ಸಂತೇಬೆನ್ನೂರು: ನಾಡಿನ ಸಾಂಸ್ಕೃತಿಕ ಹಿರಿಮೆ ಶ್ರೀಮಂತಗೊಳಿಸುವ ನಾಡಹಬ್ಬ ದಸರಾ ಹೂವುಗಳ ಸಿಂಗಾರಕ್ಕೆ ಹೆಸರುವಾಸಿ. ಈ ಹಬ್ಬದ ಸಮಯದಲ್ಲಿ ವಿಶೇಷವಾಗಿ ಕೇಸರಿ, ಹಳದಿ ಬಣ್ಣದ ದುಂಡನೇ ಚೆಂಡು ಹೂವಿಗೆ ಬಹು ಬೇಡಿಕೆ.
ಇದನ್ನು ಅರಿತಿರುವ ಸಮೀಪದ ಗೆದ್ದಲಹಟ್ಟಿ ಗ್ರಾಮದ ರುದ್ರಮ್ಮ ಮೂರ್ತಪ್ಪ ಸಾಲು ಹಬ್ಬಗಳ ಸಂದರ್ಭದಲ್ಲಿ ಅರಳಿ ನಿಲ್ಲುವಂತೆ ಯೋಜಿತವಾಗಿ ಚೆಂಡು ಹೂವು ಬೆಳೆಸಿ ನಿರೀಕ್ಷೆಗಿಂತ ಅಧಿಕ ಲಾಭ ಗಳಿಸುವ ಆತ್ಮವಿಶ್ವಾಸದಲ್ಲಿದ್ದಾರೆ.
ರಾಜ್ಯ ಹೆದ್ದಾರಿ ಪಕ್ಕದ ಒಂದು ಎಕರೆ ಜಮೀನಿನಲ್ಲಿ ಅಂಬರ ತಳಿಯ ಚೆಂಡು ಹೂವು ಬೆಳೆಸಿದ್ದು, ಇದು ಪ್ರಯಾಣಿಕರ ಮನಸೂರೆಗೊಳ್ಳುತ್ತಿದೆ.
90 ದಿನಗಳ ಹಿಂದೆ ಸಮೀಪದ ನಾಗೇನಹಳ್ಳಿ ಫಾರಂ ಚೆಂಡು ಹೂವು ಸಸಿ ಖರೀದಿಸಿ ನಾಟಿ ಮಾಡಿದೆವು. ಪ್ರತಿ ಸಸಿಗೆ ₹3.50 ದರ ನೀಡಿ ಒಂದು ಎಕರೆಯಲ್ಲಿ 5 ಸಾವಿರ ಸಸಿ ಬೆಳೆಸಿದ್ದೇವೆ. ಎರಡು ಬಾರಿ ಔಷಧಿ ಸಿಂಪಡಣೆ, ರಾಸಾಯನಿಕ ಗೊಬ್ಬರ, ಕಳೆ ನಿರ್ವಹಣೆ ಮಾಡಿದ್ದರಿಂದ ಅವು ಸಮೃದ್ಧವಾಗಿ ಅರಳಿವೆ. ಹೂವು ಅರಳಿದ ನಂತರ 8 ರಿಂದ 10 ದಿನ ಗಿಡಗಳಲ್ಲೇ ಇದ್ದರೂ ಬಾಡುವುದಿಲ್ಲ. ಒಂದೆರಡು ದಿನಗಳಲ್ಲಿ ಆಯುಧ ಪೂಜೆ, ವಿಜಯದಶಮಿ ಹಬ್ಬಕ್ಕೆ ಹೂವು ಬಿಡಿಸಲು ಯೋಜಿಸಿದ್ದಾರೆ.
‘ಪ್ರತಿ ಕೆ.ಜಿ.ಗೆ ₹ 40 ರಿಂದ ₹60 ದರ ಸಿಗುವ ನಿರೀಕ್ಷೆ ಇದೆ. ಬೇಡಿಕೆ ಹೆಚ್ಚಿದರೆ ದರದಲ್ಲಿ ಏರಿಕೆ ಆಗಬಹುದು. ಮೊದಲ ಹಂತದಲ್ಲಿ 10 ಕ್ವಿಂಟಲ್ ಇಳುವರಿ ಸಿಗಲಿದೆ. ಹೆದ್ದಾರಿ ಪಕ್ಕದಲ್ಲಿಯೇ ಇರುವುದರಿಂದ ಸ್ಥಳದಲ್ಲೇ ಮಾರಾಟ ಮಾಡಿ ಉತ್ತಮ ಲಾಭ ಪಡೆಯಬಹುದು. ಮತ್ತೆ 15 ದಿನಗಳಲ್ಲಿ ದೀಪಾವಳಿಗೆ 10 ಕ್ವಿಂಟಲ್‌ಗಿಂತ ಅಧಿಕ ಚೆಂಡು ಹೂವುಗಳು ಸಿಗಲಿವೆ’ ಎನ್ನುತ್ತಾರೆ ರುದ್ರಮ್ಮ ಮೂರ್ತಪ್ಪ.
ನವರಾತ್ರಿ ಪೂಜೆ, ಆಯುಧ ಪೂಜೆಗೆ ವಾಹನಗಳಿಗೆ ಬೃಹತ್ ಹಾರ, ವಿಜಯ ದಶಮಿ ವಿಶೇಷ ಪೂಜೆ, ಅಂಬು ಛೇದನದ ಮೆರವಣಿಗೆ, ದೀಪಾವಳಿ ಅಲಂಕಾರ, ಹಿರಿಯರ ಪೂಜೆಗಳ ಸಂದರ್ಭದಲ್ಲಿ ಚೆಂಡು ಹೂವಿಗೆ ಬಹು ಬೇಡಿಕೆ. ಇತರೆ ಹೂವುಗಳಿಗಿಂತ ಚೆಂಡು ಹೂವಿಗೆ ಸಾಂಪ್ರದಾಯಿಕ ಹಿನ್ನೆಲೆ ಇದೆ. ಹಾಗಾಗಿ ರಸ್ತೆ ಪಕ್ಕದಲ್ಲಿ ರಾಶಿ, ರಾಶಿ ಚೆಂಡು ಹೂವು ಮಾರಾಟ ಆಗಲಿವೆ.
‘ಒಂದು ಎಕರೆಗೆ ₹ 20 ಸಾವಿರದಿಂದ ₹ 25 ಸಾವಿರ ಖರ್ಚು ತಗುಲಿದೆ. ಸತತ 90 ದಿನಗಳ ಪರಿಶ್ರಮ ಫಲ ನೀಡುವ ಭರವಸೆ ಇದೆ. ಚೆಂಡು ಹೂ ಕೃಷಿಗೆ ಶ್ರಮವಹಿಸಿದ ಅಕ್ಕನ ಮಗ ಚೇತನ್ ಈಚೆಗೆ ಅಕಾಲಿಕ ಮರಣ ಹೊಂದಿದ. ಈ ಹೂವುಗಳಲ್ಲಿ ಅವನ ನಗುವಿದೆ’ ಎಂದು ರುದ್ರಮ್ಮ ಭಾವುಕರಾದರು.
ಗೆದ್ದಲಹಟ್ಟಿ ರೈತರು ಕೃಷಿಯಲ್ಲಿ ವೈವಿಧ್ಯತೆ ರೂಢಿಸಿಕೊಂಡಿದ್ದಾರೆ. ತುಂಡು ಜಮೀನಿನಲ್ಲಿ ಹೂವು ತರಕಾರಿ ಹಣ್ಣು ಬೆಳೆದು ಗಮನ ಸೆಳೆದಿದ್ದಾರೆ. ರಾಜ್ಯ ಹೆದ್ದಾರಿಯಲ್ಲಿ ಪ್ರಯಾಣಿಸುವವರು ಚೆಂಡು ಹೂವಿನ ಹೊಲದಲ್ಲಿ ನಿಂತು ಫೋಟೊ ಕ್ಲಿಕ್ಕಿಸಿಕೊಂಡು ಸಂತಸ ವ್ಯಕ್ತಪಡಿಸುತ್ತಾರೆ.ಜಿ.ಎಚ್.ಹಾಲೇಶ್ ಗ್ರಾ.ಪಂ. ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.