಯಕ್ಕೆ ಸೇರಿದ ಪೂಜಾರಪ್ಪನ ಮೇಲೆ ದೇವಿಯ  ಅನುಗ್ರಹವಾಗುತ್ತದೆ. ಆತನೇ ಭಕ್ತರ ಮೇಲೆ ಹೆಜ್ಜೆ ಇಡುತ್ತಾ ಬರುವುದು ಜಾತ್ರೆಯ ವೈಶಿಷ್ಟ. ಸುತ್ತಮುತ್ತಲಿನ ನಾಲ್ಕಾರು ಜಿಲ್ಲೆಗಳ ಲಕ್ಷಾಂತರ ಭಕ್ತರು ದೇವಿಯ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಹಲವು ಕುಲಗಳನ್ನು ಒಗ್ಗೂಡಿಸುವ ಹಾಗೂ ಜಾತಿ-ಧರ್ಮಗಳ ಸುಮಧುರ ಬಾಂಧವ್ಯ ಬೆಸುಗೆ ಈ ಜಾತ್ರೆಯ ವಿಶೇಷ  ಎನ್ನುತ್ತಾರೆ ಎನ್. ಕೊಟ್ರೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.