ADVERTISEMENT

ಜಾತ್ಯತೀತ ಮಂತ್ರ ಬೋಧಿಸಿದ ಕನಕದಾಸ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 9:15 IST
Last Updated 19 ಡಿಸೆಂಬರ್ 2012, 9:15 IST

ಹರಿಹರ: `ಸರ್ವರಿಗೂ ಸಮಬಾಳು ಸಮಪಾಲು ಎಂಬ ಜಾತ್ಯತೀತ ಮಂತ್ರವನ್ನು 15ನೇ ಶತಮಾನದಲ್ಲೇ ಬೋಧಿಸಿದ ಮಹಾನ್ ಸಮಾಜ ಚಿಂತಕ ದಾಸ ಶ್ರೇಷ್ಠ ಕನಕದಾಸರು' ಎಂದು ಮಾಜಿ ಸಚಿವ ಡಾ.ವೈ. ನಾಗಪ್ಪ ಬಣ್ಣಿಸಿದರು.

ನಗರದ ಮಹಾತ್ಮ ಗಾಂಧಿ ಮೈದಾನದಲ್ಲಿ ತಾಲ್ಲೂಕು ಕುರುಬ ಸಮಾಜದ ವತಿಯಿಂದ ಮಂಗಳವಾರ ನಡೆದ ಕನಕದಾಸರ 525ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆರೋಗ್ಯಮಾತೆ ಚರ್ಚ್‌ನ ಪಾದ್ರಿ ರೆವರೆಂಡ್ ಸ್ವ್ಯಾನಿ ಡಿ'ಸೋಜಾ ಅವರು ಮಾತನಾಡಿ, ಮಹಾಪುರುಷರು ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಅವರ ಜಯಂತಿ ಆಚರಿಸುತ್ತಾರೆ. ಪ್ರತಿಯೊಬ್ಬರ ಮನಸ್ಸಿನಲ್ಲಿ ಕನಕದಾಸರ ಆದರ್ಶಗಳು ಹುಟ್ಟಿದಾಗ ಉತ್ಸವ ಹಾಗೂ ಜಯಂತಿ ಸಾರ್ಥಕವಾಗುತ್ತದೆ ಎಂದರು.

ಮೌಲಾನಾ ಇಬ್ರಾಹಿಂ ಸಾಕಾಫಿ ಮಾತನಾಡಿ, ಧರ್ಮವನ್ನು ಕೇವಲ ಭಾಷಣಕ್ಕೆ ಸೀಮಿತವಾಗಿಸದೇ ಎಲ್ಲರೂ ಒಂದಾಗಿ ಶಾಂತಿಯಿಂದ ಬಾಳುವಂತೆ ಆಚರಣೆಯ ಮೂಲಕ ಪ್ರಯತ್ನಿಸಿದಾಗ ಬದುಕು ಸಾರ್ಥಕವಾಗುತ್ತದೆ ಎಂದರು.

ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಚರಪೀಠಾಧಿಪತಿ ಸಿದ್ದಲಿಂಗ ಸ್ವಾಮೀಜಿ, ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಮಡಿವಾಳ ಗುರುಪೀಠದ ಬಸವಮಾಚಿದೇವ ಸ್ವಾಮೀಜಿ, ಕೋಡಿಹಳ್ಳಿ ಆದಿ ಜಾಂಬವ ಮಠದ ಷಡಾಕ್ಷರಮುನಿ ದೇಶೀಕೇಂದ್ರ ಸ್ವಾಮೀಜಿ, 108 ಲಿಂಗೇಶ್ವರ ದೇವಸ್ಥಾನ ಹಠಯೋಗಿ ಶರಣ ಬಸವಲಿಂಗ ಸ್ವಾಮೀಜಿ, ರೇವಣಸಿದ್ದೇಶ್ವರ ಮಠದ ಮಂಜುನಾಥಯ್ಯ ಒಡೆಯರ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಕಮಲಾಪುರದ ಬಿ. ಷಣ್ಮುಖ ಅವರ ಕೃತಿ ಬಿಡುಗಡೆ ಹಾಗೂ ಪ್ರತಿಭಾ ಪುರಸ್ಕಾರ ನಡೆಯಿತು.
ಕುರುಬ ಸಮಾಜದ ಅಧ್ಯಕ್ಷ ಎಸ್. ರಾಮಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಶಾಸಕ  ಬಿ.ಪಿ. ಹರೀಶ್, ನಗರಸಭಾ ಅಧ್ಯಕ್ಷ  ವಿಶ್ವನಾಥ ಭೂತೆ, ಕೆ.ಪಿ. ಸಿದ್ದಬಸಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎಂ. ನಾಗೇಂದ್ರಪ್ಪ, ಟಿ. ಮುಕುಂದ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಐರಣಿ ಅಣ್ಣಪ್ಪ, ಎನ್.ಕೆ. ಹನುಮಂತಪ್ಪ, ದ್ಯಾಮಪ್ಪ, ದಾನಪ್ಪ, ಸೈಯದ್ ರೆಹಮಾನ್, ಕುಂಬಳೂರು ವಿರೂಪಾಕ್ಷಪ್ಪ ಹಾಗೂ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.