ADVERTISEMENT

ಜಿಲ್ಲೆಗೆ ಹಸಿರುಹೊನ್ನು ಹೊದಿಸುವಾಸೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 7:20 IST
Last Updated 20 ಜನವರಿ 2011, 7:20 IST

ದಾವಣಗೆರೆ: ತಾಲ್ಲೂಕಿನ ಜಿಲ್ಲಾ ಪಂಚಾಯ್ತಿ ಕ್ಷೇತ್ರ ಅಣಜಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಯೊಡ್ಡಿ ಗೆಲುವಿನ ನಗೆ ಬೀರಿರುವ ಚಿದಾನಂದ ಐಗೂರು ಅವರದ್ದು ಅನುಭವದ ರಾಜಕಾರಣ.ಅವರಿಗೆ ಚುನಾವಣೆಗಳೇನು ಹೊಸದಲ್ಲ. ಆದರೆ, ಜಿಲ್ಲಾ ಪಂಚಾಯ್ತಿಗೆ ಸದಸ್ಯರಾಗಿ ಪ್ರಥಮ ಪ್ರವೇಶ ಪಡೆದಿದ್ದಾರೆ. ಜತೆಗೆ, ಅಧ್ಯಕ್ಷ ಸ್ಥಾನ ಅಲಂಕರಿಸುವ ದೃಷ್ಟಿಯಿಂದ ಪಕ್ಷದ ವರಿಷ್ಠರ ಜತೆಗಿನ ಒಡನಾಟ, ಪಕ್ಷಕ್ಕೆ ಸಲ್ಲಿಸಿದ ಸೇವೆ ಬೆನ್ನೆಲುಬಾಗಿ ನಿಲ್ಲಲಿದೆ ಎಂಬ ವಿಶ್ವಾಸ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಚಿದಾನಂದ ಅವರನ್ನು ‘ಪ್ರಜಾವಾಣಿ’ ಮಾತಿಗೆಳೆದಾಗ ಅವರು ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ.

* ಕ್ಷೇತ್ರದ ಸಮಸ್ಯೆಗಳಿಗೆ ಯೋಜನೆ ಏನು?

ಕುಡಿಯುವ ನೀರು, ರಸ್ತೆ ಸಮಸ್ಯೆ ಇದೆ. ಜನರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಪ್ರಥಮ ಆದ್ಯತೆ ನೀಡುತ್ತೇನೆ. ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವೆ.

* ಅಧ್ಯಕ್ಷ ಗಾದಿ ಆಕಾಂಕ್ಷಿ ಹೌದಾ?
ಅಧ್ಯಕ್ಷ ಸ್ಥಾನ ‘ಸಾಮಾನ್ಯ’ ವರ್ಗಕ್ಕೆ ಮೀಸಲಾಗಿದ್ದು, ಸಹಜವಾಗಿಯೇ ಆಕಾಂಕ್ಷಿ ಆಗಿದ್ದೇನೆ.

* ತಮಗೆ ವರಿಷ್ಠರ ಅಭಯವಿದೆಯೇ?
ಕ್ಷೇತ್ರದಲ್ಲಿ ಬಿಜೆಪಿ ನಿರಂತರವಾಗಿ ಮೂರು ಬಾರಿ ಜಯ ಗಳಿಸಿದೆ. 20 ವರ್ಷದಿಂದ ಪಕ್ಷದ ಮುಖಂಡರ ಜತೆ ಒಡನಾಡಿಯಾಗಿದ್ದೇನೆ. ಹಾಗಾಗಿ, ಅಧ್ಯಕ್ಷ ಸ್ಥಾನವನ್ನು ತಾಲ್ಲೂಕಿನ ಈ ಕ್ಷೇತ್ರಕ್ಕೆ ನೀಡಬೇಕು ಎಂಬುದು ಕಾರ್ಯಕರ್ತರ ಒತ್ತಾಸೆಯೂ ಆಗಿದೆ. ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಬದ್ಧ. ಅಂತಿಮ ತೀರ್ಮಾನ ಅವರಿಗೆ ಬಿಟ್ಟದ್ದು.

* ಅಧ್ಯಕ್ಷ ಸ್ಥಾನ ಆಕಾಂಕ್ಷೆ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯ ಹೇಗೆ?

ಜಾತಿ ಅಥವಾ ಪಕ್ಷಭೇದಕ್ಕೆ ಅವಕಾಶವಿಲ್ಲ. ನಮಗೆ ಸಿಕ್ಕ ಸ್ಥಾನಕ್ಕೆ ಚ್ಯುತಿ ಬಾರದೆ ಸೇವೆ ಒದಗಿಸಬೇಕು. ಮಕ್ಕಳ ಶಿಕ್ಷಣಕ್ಕೆ ಒತ್ತು. ಜಿಲ್ಲೆಯಲ್ಲಿ ಹಸಿರಿನ ಪ್ರಮಾಣ ಹೆಚ್ಚಿಸುವ ಮೂಲಕ ಜಿಲ್ಲೆಗೆ ‘ಹಸಿರುಹೊನ್ನು’ ಹೊದಿಸುವಾಸೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.