ADVERTISEMENT

ಜಾಗತೀಕರಣದಿಂದ ಸಾಹಿತ್ಯದ ದನಿ ಕ್ಷೀಣ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 11:00 IST
Last Updated 26 ಸೆಪ್ಟೆಂಬರ್ 2011, 11:00 IST

ದಾವಣಗೆರೆ (ಕೆ.ಎಚ್. ಜಯಪ್ಪ ವೇದಿಕೆ): `ಜಾಗತೀಕರಣ, ಖಾಸಗೀಕರಣ, ಉದಾರೀಕರಣದ ಅಬ್ಬರದಲ್ಲಿ ಸಾಹಿತ್ಯದ ದನಿ ಕ್ಷೀಣಿಸುತ್ತಿದೆ ಎಂದು ಪ್ರೊ.ಎಸ್.ಬಿ. ರಂಗನಾಥ್ ಆಂತಕ ವ್ಯಕ್ತಪಡಿಸಿದರು.

ಚನ್ನಗಿರಿ ತಾಲ್ಲೂಕು ಕೆಂಪನಹಳ್ಳಿ-ವೆಂಕಟೇಶ್ವರಪುರದಲ್ಲಿ ಭಾನುವಾರ ನಡೆದ 13ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಸ್ಥಾನದಲ್ಲಿ ಅವರು ಮಾತನಾಡಿದರು.

ಜಾಗತೀಕರಣದಿಂದಾಗಿ ಆರ್ಥಿಕ ಪ್ರಗತಿಯ ನೆಪದಲ್ಲಿ ಅವರು ನಮ್ಮ ಪ್ರಕೃತಿ ಸಂಪತ್ತು, ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಆಪೋಷನ ತೆಗೆದುಕೊಳ್ಳುತ್ತಿದೆ. ಇವೆಲ್ಲದರ ಅಬ್ಬರದಲ್ಲಿ ಸಾಹಿತ್ಯದ ದನಿ ಕ್ಷೀಣಿಸುತ್ತಿದೆ. ಈಗ ನಾವು ಜಾಗೃತರಾಗದಿದ್ದರೆ ಮುಂದೆ ನಮ್ಮದೆನ್ನುವುದು ಇರದು ಎಂದು ಅವರು  ಎಚ್ಚರಿಸಿದರು.

ಪ್ರಾಥಮಿಕ  ಶಿಕ್ಷಣ ಮಗುವಿನ ಮಾತೃಭಾಷೆಯಲ್ಲಿದ್ದರೆ ಮಾತ್ರ ಪರಿಣಾಮಕಾರಿ ಎಂದು ಮನೋವಿಜ್ಞಾನ ಸಾರಿ ಹೇಳಿದೆ. ಹಾಗಿದ್ದರೂ ಪೋಷಕರು ಇಂಗ್ಲಿಷ್ ಭಾಷೆಯ ವ್ಯಾಮೋಹಕ್ಕೆ ಮರುಳಾಗಿ ತಮ್ಮ ಮಕ್ಕಳನ್ನು ಕಾನ್ವೆಂಟಿಗೆ ಸೇರಿಸುತ್ತಿದ್ದಾರೆ.

ಇಂಗ್ಲಿಷ್ ಅನ್ನು ಭಾಷೆಯಾಗಿ ಕಲಿಯಲು ಕನ್ನಡಿಗರ ತಕರಾರು ಇಲ್ಲ. ಆದರೆ, ಮಾಧ್ಯಮವಾಗಿ ಇಂಗ್ಲಿಷ್ ಬೇಡ. ಇದಕ್ಕೆ ಪೂರಕವಾಗಿ ಈಚೆಗಷ್ಟೇ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿರುವ ಡಾ.ಚಂದ್ರಶೇಖರ ಕಂಬಾರ ಅವರು ಕೂಡಾ, 1ರಿಂಧ 10ನೇ ತರಗತಿವರೆಗೆ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಿ, ಕನ್ನಡ ಮಾಧ್ಯಮ ಅಳವಡಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ರಂಗನಾಥ್ ನುಡಿದರು.

ಭಾಷಣದುದ್ದಕ್ಕೂ ಚನ್ನಗಿರಿ ತಾಲ್ಲೂಕಿನ ಇತಿಹಾಸ, ಸಾಹಿತ್ಯ, ಸಂಶೋಧನೆ, ಪ್ರಾಕೃತಿಕ ಪರಿಸರ ಕುರಿತು ಹೆಮ್ಮೆ ವ್ಯಕ್ತಪಡಿಸಿದ ರಂಗನಾಥ್, ಸಮೀಕ್ಷಾ ನುಡಿಯ ಕೊನೆಯಲ್ಲಿ ತಂದೆ,ತಾಯಿ, ಕುಟುಂಬ, ಗ್ರಾಮಸ್ಥರು ಮತ್ತು ಗೆಳೆಯರನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.